Share Market: ಹಿಂಡೆನ್‌ಬರ್ಗ್ ವರದಿ; ಅಲ್ಪ ಕುಸಿತ ಕಂಡ ಅದಾನಿ ಗ್ರೂಪ್‌ನ ಷೇರುಗಳು
ಯುಎಸ್ ಸ್ಟಾಕ್ ಸೆಲ್ಲರ್ ಹಿಂಡೆನ್‌ಬರ್ಗ್ ರಿಪೋರ್ಟ್ ಅದಾನಿ ಷೇರು ಹಗರಣದಲ್ಲಿ ಸೆಬಿ ಅಧ್ಯಕ್ಷರು ಭಾಗಿಯಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ ಬಳಿಕ, ಸೋಮವಾರ ಭಾರತೀಯ ಷೇರು ಮಾರುಕಟ್ಟೆ ಹೇಗೆ ವಹಿವಾಟು ನಡೆಸುತ್ತದೆ ಎನ್ನುವ ಕುತೂಹಲ ಇತ್ತು. ಸೆನ್ಸೆಕ್ಸ್ ಮತ್ತು ನಿಫ್ಟಿ ಅಲ್ಪ ಪ್ರಮಾಣದಲ್ಲಿ ಕುಸಿತ ಕಂಡಿದ್ದು, ಅದಾನಿ ಗ್ರೂಪ್‌ನ ಷೇರುಗಳು ಕುಸಿತ ಕಂಡಿವೆ.
ಎನ್‌ಎಸ್‌ಇ ನಿಫ್ಟಿ 0.08% ರಷ್ಟು ಕುಸಿದು 24,347 ರಲ್ಲಿಕೊನೆಯಾಗಿದೆ. ಬಿಎಸ್‌ಇ ಸೆನ್ಸೆಕ್ಸ್ 56.98 ಪಾಯಿಂಟ್ ಅಥವಾ 0.07% ಕುಸಿದು 79,648.92 ಕ್ಕೆ ತಲುಪಿದೆ. ದೊಡ್ಡ ಪ್ರಮಾಣದ ಹೂಡಿಕೆದಾರರು ಹಿಂಡೆನ್‌ಬರ್ಗ್ ವರದಿ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ ಕಾರಣ ಷೇರು ಮಾರುಕಟ್ಟೆಯಲ್ಲಿ ಅಂತಹ ತಲ್ಲಣವೇನೂ ಕಂಡು ಬರಲಿಲ್ಲ. ಹಲವು ಕಂಪನಿಗಳು ಮೊದಲ ಕ್ವಾರ್ಟರ್ ವರದಿಯನ್ನು ಪ್ರಕಟಿಸುತ್ತಿದ್ದು, ಹಲವು ಕಂಪನಿಗಳ ಷೇರುಗಳ ಬೆಲೆಗಳು ಏರಿಳಿತ ಕಾಣುತ್ತಿವೆ.

ಸ್ಮಾಲ್-ಕ್ಯಾಪ್ ಮತ್ತು ಮಿಡ್-ಕ್ಯಾಪ್ ಷೇರುಗಳು ಮುನ್ನಡೆ ಸಾಧಿಸಿದವು. ರಿಯಾಲ್ಟಿ ಮತ್ತು ಮೆಟಲ್ ಷೇರುಗಳು ಇತರ ವಲಯದ ಸೂಚ್ಯಂಕಗಳ ನಡುವೆ ಉತ್ತಮ ಪ್ರದರ್ಶನ ನೀಡಿದರೆ ಪಿಎಸ್‌ಯು ಬ್ಯಾಂಕ್‌ಗಳು ಮತ್ತು ಮಾಧ್ಯಮ ಷೇರುಗಳು ಕುಸಿದವು.
ಅದಾನಿ ಗ್ರೂಪ್ ಷೇರುಗಳು ಕುಸಿತ
ಹಿಂಡೆನ್‌ಬರ್ಗ್ ವರದಿ ಮಾರುಕಟ್ಟೆ ಮೇಲೆ ಹೆಚ್ಚು ಪರಿಣಾಮ ಬೀರದೇ ಇದ್ದರೂ, ಅದಾನಿ ಸಮೂಹದ ಷೇರುಗಳ ಮೇಲೆ ಅಲ್ಪ ಪ್ರಮಾಣದ ಪರಿಣಾಮ ಬಿರಿದೆ. ಅದಾನಿ ಎಂಟರ್ ಪ್ರೈಸಸ್ ಲಿಮಿಟೆಡ್ ಷೇರುಗಳು 46.65 ರೂಪಾಯಿ ಅಥವಾ 1.46% ರಷ್ಟು ಕುಸಿತ ಕಂಡಿದ್ದು, 3,140.90 ರೂಪಾಯಿಗಳಲ್ಲಿ ಅಂತ್ಯವಾಗಿದೆ.
ಅದಾನಿ ಪವರ್ ಲಿಮಿಟೆಡ್ ಷೇರುಗಳ ಬೆಲೆಗಳು 8.40 ರೂಪಾಯಿ ಅಥವಾ 1.21 ರಷ್ಟು ಕುಸಿತ ಕಂಡಿದ್ದು 687 ರೂಪಾಯಿಯಲ್ಲಿ ಕೊನೆಯಾಗಿದೆ. ಅದಾನಿ ಎನರ್ಜಿ ಸಲ್ಯೂಷನ್ಸ್ ಲಿಮಿಟೆಡ್ ಷೇರುಗಳ ಬೆಲೆ 35.90 ರೂಪಾಯಿ ಅಥವಾ 3.25% ರಷ್ಟು ಕುಸಿತ ಕಂಡಿದ್ದು, 1067.90 ರೂಪಾಯಿಯಲ್ಲಿ ಸೋಮವಾರದ ವಹಿವಾಟನ್ನು ಮುಗಿಸಿದೆ.
ಇನ್ನು ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್ ಷೇರುಗಳ ಮೌಲ್ಯ 34.35 ರೂಪಾಯಿ ಅಥವಾ 3.95% ರಷ್ಟು ಕುಸಿತವಾಗಿದೆ. 835.50 ರೂಪಾಯಿಗಳಲ್ಲಿ ದಿನದ ವಹಿವಾಟನ್ನು ಮುಗಿಸಿದೆ. ಅದಾನಿ ಗ್ರೀನ್ ಎನರ್ಜಿ ಷೇರುಗಳು ಮಾತ್ರ ಇಂದು ಏರಿಕೆಯಾಗಿದೆ. 4.15 ರೂಪಾಯಿ ಅಥವಾ 0.23% ರಷ್ಟು ಏರಿಕೆಯಾಗಿದ್ದು 1785 ರೂಪಾಯಿಯಲ್ಲಿ ಮುಕ್ತಾಯವಾಗಿದೆ.












Click it and Unblock the Notifications