ಟ್ವಿಟರ್ ಮೂಲಕ 20 ಕೋಟಿ ಇಮೇಲ್ ಹ್ಯಾಕ್: ಇದರಲ್ಲಿ ನಿಮ್ಮದೂ ಇರಬಹುದು, ಎಚ್ಚರವಹಿಸಿ
ಬೆಂಗಳೂರು, ಜನವರಿ 06: 200 ದಶಲಕ್ಷಕ್ಕೂ (20 ಕೋಟಿ) ಹೆಚ್ಚು ಟ್ವಿಟರ್ ಬಳಕೆದಾರರ ಇಮೇಲ್ ವಿಳಾಸಗಳನ್ನು ಹ್ಯಾಕರ್‌ಗಳು ಕದ್ದು ಆನ್‌ಲೈನ್ ಹ್ಯಾಕಿಂಗ್ ಫೋರಂನಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ಭದ್ರತಾ ಸಂಶೋಧಕರು ಬುಧವಾರ ಮಾಹಿತಿ ನೀಡಿದ್ದಾರೆ.
ಈ ಹ್ಯಾಕಿಂಗ್‌ನಿಂದ ಟಾರ್ಗೆಟೆಡ್ ಫಿಶಿಂಗ್ ಹಾಗೂ ಡಾಕ್ಸಿಂಗ್ ಮಾಡಬಹುದು ಎಂದು ಇಸ್ರೇಲಿ ಸೈಬರ್ ಸೆಕ್ಯುರಿಟಿ-ಮೇಲ್ವಿಚಾರಣಾ ಸಂಸ್ಥೆ ಹಡ್ಸನ್ ರಾಕ್‌ನ ಸಹ-ಸಂಸ್ಥಾಪಕ ಅಲೋನ್ ಗಾಲ್ ಲಿಂಕ್ಡ್‌ಇನ್‌ನಲ್ಲಿ ಬರೆದಿದ್ದಾರೆ.
'ಟಾರ್ಗೆಟೆಡ್ ಫಿಶಿಂಗ್' ಎಂದರೆ ಸಂಸ್ಥೆಯೊಳಗಿನ ನಿರ್ದಿಷ್ಟ ವ್ಯಕ್ತಿಗಳು ಅಥವಾ ಗುಂಪುಗಳನ್ನು ಗುರಿಯಾಗಿಸುವುದು.

'ಡಾಕ್ಸಿಂಗ್' ಎಂದರೆ ಅಂತರ್ಜಾಲದಲ್ಲಿ ನಿರ್ದಿಷ್ಟ ವ್ಯಕ್ತಿಯ ಬಗ್ಗೆ ಖಾಸಗಿ ಮಾಹಿತಿಯನ್ನು ಹುಡುಕುವುದು ಮತ್ತು ಪ್ರಕಟಿಸುವುದು.
ಈ ವಿಚಾರವಾಗಿ ಆತಂಕ ವ್ಯಕ್ತಪಡಿಸಿರುವ ಅಲೋನ್ ಗಾಲ್, ನಾನು ನೋಡಿದ ಅತ್ಯಂತ ಮಹತ್ವದ ಸೋರಿಕೆಗಳಲ್ಲಿ ಇದೂ ಒಂದು ಎಂದು ತಿಳಿಸಿದ್ದಾರೆ.
ಡಿಸೆಂಬರ್ 24 ರಂದು ಸಾಮಾಜಿಕ ಮಾಧ್ಯಮದಲ್ಲಿ ಗಾಲ್ ಮೊದಲ ಬಾರಿಗೆ ಈ ವರದಿಯನ್ನು ಪೋಸ್ಟ್ ಮಾಡಿದ್ದರು. ಈ ಬಗ್ಗೆ ಟ್ವಿಟ್ಟರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆ ದಿನಾಂಕದಿಂದ ಉಲ್ಲಂಘನೆಯ ಕುರಿತು ವಿಚಾರಣೆಗೆ ಪ್ರತಿಕ್ರಿಯಿಸಿಲ್ಲ. ಈ ಆರೋಪದ ಕುರಿತು ಟ್ವಿಟರ್ ಯಾವ ಕ್ರಮ ತೆಗೆದುಕೊಂಡಿದೆ ಎಂಬುದೂ ಗೊತ್ತಾಗಿಲ್ಲ. ಈ ಕುರಿತು ತನಿಖೆಯನ್ನಾದರೂ ಕೈಗೊಂಡಿದೆಯಾ ಎಂಬುದೂ ಸ್ಪಷ್ಟವಾಗಿಲ್ಲ ಎಂದು ಸುದ್ದಿಸಂಸ್ಥೆ 'ರಾಯಿಟರ್ಸ್' ವರದಿ ಮಾಡಿದೆ.
