Gold: ಬಂಗಾರ ಖರೀದಿಸಬೇಡಿ ಎಂಬ ಪ್ರಧಾನಿ ಮೋದಿ ಕರೆ: ನೆಲಕಚ್ಚಿದ ಟೈಟಾನ್, ಸೆನ್ಕೋ ಗೋಲ್ಡ್ ಷೇರುಗಳು
ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವಿದೇಶಿ ವಿನಿಮಯವನ್ನು ಉಳಿಸುವ ಉದ್ದೇಶದಿಂದ "ಮುಂದಿನ ಒಂದು ವರ್ಷ ಬಂಗಾರ ಖರೀದಿ ಮತ್ತು ವಿದೇಶಿ ಪ್ರವಾಸವನ್ನು ಮುಂದೂಡಿ" ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಕರೆಯು ಜ್ಯುವೆಲ್ಲರಿ ಷೇರುಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಇಂದು ಟೈಟಾನ್ ಸೇರಿದಂತೆ ಪ್ರಮುಖ ಆಭರಣ ಕಂಪನಿಗಳ ಷೇರುಗಳು ಶೇ 12ರಷ್ಟು ಕುಸಿತ ಕಂಡಿವೆ.
ವಿದೇಶಿ ವಿನಿಮಯ ಉಳಿಸಲು ಪ್ರಧಾನಿ ಕರೆ
ಭಾನುವಾರ ಹೈದರಾಬಾದ್‌ನ ಪರೇಡ್ ಗ್ರೌಂಡ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, "ಯಾವುದೇ ರೀತಿಯಲ್ಲಾದರೂ ನಾವು ವಿದೇಶಿ ವಿನಿಮಯವನ್ನು ಉಳಿಸಬೇಕಿದೆ. ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಪೆಟ್ರೋಲ್ ಮತ್ತು ರಸಗೊಬ್ಬರಗಳ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಸರಬರಾಜು ಸರಪಳಿಯ ಮೇಲೆ ಒತ್ತಡವಿದ್ದಾಗ ಪರಿಸ್ಥಿತಿ ಕಷ್ಟಕರವಾಗುತ್ತದೆ. ಆದ್ದರಿಂದ ಕನಿಷ್ಠ ಒಂದು ವರ್ಷದವರೆಗೆ ಚಿನ್ನದ ಖರೀದಿ ಮತ್ತು ವಿದೇಶ ಪ್ರವಾಸವನ್ನು ಮುಂದೂಡಿ" ಎಂದು ಮನವಿ ಮಾಡಿದ್ದರು.

ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ
ಪ್ರಧಾನಿಗಳ ಈ ಹೇಳಿಕೆಯ ಮರುದಿನವೇ ಷೇರು ಮಾರುಕಟ್ಟೆ ಆರಂಭವಾಗುತ್ತಿದ್ದಂತೆ ಆಭರಣ ಕಂಪನಿಗಳ ಷೇರುಗಳು ನೆಲಕಚ್ಚಿದವು. ನಿಫ್ಟಿಯ ಟಾಪ್ ಲೂಸರ್ ಆಗಿ ಹೊರಹೊಮ್ಮಿದ ಟೈಟಾನ್ ಷೇರುಗಳು ಶೇ. 7ರಷ್ಟು ಕುಸಿದವು. ಸ್ಕೈ ಗೋಲ್ಡ್ ಅಂಡ್ ಡೈಮಂಡ್ಸ್ ಕಂಪನಿಯ ಷೇರುಗಳು ಶೇ 12.24ರಷ್ಟು ಭಾರೀ ಕುಸಿತ ಕಂಡವು. ಇನ್ನು ಸೆನ್ಕೋ ಗೋಲ್ಡ್ ಶೇ 11ರಷ್ಟು ಇಳಿಕೆ ಕಂಡಿದೆ. ಕಲ್ಯಾಣ್ ಜ್ಯುವೆಲ್ಲರ್ಸ್ ಶೇ 9.99ರಷ್ಟು ಕುಸಿದಿದೆ. ತಂಗಮಯಿಲ್ ಜ್ಯುವೆಲ್ಲರಿ (ಶೇ. 9.79), ಟ್ರಿಬೋವಂದಾಸ್ ಭೀಮ್ಜಿ ಝವೇರಿ (ಶೇ. 6.83) ಮತ್ತು ಪಿಸಿ ಜ್ಯುವೆಲ್ಲರ್ (ಶೇ. 5.67) ನಷ್ಟ ಅನುಭವಿಸಿವೆ ಎಂದು ವರದಿಯಾಗಿದೆ.
