ಶಓಮಿ ಸಂಸ್ಥೆ ಬ್ಯಾಂಕ್ ಖಾತೆ ಜಪ್ತಿ, ತಡೆ ನೀಡದ ಹೈಕೋರ್ಟ್
ಬೆಂಗಳೂರು ಅ.6. ಚೀನಾ ಮೂಲದ ಮೊಬೈಲ್ ಕಂಪನಿ ಶಓಮಿ ಸಂಸ್ಥೆಯ ಬ್ಯಾಂಕ್ ಖಾತೆಗಳಲ್ಲಿದ್ದ 5,551 ಕೋಟಿ ರೂ. ಜಪ್ತಿಗೆ ತಡೆ ನೀಡಲು ಹೈಕೋರ್ಟ್ ಸ್ಪಷ್ಟವಾಗಿ ನಿರಾಕರಿಸಿದೆ.
ಅಲ್ಲದೆ, ತಡೆ ನೀಡಬೇಕೆಂದರೆ ಬ್ಯಾಂಕ್ ಖಾತರಿ ಒದಗಿಸಬೇಕು ಎಂದು ಸೂಚನೆ ನೀಡಿದೆ. ಅದಕ್ಕೆ ಉತ್ತರಿಸುವುದಾಗಿ ಸಂಸ್ಥೆ ಹೇಳಿದ ಹಿನ್ನೆಲೆಯಲ್ಲಿ ನ್ಯಾಯಾಲಯ ವಿಚಾರಣೆಯನ್ನು ಅ.14ಕ್ಕೆ ಮುಂದೂಡಿದೆ.
ಜಾರಿ ನಿರ್ದೇಶನಾಲಯ (ಇಡಿ) ಹೊರಡಿಸಿದ್ದ ಆದೇಶ ಊರ್ಜಿತಗೊಳಿಸಿ ಸಕ್ಷಮ ಪ್ರಾಧಿಕಾರ ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ.
ಜಾರಿ ನಿರ್ದೇಶನಾಲಯದ ಆದೇಶ ಊರ್ಜಿತಗೊಳಿಸಿದ್ದ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಅಡಿ ನೇಮಕಗೊಂಡಿರುವ ಸಕ್ಷಮ ಪ್ರಾಧಿಕಾರದ ಕ್ರಮ ಪ್ರಶ್ನಿಸಿ ಶಓಮಿ ಟೆಕ್ನಾಲಜಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ಎಸ್. ಸಂಜಯಗೌಡ ಅವರಿದ್ದ ರಜಾಕಾಲದ ಪೀಠ ವಿಚಾರಣೆ ನಡೆಸಿತು.
ಬಳಿಕ ನ್ಯಾಯಾಲಯ ಪ್ರತಿವಾದಿಗಳಾದ ಹಣಕಾಸು ಸಚಿವಾಲಯ, ಇಡಿ ಹಾಗೂ ಸಕ್ಷಮ ಪ್ರಾಧಿಕಾರಕ್ಕೆ ನೋಟಿಸ್ ಜಾರಿಗೊಳಿಸಿ, ವಿಚಾರಣೆ ಮುಂದೂಡಿತು.
ಮಧ್ಯಂತರ ಪರಿಹಾರವಾಗಿ ಸಕ್ಷಮ ಪ್ರಾಧಿಕಾರದ ಆದೇಶಕ್ಕೆ ತಡೆ ನೀಡಬೇಕೆಂಬ ಅರ್ಜಿದಾರ ಸಂಸ್ಥೆಯ ಪರ ವಕೀಲರ ಮನವಿಯನ್ನು ಸ್ಪಷ್ಟವಾಗಿ ತಳ್ಳಿಹಾಕಿತು.

ಹೈಕೋರ್ಟ್ ಹಿಂದಿನ ಆದೇಶವೇನು?: ಶಓಮಿ ಸಂಸ್ಥೆಗೆ ಸೇರಿದ 5,551.27 ಕೋಟಿ ರೂ. ಜಪ್ತಿಗೆ ಕಳೆದ ಏ.29ರಂದು ಜಾರಿ ನಿರ್ದೇಶನಾಲಯ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿಯನ್ನು ಜುಲೈ ತಿಂಗಳಿನಲ್ಲಿ ಇತ್ಯರ್ಥಪಡಿಸಿದ್ದ ಹೈಕೋರ್ಟ್ ಏಕಸದಸ್ಯಪೀಠ, ಶಓಮಿ ಅರ್ಜಿ ಸಲ್ಲಿಸಿರುವುದು ತರಾತುರಿಯ ಕ್ರಮವಾಗಿದೆ.
ಅರ್ಜಿದಾರ ಕಂಪನಿಯ ಬ್ಯಾಂಕ್ ಖಾತೆ ಜಪ್ತಿಗೆ ಆದೇಶ ಹೊರಡಿಸಿರುವ ಅಧಿಕಾರಿ 30 ದಿನಗಳ ಒಳಗೆ ಆ ಆದೇಶವನ್ನು ಫೆಮಾ ಸೆಕ್ಷನ್ 37ಎ (2) ಅಡಿಯಲ್ಲಿ ಹಣಕಾಸು ಸಚಿವಾಲಯದಿಂದ ನೇಮಕಗೊಂಡ ಸಕ್ಷ ಮ ಪ್ರಾಧಿಕಾರದ ಮುಂದೆ ಇಡಬೇಕು. ಸಕ್ಷಮ ಪ್ರಾಧಿಕಾರ ಎಲ್ಲ ಬಾಧಿತರ ಅಹವಾಲು ಆಲಿಸಿ 60 ದಿನಗಳ ಒಳಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಆದೇಶಿಸಿತ್ತು.
ಅರ್ಜಿ ಇತ್ಯರ್ಥಪಡಿಸುವ ಸಂದರ್ಭದಲ್ಲಿ ಜಪ್ತಿಯಾದ ಬ್ಯಾಂಕ್ ಖಾತೆಗಳಲ್ಲಿರುವ ಹಣವನ್ನು ಕೇವಲ ದೈನಂದಿನ ಚಟುವಟಿಕೆಗೆ ಬಳಕೆ ಮಾಡಲು ಶಓಮಿ ಸಂಸ್ಥೆಗೆ ಅವಕಾಶ ನೀಡಿ ಮೇ 5ರಂದು ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶ ಪ್ರಕರಣದ ಕುರಿತು ಸಕ್ಷಮ ಪ್ರಾಧಿಕಾರ ಆದೇಶ ಹೊರಡಿಸುವವರೆಗೆ ಅಸ್ತಿತ್ವದಲ್ಲಿರಲಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತ್ತು.

