Silver Price Prediction 2026: ಶ್ವೇತ ಲೋಹದ ದರ 210% ಹೆಚ್ಚಳ, ದರ ನಿಯಂತ್ರಿಸುವವರು ಯಾರು?
ಬೆಂಗಳೂರು: ಜಾಗತಿಕವಾಗಿ ಚಿನ್ನದ ಬೆಲೆ ಏರಿಕೆಯ ಸ್ಥಾನವನ್ನು ಕ್ರಮೇಣ ಬೆಳ್ಳಿ ಲೋಹವು ಪಡೆದುಕೊಳ್ಳುತ್ತಿದೆ. ಅಂದರೆ ಅಷ್ಟರಮಟ್ಟಿಗಿನ ತ್ವರಿತ ಹೆಚ್ಚಳವು ಬೆಳ್ಳಿ ದರದಲ್ಲಿ ಕಂಡು ಬಂದಿದೆ. ಕಳೆದ ಒಂದೇ ವರ್ಷದಲ್ಲಿ ನೂರಾರು ಪ್ರತಿಶತದಷ್ಟು ಬೆಲೆ ಏರಿಕೆ ಮಾಡಿಕೊಳ್ಳಲಾಗಿದೆ. ಯಾಕಿಷ್ಟು ಹೆಚ್ಚಳ, ಇದರ ದರ ನಿಯಂತ್ರಿಸುವ ಅದೃಶ್ಯ ಶಕ್ತಿ ಯಾವುದು? 2026ರಲ್ಲಿ ಬೆಳ್ಳಿ ಲಭ್ಯತೆ-ಕೊರತೆ ಸ್ಥಿತಿಗತಿ ವಿವರ ನಿಮ್ಮ ಮುಂದಿದೆ.
ಭಾರತ ಸೇರಿದಂತೆ ವಿಶ್ವ ಮಾರುಕಟ್ಟೆಯಲ್ಲಿ ಬೆಳ್ಳಿ ಇತಿಹಾಸ ನಿರ್ಮಿಸಿದೆ. ಬೆಳ್ಳಿ ಪ್ರತಿ ಔನ್ಸ್‌ಗೆ (01 ಔನ್ಸ್ 31ಗ್ರಾಂಗೆ ಸಮ) 88.37 ಡಾಲರ್ ನಂತೆ ವಹಿವಾಟು ನಡೆಸಿ ಬೆಳ್ಳಿಯು ಸಾರ್ವಕಾಲಿಕ ದಾಖಲೆ ಬರೆದಿದೆ. ಹಳೆಯ ಬೆಳ್ಳಿ ದರ ಏರಿಕೆ ದಾಖಲೆಗಳು ಮುರಿದಿದೆ. ಕೇವಲ 13 ತಿಂಗಳಲ್ಲಿ ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ 210 ರಷ್ಟು ಹೆಚ್ಚಳವಾಗಿ ಹೂಡಿಕೆದಾರರಿಗೆ ಅಚ್ಚರಿ ಮೂಡಿಸಿದೆ ಜೊತೆಗೆ ವರದಾನವಾಗಿಯೂ, ಬೃಹತ್ ಲಾಭವನ್ನು ತಂದುಕೊಟ್ಟಿದೆ.

2026 ರಲ್ಲಿ ಬೆಳ್ಳಿ ಕೊರತೆ ಅಗುತ್ತಾ?
ಬೆಳ್ಳಿ ಎಂದರೆ ಕೈಗೆಟುವ ಮತ್ತು ಯಾವಾಗ ಬೇಕಾದರೂ ಕೊಳ್ಳಬಹುದಾಗಿದ್ದ ಲೋಹವಾಗಿತ್ತು. ಹೀಗಾಗಿಯೇ ಅದಕ್ಕಷ್ಟು ಪ್ರಾಮುಖ್ಯತೆ ಸಿಗುತ್ತಿರಲಿಲ್ಲ. ಆದರೆ ಅದರ ದರ ಕಳೆದ ಒಂದು ವರ್ಷದಲ್ಲಿ ಹೆಚ್ಚಾಗಿದ್ದು ಗಮನಿಸಿದರೆ ಚಿನ್ನ ಮತ್ತು ಪ್ಲಾಟಿನಂಗಳನ್ನು ಬೆಳ್ಳಿ ಹಿಂದಿಕ್ಕಿ, ಅಮೂಲ್ಯ ಲೋಹವಾಗಿ ಹೊರ ಹೊಮ್ಮಿದೆ. ಹೂಡಿಕೆದಾರರು ಅದರ ಮೇಲೆ ಹೂಡಿಕೆ ಮಾಡಲು ಮುಗಿಬೀಳುವಂತಾಗಿದೆ. ಹಾಗಾದರೆ 2026 ರಲ್ಲಿ ಬೆಳ್ಳಿ ಕೊರತೆ ಎಷ್ಟು ಉಂಟಾಗಲಿದೆಯಾ? ಬೆಳ್ಳಿ ದರಗಳನ್ನು ನಿಯಂತ್ರಿಸುವ ಆ ಅದೃಶ್ಯ ಶಕ್ತಿ ಯಾರು? ಎಂಬುದು ನಿಮ್ಮ ಅನುಮಾನವಾದರೆ ಅದಕ್ಕೆ ಉತ್ತರ ಇಲ್ಲಿದೆ.