ಚಿನ್ನದ ಆಮದು ಭಾರತದ ವಿದೇಶಿ ವಿನಿಮಯದ ಮೇಲೆ ದೊಡ್ಡ ಪರಿಣಾಮ ಬೀರುವುದರಿಂದ, ಆಮದನ್ನು ಕಡಿಮೆ ಮಾಡಲು ಪ್ರಧಾನಿ ಈ ಸಲಹೆ ನೀಡಿದ್ದಾರೆ. ಆದರೆ, ಮದುವೆ ಸೀಸನ್ ಆರಂಭವಾಗುತ್ತಿರುವ ಹೊತ್ತಲ್ಲೇ ಬಂದ ಈ ಹೇಳಿಕೆಯು ಹೂಡಿಕೆದಾರರಲ್ಲಿ ಆತಂಕ ಮೂಡಿಸಿದ್ದು, ನಿಫ್ಟಿ ಕನ್ಸ್ಯೂಮರ್ ಡ್ಯೂರಬಲ್ಸ್ ಇಂಡೆಕ್ಸ್ ಶೇ. 3.5ಕ್ಕಿಂತ ಹೆಚ್ಚು ಕುಸಿತ ಕಂಡಿದೆ.
ಮೋದಿ ಹೇಳಿದ್ದೇನು?
ಹೈದರಾಬಾದ್‌ನ ಪರೇಡ್ ಮೈದಾನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದ ಭಾರತದ ಆರ್ಥಿಕತೆಯನ್ನು ರಕ್ಷಿಸಲು ಕೇವಲ ಚಿನ್ನದ ಖರೀದಿ ಮಾತ್ರವಲ್ಲದೆ, ಇತರೆ 10 ಪ್ರಮುಖ ಅಂಶಗಳ ಮೇಲೆ ಗಮನಹರಿಸುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.
ವರ್ಕ್ ಫ್ರಮ್ ಹೋಮ್ (WFH): ಇಂಧನ ಉಳಿಸಲು ಸಾಧ್ಯವಿರುವ ಕಡೆಗಳಲ್ಲಿ ಮತ್ತೆ ಮನೆಯಿಂದಲೇ ಕೆಲಸ ಮಾಡುವ ಸಂಸ್ಕೃತಿ ಅಳವಡಿಸಿಕೊಳ್ಳುವುದು.
ಸಾರ್ವಜನಿಕ ಸಾರಿಗೆ ಬಳಕೆ: ಮೆಟ್ರೋ ಮತ್ತು ಬಸ್‌ಗಳ ಬಳಕೆಗೆ ಆದ್ಯತೆ ನೀಡುವುದು.
ಕಾರ್ ಪೂಲಿಂಗ್: ಖಾಸಗಿ ವಾಹನ ಬಳಸುವವರು ಕಾರ್ ಪೂಲಿಂಗ್ ಮಾಡುವುದು.
ವಿದೇಶಿ ಪ್ರವಾಸ ಮುಂದೂಡಿಕೆ: ಕನಿಷ್ಠ ಒಂದು ವರ್ಷದವರೆಗೆ ವಿದೇಶಿ ಪ್ರವಾಸ ಮತ್ತು ರಜೆಗಳನ್ನು ಭಾರತದ ಒಳಗೇ ಕಳೆಯುವುದು.
ಡೆಸ್ಟಿನೇಶನ್ ವೆಡ್ಡಿಂಗ್ ಬೇಡ: ವಿದೇಶಗಳಲ್ಲಿ ಮದುವೆ ಸಮಾರಂಭಗಳನ್ನು ಮಾಡುವುದನ್ನು ತಪ್ಪಿಸುವುದು.
