ಸತತ 9ನೇ ದಿನವೂ ಪೆಟ್ರೋಲ್, ಡೀಸೆಲ್ ದರ ಏರಿಕೆ
ನವದೆಹಲಿ, ಫೆಬ್ರವರಿ 17: ಸರ್ಕಾರಿ ಸ್ವಾಮ್ಯದ ಮೂರು ತೈಲ ಕಂಪನಿಗಳು ಬುಧವಾರ(ಫೆ.17) ಮತ್ತೊಮ್ಮೆ ತೈಲ ದರ ಏರಿಕೆ ಮಾಡಿದ್ದು, ಸತತವಾಗಿ ಒಂಭತ್ತನೇ ದಿನದಂದು ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದೆ. ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗುತ್ತಲೇ ಇದೆ. ಸರಿ ಸುಮಾರು 23-25 ಪೈಸೆಯಂತೆ ಪೆಟ್ರೋಲ್ ಏರಿಕೆಯಾಗಿದ್ದರೆ, ಡೀಸೆಲ್ ಬೆಲೆ 24-26 ಪೈಸೆ ಪ್ರತಿ ಲೀಟರ್ ನಂತೆ ಏರಿಕೆ ಕಂಡಿದೆ. ಒಟ್ಟಾರೆ 9 ದಿನಗಳಲ್ಲಿ ಪೆಟ್ರೋಲ್ 2.61 ರು ಹಾಗೂ ಡೀಸೆಲ್ 3.16 ರು ಏರಿಕೆ ಕಂಡಿದೆ.
ದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 89.54 ರೂಪಾಯಿಗೆ ತಲುಪಿದೆ. ಡೀಸೆಲ್ ದರವು ಪ್ರತಿ ಲೀಟರ್‌ಗೆ 79.95 ರೂಪಾಯಿಗೆ ಮುಟ್ಟಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪ್ರಕಟಿಸಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

ದಾಖಲೆ ಪ್ರಮಾಣದಲ್ಲಿ ಇಂಧನ ದರ ಏರಿಕೆಗೆ ಅನೇಕ ಕಾರಣಗಳಿದ್ದರೂ ಸದ್ಯಕ್ಕೆ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯವೇ ಬೆಲೆ ಏರಿಕೆಗೆ ಕಾರಣ ಎಂದು ತಿಳಿದು ಬಂದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 62.95 ಯುಎಸ್ ಡಾಲರ್ ನಷ್ಟಾಗಿದೆ. ಇಂಧನ ಬೇಡಿಕೆ ಸುಧಾರಣೆಯ ನಿರೀಕ್ಷೆಯಲ್ಲಿ ತೈಲ ಸಂಸ್ಥೆಗಳು ಪೂರೈಕೆ ತಡೆ ಹಿಡಿದಿರುವುದು ಜಾಗತಿಕವಾಗಿ ತೈಲ ಬೆಲೆಯಲ್ಲಿ ಭಾರಿ ವ್ಯತ್ಯಾಸಕ್ಕೆ ಕಾರಣವಾಗಿದೆ.
ಈ ನಡುವೆ ಇಂಧನ ಮೇಲಿನ ಅಬಕಾರಿ ಸುಂಕ ಇಳಿಕೆ ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸ್ಪಷ್ಟಪಡಿಸಿವೆ. ಕೆಲ ರಾಜ್ಯಗಳು ಮಾತ್ರ ತಮ್ಮ ಪಾಲಿನ ವ್ಯಾಟ್, ಸೆಸ್ ಕಡಿಮೆ ಮಾಡಿ ಜನತೆಗೆ ನೆಮ್ಮದಿ ಸುದ್ದಿ ನೀಡಿವೆ. ರಾಜ್ಯಗಳು ಹಾಕುವ ಸೆಸ್ ಕಡಿಮೆ ಮಾಡುವುದರಿಂದ ಕನಿಷ್ಠ 2 ರಿಂದ 5 ರು ತನಕವಾದರೂ ಪ್ರತಿ ಲೀಟರ್ ಮೇಲಿನ ಬೆಲೆ ಹೊರೆಯನ್ನು ತಗ್ಗಿಸಬಹುದಾಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಮಾಹಿತಿ ಈ ಕೆಳಗಿದೆ.
ನಗರ-ಪೆಟ್ರೋಲ್- ಡೀಸೆಲ್ ರು/ಲೀಟರ್
ದೆಹಲಿ: ಪೆಟ್ರೋಲ್ 89.54 ; ಡೀಸೆಲ್ 79.95
ಮುಂಬೈ: ಪೆಟ್ರೋಲ್ 96.00 ; ಡೀಸೆಲ್ 86.98
ಚೆನ್ನೈ: ಪೆಟ್ರೋಲ್ 91.68 ; ಡೀಸೆಲ್ 85.01
ಹೈದರಾಬಾದ್: ಪೆಟ್ರೋಲ್ 93.10 ; ಡೀಸೆಲ್ 87.20
ಬೆಂಗಳೂರು: ಪೆಟ್ರೋಲ್ 92.54 ; ಡೀಸೆಲ್ 84.75
ಕೇಂದ್ರ ಸರ್ಕಾರ ಮೂಲ ಬೆಲೆಯ 125% ರಷ್ಟು ತೆರಿಗೆ ವಿಧಿಸುತ್ತದೆ. ಇಂಧನದ ಮೇಲೆ ಅಬಕಾರಿ ಸುಂಕ 32. 98ರು ನಷ್ಟಿದೆ. ದೆಹಲಿಯಲ್ಲಿ 19 ರು ಪ್ರತಿ ಲೀಟರ್ ವ್ಯಾಟ್, ಡೀಲರ್ ಕಮಿಷನ್ 3.67 ರು ಪ್ರತಿ ಲೀಟರ್ ಸೇರಿ ಬೆಲೆ ಇನ್ನಷ್ಟು ಏರಿಕೆಗೆ ಕಾರಣವಾಗಿದೆ.












Click it and Unblock the Notifications