ಬೆಳ್ಳಿ ಕೊರತೆ, ದರ ಮತ್ತಷ್ಟು ಹೆಚ್ಚಳ ಸಂಭವ
ಚಿನ್ನ-ಬೆಳ್ಳಿ ಮಾರುಕಟ್ಟೆ ವಿಶ್ಲೇಷಕರ ಪ್ರಕಾರ, 2026 ರಲ್ಲಿ ಜಾಗತಿಕವಾಗಿ ಬೆಳ್ಳಿಯ ಕೊರತೆ ಸೃಷ್ಟಿಯಾಗುವ ಸಾಧ್ಯತೆಗಳು ಇವೆ ಎನ್ನಲಾಗಿದೆ. 2025 ರಲ್ಲಿ ದಾಖಲಾಗಿದ್ದ 110-120 ಮಿಲಿಯನ್ ಔನ್ಸ್‌ಗಳಿಗಿಂತ ಹೆಚ್ಚಿನ ಕೊರತೆ ಉಂಟಾಗುವ ನಿರೀಕ್ಷೆ ಇದೆ. ಈ ವರ್ಷ 2026 ರಲ್ಲಿ 130 ರಿಂದ 150 ಮಿಲಿಯನ್ ಔನ್ಸ್ ನಷ್ಟು ಬೆಳ್ಳಿ ಕೊರತೆಯ ವಾತಾವರಣ ಸೃಷ್ಟಿಯಾಗಬಹುದು ಎಂದು ಸರಕು ತಜ್ಞರು ಮುನ್ಸೂಚನೆ ನೀಡಿದ್ದಾರೆ. ದೇಶದ ಮಾರುಕಟ್ಟೆಗಳಲ್ಲಿ ಬೇಡಿಕೆ ನಿರಂತರವಾಗಿ ಹೆಚ್ಚಾಗುತ್ತಿದೆ. ಆದರೆ ಗಣಿ ಉತ್ಪಾದನೆಯು ಅಷ್ಟು ವೇಗವಾಗಿ ಬೆಳೆಯುತ್ತಿಲ್ಲ. ಇದು ಸಹ ಬೆಳ್ಳಿ ಕೊರತೆ ಸಮಸ್ಯೆ ಎದುರಾಗಲು ಕಾರಣವಾಗುತ್ತದೆ.
ಬೆಳ್ಳಿ ಬಳಕೆ, ಬೇಡಿಕೆ ಹೆಚ್ಚಳಕ್ಕೆ ಕಾರಣವೇನು?
ಚಿನ್ನದ ಬೆಲೆಯು ಕಳೆದ ಒಂದು ವರ್ಷದಲ್ಲಿ ಊಹೆಗೂ ನಿಲುಕದಂತೆ ಹೆಚ್ಚಾಗಿದೆ. ಇದೇ ವೇಳೆ ಬೆಳ್ಳಿ ದರ ಇಷ್ಟು ವೇಗವಾಗಿ ಹೆಚ್ಚಾಗುತ್ತದೆ ಎಂದು ಭಾವಿಸಿರಲಿಲ್ಲ. ಅವುಗಳ ಬೆಲೆಯು ಅನಿರೀಕ್ಷಿತ ಮಟ್ಟ ತಲುಪಿವೆ. ದಾಖಲೆಯ ಮಟ್ಟದಲ್ಲಿ ಲೋಹಗಳ ಬಳಕೆ ಆಗುತ್ತಿದೆ. ಅದರಲ್ಲೂ ಬೆಳ್ಳಿಯು ಸೌರಶಕ್ತಿ ವಲಯ, ವಿದ್ಯುತ್ ವಾಹನಗಳು, ಕೃತಕ ಬುದ್ಧಿಮತ್ತೆ ಮತ್ತು ರಕ್ಷಣಾ ಎಲೆಕ್ಟ್ರಾನಿಕ್ಸ್ ಮತ್ತು ಹೈಟೆಕ್ ಉತ್ಪಾದನಾ ಕೈಗಾರಿಕೆಗಳಲ್ಲಿ ದಾಖಲೆಯ ಮಟ್ಟದಲ್ಲಿ ಬಳಕೆ ಆಗಿದೆ ಎಂದು ವರದಿ ಆಗಿದೆ.
