ಟಿಕ್‌ಟಾಕ್ ಸೇರಿ 59 ಆಪ್‌ಗಳಿಗೆ ಭಾರತದಲ್ಲಿ ಶಾಶ್ವತ ನಿಷೇಧ
ನವದೆಹಲಿ, ಜನವರಿ 26: ಚೀನಾ ಆಕ್ರಮಣದ ವಿರುದ್ಧದ ಕ್ರಮವಾಗಿ ಸುಮಾರು 200 ಚೀನೀ ಆಪ್‌ಗಳನ್ನು ಭಾರತ ನಿಷೇಧಿಸಿದೆ. ಇವುಗಳಲ್ಲಿ ಟಿಕ್‌ಟಾಕ್, ವಿ ಚಾಟ್ ಸೇರಿದಂತೆ 59 ಆಪ್‌ಗಳ ನಿಷೇಧವನ್ನು ಶಾಶ್ವತಗೊಳಿಸಲಾಗಿದೆ. ಅಂದರೆ ಅವುಗಳು ಇನ್ನು ಮುಂದೆ ಯಾವುದೇ ರೀತಿ ಭಾರತದಲ್ಲಿ ಆರಂಭವಾಗಲಿ ಅವಕಾಶವಿಲ್ಲ.
2020ರ ಜೂನ್ ತಿಂಗಳಲ್ಲಿ ಭಾರತ ಮೊದಲ ಬಾರಿ ಆಪ್‌ಗಳ ನಿಷೇಧ ಕ್ರಮವನ್ನು ತೆಗೆದುಕೊಂಡಿತ್ತು. ಈಗ ಈ ನಿಷೇಧವು ಕಾಯಂ ಆಗಿ ಜಾರಿಯಾಗಲಿದೆ ಎಂದು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಮೂಲಗಳು ತಿಳಿಸಿವೆ.
ನಿಷೇಧಕ್ಕೆ ಒಳಗಾದ ಆಪ್‌ಗಳಿಂದ ಭಾರತವು ದತ್ತಾಂಶ ಸಂಗ್ರಹಣೆ ಸ್ವರೂಪ ಮತ್ತು ಅವುಗಳ ಬಳಕೆ ಬಗ್ಗೆ ವಿವರಗಳನ್ನು ಕೇಳಿತ್ತು. ಆದರೆ ಕಂಪೆನಿಗಳು ನೀಡಿರುವ ಪ್ರತಿಕ್ರಿಯೆಗಳು ಸರ್ಕಾರಕ್ಕೆ ತೃಪ್ತಿ ತಂದಿಲ್ಲ. ಹೀಗಾಗಿ ಈ ಆಪ್‌ಗಳಿಗೆ ಕಳೆದ ವಾರ ನೋಟಿಸ್ ಜಾರಿ ಮಾಡಿದೆ.

ಪಬ್‌ಜಿ ಮೊಬೈಲ್‌ನಂತಹ ಬಹು ಜನಪ್ರಿಯ ಸ್ಮಾರ್ಟ್‌ಫೋನ್ ಗೇಮ್‌ಗಳು ಭಾರತಕ್ಕೆಂದೇ ಪ್ರತ್ಯೇಕ ಆವೃತ್ತಿಯನ್ನು ಆರಂಭಿಸುವ ಮೂಲಕ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಿದ್ದವು. ಭಾರತದಲ್ಲಿ ಹೊಸದಾಗಿ ಸಂಸ್ಥೆ ಆರಂಭಿಸಲು ನೇಮಕಾತಿಗಳನ್ನು ಮಾಡುವ ಮೂಲಕ ಪಬ್‌ಜಿ ಮೊಬೈಲ್ ಇಂಡಿಯಾದ ಸ್ಥಾಪನೆಯನ್ನು ಕಳೆದ ನವೆಂಬರ್‌ನಲ್ಲಿ ಘೋಷಿಸಲಾಗಿತ್ತು. ಆದರೆ ಅದಕ್ಕೆ ಸಚಿವಾಲಯ ಅನುಮತಿ ನೀಡಿಲ್ಲ ಎನ್ನಲಾಗಿದೆ.
ಈ ಬೆಳವಣಿಗೆಗಳನ್ನು ಗಮನಿಸಿದರೆ ಪಬ್‌ಜಿ ಗೇಮ್ ಭಾರತಕ್ಕೆ ಸಧ್ಯದ ಪರಿಸ್ಥಿತಿಯಲ್ಲಿ ಮರಳಿ ಬರುವ ಸಂಭವವಿಲ್ಲ. ಹಾಗೆಯೇ ಟಿಕ್‌ಟಾಕ್‌ನ ಭಾರತದ ಕಂಪೆನಿ ಬೈಟ್‌ಡ್ಯಾನ್ಸ್ ನೇಮಿಸಿಕೊಂಡ ನೂರಾರು ಉದ್ಯೋಗಿಗಳ ಭವಿಷ್ಯವೂ ಡೋಲಾಯಮಾನವಾಗಿದೆ. ಟಿಕ್‌ಟಾಕ್ ಮೇಲೆ ಭಾರತದ ಶಾಶ್ವತ ನಿಷೇಧ ಸಂಪೂರ್ಣವಾಗಿ ಜಾರಿಯಾದ ಬಳಿಕವೂ ಇದು ಭಾರತದಲ್ಲಿ ಪ್ರತ್ಯೇಕವಾಗಿ ಕಾರ್ಯಾಚರಣೆ ಮಾಡಲು ಸಾಧ್ಯವಾಗಲಿದೆಯೇ ಎನ್ನುವುದು ಸ್ಪಷ್ಟವಾಗಿಲ್ಲ.












Click it and Unblock the Notifications