ಇಂಧನ ಮಿತಬಳಕೆ: ಅನಗತ್ಯವಾಗಿ ಪೆಟ್ರೋಲ್, ಡೀಸೆಲ್ ವ್ಯಯ ಮಾಡದಿರುವುದು.
ವಿದೇಶಿ ವಸ್ತುಗಳ ಅತಿಯಾದ ವ್ಯಾಮೋಹ ಬೇಡ: ಸ್ಥಳೀಯವಾಗಿ ತಯಾರಾದ ವಸ್ತುಗಳಿಗೆ (Vocal for Local) ಆದ್ಯತೆ ನೀಡುವುದು.
ವರ್ಚುವಲ್ ಮೀಟಿಂಗ್: ಕಚೇರಿ ಕೆಲಸಗಳಿಗೆ ಸಾಧ್ಯವಾದಷ್ಟು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸುವುದು.
ಅಡುಗೆ ಎಣ್ಣೆ ಬಳಕೆ ಇಳಿಕೆ: ಅಡುಗೆ ಎಣ್ಣೆ ಆಮದು ತಗ್ಗಿಸಲು ಅದರ ಬಳಕೆಯಲ್ಲಿ ಶೇ. 10ರಷ್ಟು ಕಡಿತ ಮಾಡುವುದು.
ಸ್ವದೇಶಿ ಉತ್ಪನ್ನಗಳ ಬಳಕೆ: ದೈನಂದಿನ ಜೀವನದಲ್ಲಿ ಆಮದು ಮಾಡಿಕೊಂಡ ವಸ್ತುಗಳ ಬದಲಿಗೆ ಭಾರತೀಯ ಉತ್ಪನ್ನಗಳನ್ನು ಬಳಸುವುದು.
ದೇಶದ ಅತಿದೊಡ್ಡ ಚಿನ್ನದ ವ್ಯಾಪಾರ ಕೇಂದ್ರವಾಗಿರುವ ಮುಂಬೈನ ಐಕಾನಿಕ್ 'ಜವೇರಿ ಬಜಾರ್'ನಲ್ಲಿ ಪ್ರಧಾನಿ ಮೋದಿ ಅವರ ಹೇಳಿಕೆಯು ತಲ್ಲಣ ಮೂಡಿಸಿದೆ. ಜ್ಯೂವೆಲ್ಲರಿ ವ್ಯಾಪಾರಿಗಳು ಮತ್ತು ಕುಶಲಕರ್ಮಿಗಳು ಈ ಬೆಳವಣಿಗೆಯಿಂದ ವ್ಯಾಪಾರದ ಮೇಲಾಗುವ ಪರಿಣಾಮಗಳ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಪ್ರಧಾನಿಗಳ ಹೇಳಿಕೆಯ ಬೆನ್ನಲ್ಲೇ ದಲಾಲ್ ಸ್ಟ್ರೀಟ್‌ನಲ್ಲಿ ಆಭರಣ ಕಂಪನಿಗಳ ಷೇರುಗಳು ನೆಲಕಚ್ಚಿವೆ. ಟೈಟಾನ್, ಕಲ್ಯಾಣ್ ಜ್ಯುವೆಲ್ಲರ್ಸ್, ಸೆನ್ಕೋ ಗೋಲ್ಡ್ ಮತ್ತು ಸ್ಕೈ ಗೋಲ್ಡ್ ಅಂಡ್ ಡೈಮಂಡ್ಸ್‌ನಂತಹ ಪ್ರಮುಖ ಕಂಪನಿಗಳ ಷೇರುಗಳು ಸೋಮವಾರದ ವಹಿವಾಟಿನಲ್ಲಿ ಭಾರಿ ಕುಸಿತ ಕಂಡಿವೆ. ಇದು ಚಿನ್ನಾಭರಣ ಮಾರಾಟದಲ್ಲಿ ಸಂಭವಿಸಬಹುದಾದ ಸಂಭಾವ್ಯ ಕುಸಿತದ ಬಗ್ಗೆ ಹೂಡಿಕೆದಾರರಲ್ಲಿ ಆತಂಕಕ್ಕೆ ಕಾರಣವಾಗಿದೆ.













Click it and Unblock the Notifications