ಇನ್ನೊಂದೆಡೆ ಚೀನಾ, ಮೆಕ್ಸಿಕೊ ಹಾಗೂ ಪೆರುದಂತಹ ಪ್ರಮುಖ ದೇಶಗಳಲ್ಲಿ ಹೊಸ ಗಣಿಗಳಲ್ಲಿ ಕೆಲಸ ನಿಧಾನವಾಗಿದೆ. ಈಗಾಗಲೇ ಪತ್ತೆಯಾಗಿದ್ದ ಹಳೆಯ ಗಣಿಗಳಲ್ಲಿ ಚಿನ್ನ ಉತ್ಪಾದನೆ ಪ್ರಮಾಣ ಇಳಿಕೆ ಆಗಿದೆ. ಇದು ಪೂರೈಕೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹೀಗಾಗಿಯೇ ಬೇಡಿಕೆ ಹೆಚ್ಚಾಗಿ ದರವು ತಿಂಗಳಿನಿಂದ ತಿಂಗಳಿಗೆ ಗಗನಕ್ಕೇರುತ್ತಿದೆ. ಈ ಪ್ರವೃತ್ತಿ 2026ರಲ್ಲೂ ಮುಂದುವರಿಯುವ ನಿರೀಕ್ಷೆ ಇದೆ.
ಬೆಳ್ಳಿ ದರ ನಿಯಂತ್ರಿಸುವವರು ಯಾರು?
ಬೆಳ್ಳಿಯ ದರಗಳನ್ನು ನಿಯಂತ್ರಿಸುವ ಅದೃಶ್ಯ ಶಕ್ತಿ ಯಾವುದೆಂದರೆ ಭೌತಿಕ ಬೇಡಿಕೆ, ಮಾರುಕಟ್ಟೆ ಪೂರೈಕೆಯ ಸಂಯೋಜನೆಯಾಗಿದೆ. ಅಂದರೆ ಬೆಳ್ಳಿಗೆ ಭೌತಿಕ ಬೇಡಿಕೆ (ಬೆಳ್ಳಿ ಬಾರ್‌ಗಳು, ನಾಣ್ಯಗಳು, ಕೈಗಾರಿಕಾ ಬಳಕೆ) ತೀವ್ರಗತಿಯಲ್ಲಿ ಏರಿಕೆ ಆಗುತ್ತಿದೆ. ಭವಿಷ್ಯ ಮತ್ತು ಇಟಿಎಫ್ ವ್ಯಾಪಾರವು ಬೆಲೆ ಏರಿಳಿತವನ್ನು ವೇಗವಾಗಿ ಹೆಚ್ಚಿಸುತ್ತಿದೆ. ಭವಿಷ್ಯದ ಮಾರುಕಟ್ಟೆಯಲ್ಲಿ ಸಣ್ಣ ಹೂಡಿಕೆಯೊಂದಿಗೆ ದೊಡ್ಡ ಪ್ರಮಾಣದಲ್ಲಿ ಬೆಳ್ಳಿಯ ಮೇಲೆ ಹೂಡಿಕೆ ಸಾಧ್ಯವೇ? ಅಥವಾ ಇಲ್ಲವೇ? ಎಂಬ ಅನುಮಾನ ಕಾಡತೊಡಗಿದೆ. ಇದರ ಬೆನ್ನಲ್ಲೆ ಆಗಾಗ ನಿರ್ಮಾಣವಾಗುತ್ತಿರುವ ಯುದ್ಧಗಳು, ರಾಜಕೀಯ ಬೆಳವಣಿಗೆಗಳು ಸಹ ಬೆಲೆ ಹೆಚ್ಚಳಕ್ಕೆ ಪೂರಕ ಕಾರಣಗಳಾಗಿವೆ.
ಚಿನ್ನ-ಬೆಳ್ಳಿ ಕೇವಲ ಲೋಹಗಳಷ್ಟೇ ಅಲ್ಲ
ಇನ್ನೂ ಡಾಲರ್ ಮೌಲ್ಯ ದುರ್ಬಲಗೊಂಡಿದೆ. ರೂಪಾಯಿ ಮೌಲ್ಯವು ಕುಸಿದಿದೆ. ಬಡ್ಡಿ ದರಗಳ ಮೇಲಿನ ಅನಿಶ್ಚಿತತೆ, ಕೇಂದ್ರ ಬ್ಯಾಂಕ್ ನೀತಿಗಳು ಮತ್ತು ಅಂತಾರಾಷ್ಟ್ರೀಯ ಉದ್ವಿಗ್ನ ಪರಿಸ್ಥಿತಿಗಳು ಬೆಳ್ಳಿಯ ದರಗಳ ಮೇಲೆ ತೀವ್ರ ಪರಿಣಾಮ ಬೀರಿವೆ ಎಂದು ಮಾರುಕಟ್ಟೆ ವಿಶ್ಲೇಷಕರು ವಿಶ್ಲೇಷಿಸಿದ್ದಾರೆ. ಚಿನ್ನ-ಬೆಳ್ಳಿಯು ಕೇಲವ ಲೋಹಗಳಷ್ಟೇ ಅಲ್ಲ. ಅವು ಜಾಗತಿಕ ಆರ್ಥಿಕತೆಗೆ, ಆರ್ಥಿಕ ಭಯಕ್ಕೆ ಕನ್ನಡಿಯಾಗಲಿದೆ ಎಂದು ಹಲವರು ಭವಿಷ್ಯ ನುಡಿಯುತ್ತಿದ್ದಾರೆ.












Click it and Unblock the Notifications