ಹ್ಯಾಕ್ ಮಾಡಿ ಫೋರಮ್‌ಗೆ ಹಾಕಿದ ಡೇಟಾ ಅಧಿಕೃತವಾಗಿದೆಯೇ ಅಥವಾ ಟ್ವಿಟ್ಟರ್‌ನಿಂದ ಬಂದಿದಿಯೇ ಎಂದು ಪರಿಶೀಲಿಸಲು ಸಾಧ್ಯವಾಗಿಲ್ಲ. ಡೇಟಾ ಕಾಣಿಸಿಕೊಂಡ ಹ್ಯಾಕರ್ ಫೋರಂನ ಸ್ಕ್ರೀನ್‌ಶಾಟ್‌ಗಳು ಆನ್‌ಲೈನ್‌ನಲ್ಲಿ ಬುಧವಾರ ಪ್ರಕಟಗೊಂಡಿವೆ.
ಬ್ರೀಚ್ ನೋಟಿಫಿಕೇಶ್ ಸೈಟ್ ಹ್ಯಾವ್ ಐ ಬೀನ್ ಪನ್ಡ್ ಸಂಸ್ಥಾಪಕ ಟ್ರಾಯ್ ಹಂಟ್, ಸೋರಿಕೆಯಾದ ಡೇಟಾವನ್ನು ವೀಕ್ಷಿಸಿದ್ದಾರೆ. ಈ ಡೇಟಾಗಳ ಮೂಲಕ ಟ್ವಿಟ್ಟರ್ ಎಂದು ತೋರಿಸುತ್ತದೆ ಎಂಬುದಾಗಿ ತಿಳಿಸಿದ್ದಾರೆ.
ಆದರೆ, ಈ ಕೃತ್ಯ ಎಸಗಿರುವ ಹ್ಯಾಕರ್‌ಗಳ ಗುರುತು ಅಥವಾ ಸ್ಥಳದ ಬಗ್ಗೆ ಯಾವುದೇ ಸುಳಿವು ಇಲ್ಲ. ಇದು 2021 ರ ಹಿಂದೆಯೇ ನಡೆದಿರಬಹುದು ಎಂದು ಹೇಳಲಾಗುತ್ತಿದೆ. ಕಳೆದ ವರ್ಷ ಎಲೋನ್ ಮಸ್ಕ್ ಅವರು ಕಂಪನಿಯ ಮಾಲೀಕತ್ವವನ್ನು ತೆಗೆದುಕೊಳ್ಳುವ ಮೊದಲು ಇದು ಸಂಭವಿಸಿರಬಹುದು ಎಂದು ಶಂಕೆಗಳು ವ್ಯಕ್ತವಾಗಿವೆ.
400 ಮಿಲಿಯನ್ ಇಮೇಲ್ ವಿಳಾಸಗಳು ಮತ್ತು ಫೋನ್ ಸಂಖ್ಯೆಗಳನ್ನು ಕಳವು ಮಾಡಲಾಗಿದೆ ಎಂಬ ಅಭಿಪ್ರಾಯಗಳನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.
ಯುರೋಪಿನ ಐರ್ಲೆಂಡ್‌ನಲ್ಲಿ ಪ್ರಧಾನ ಕಛೇರಿಯನ್ನು ಟ್ವಿಟ್ಟರ್ ಹೊಂದಿದೆ. ಐರ್ಲೆಂಡ್‌ನ ಡೇಟಾ ಪ್ರೊಟೆಕ್ಷನ್ ಕಮಿಷನ್ ಮತ್ತು ಯುಎಸ್ ಫೆಡರಲ್ ಟ್ರೇಡ್ ಕಮಿಷನ್ ಟ್ವಿಟ್ಟರ್ ಕಂಪನಿಯನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.
ಕಳೆದ ವರ್ಷ ಉದ್ಯಮಿ ಎಲಾನ್ ಮಸ್ಕ್ ಅವರು ಟ್ವಿಟ್ಟರ್ ಮಾಲೀಕತ್ವವನ್ನು ವಹಿಸಿಕೊಂಡಿದ್ದರು. ಆಗಿನಿಂದ ಟ್ವಿಟ್ಟರ್ ಬಗ್ಗೆ ವಿವಾದಗಳು ಕೇಳಿಬರುತ್ತಲೇ ಇವೆ. ಮೂರು ಸಾವಿರ ನೌಕರರನ್ನು ಎಲಾನ್ ಮಸ್ಕ್ ತೆಗೆದುಹಾಕಿದ್ದಾರೆ. ಇದರಲ್ಲಿ ಭಾರತೀಯರೂ ಸೇರಿದಂತೆ ಜಗತ್ತಿನ ಹಲವಾರು ಜನರಿದ್ದಾರೆ. ಟ್ವಿಟ್ಟರ್ ಸಿಇಒ ಸ್ಥಾನವನ್ನು ತ್ಯಜಿಸುವುದಾಗಿ ಮಸ್ಕ್ ಹೇಳಿಕೊಂಡಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಟ್ವಿಟ್ಟರ್ ಬಳಕೆದಾರರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದರು. ಹೆಚ್ಚಿನ ಬಳಕೆದಾರರು ಎಲಾನ್ ಮಸ್ಕ್ ಸಿಇಒ ಸ್ಥಾನದಲ್ಲಿ ಇರುವುದು ಬೇಡವೆಂದು ಹೇಳಿದ್ದರು.












Click it and Unblock the Notifications