ಪ್ರಕರಣದ ಹಿನ್ನೆಲೆ: ಚೀನಾ ಮೂಲದ ಶಓಮಿ ಬಳಗದ ಅಧೀನ ಕಂಪನಿಯಾಗಿರುವ ಶಓಮಿ ಟೆಕ್ನಾಲಜಿ ಇಂಡಿಯಾಗೆ ಸೇರಿದ 5,551.27 ಕೋಟಿ ರೂ. ಮುಟ್ಟುಗೋಲು ಹಾಕಿಕೊಳ್ಳಲು ಏ.29ರಂದು ಇಡಿ ಆದೇಶ ಹೊರಡಿಸಿತ್ತು. ರಾಯಧನದ ಸೋಗಿನಲ್ಲಿ ಒಂದು ಶಓಮಿ ಗ್ರೂಪ್ ಘಟಕ ಸೇರಿ ಮೂರು ವಿದೇಶಿ ಮೂಲದ ಸಂಸ್ಥೆಗಳಿಗೆ ಹಣವನ್ನು ಅಕ್ರಮವಾಗಿ ರವಾನೆ ಮಾಡಲಾಗಿದೆ ಎಂಬ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿತ್ತು. ಜತೆಗೆ, ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಅಕ್ರಮವಾಗಿ ಹಣ ಪಾವತಿಸಲಾಗಿದೆ ಎಂಬ ಆರೋಪ ಕುರಿತು ತನಿಖೆಯನ್ನೂ ಆರಂಭಿಸಿತ್ತು. ಇದರಿಂದ, ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು.
ಶಓಮಿ ಮೊಬೈಲ್, ಸ್ಮಾರ್ಟ್ ಫೋನ್‌ಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಕಂಪನಿ. ಇದು ಭಾರತದಲ್ಲಿ 2014ರಿಂದ ಕಾರ್ಯ ನಿರ್ವಹಿಸುತ್ತಿದೆ. ಶಓಮಿ ಇಂಡಿಯಾ ಕಂಪನಿಯು ಭಾರತದಲ್ಲಿ ಗಳಿಸಿದ ಹಣವನ್ನು ರಾಯಧನ ನೀಡುವ ನೆಪದಲ್ಲಿ ವಿದೇಶಿ ಕಂಪನಿಗಳಿಗೆ ಅಕ್ರಮವಾಗಿ ವರ್ಗಾವಣೆ ಮಾಡುತ್ತಿದೆ. ಆದ್ದರಿಂದ, ಇದು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) 1999ರ ನಿಯಮಗಳನ್ನು ಉಲ್ಲಂಘನೆ ಎಂದು ಜಾರಿ ನಿರ್ದೇಶನಾಲಯ ಆರೋಪಸಿದೆ.
ಇದೇ ಆರೋಪಗಳ ಸಂಬಂಧ ಬೆಂಗಳೂರಿನ ಇ.ಡಿ ಕಚೇರಿಯ ಸಹಾಯಕ ನಿರ್ದೇಶಕ ಎನ್. ಸೋಮಶೇಖರ್, 'ಶಓಮಿ ಕಂಪನಿಯು ಬೆಂಗಳೂರು ನಗರದಲ್ಲಿನ ಸಿಟಿ ಬ್ಯಾಂಕ್, ಐಡಿಬಿಐ ಬ್ಯಾಂಕ್, ಡ್ವಾಯಿಷ್ ಬ್ಯಾಂಕ್, ಎಚ್‌ಎಸ್‌ಬಿಸಿ ಬ್ಯಾಂಕ್‌ಗಳ ಚಾಲ್ತಿ ಖಾತೆ ಮತ್ತು ನಿಶ್ಚಿತ ಠೇವಣಿಗಳಲ್ಲಿ ಹೊಂದಿರುವ 5,551.27 ಬೃಹತ್ ಮೊತ್ತವನ್ನು ಜಪ್ತಿ ಮಾಡಲು ಇದೇ ಏಪ್ರಿಲ್ 29ರಂದು ಆದೇಶಿಸಿದ್ದರು. ಅದನ್ನು ಪ್ರಶ್ನಿಸಿ ಕಂಪನಿ ಹೈಕೋರ್ಟ್ ಮೊರೆ ಹೋಗಿತ್ತು.












Click it and Unblock the Notifications