Gold: ಚಿನ್ನ ಮಾರಾಟ ಮಾಡದೆ, ಒತ್ತೆ ಇರಿಸದೆ ಆದಾಯ ಗಳಿಸುವ ಅವಕಾಶ; ನಿಮ್ಮ ಬಳಿಯಿರುವ ಚಿನ್ನವೇ ಹೀಗೆ ದುಡಿಯಲಿ!
Gold: ಭಾರತದಲ್ಲಿ, ಚಿನ್ನವನ್ನು ಸುರಕ್ಷಿತ ಆಸ್ತಿ ಮತ್ತು ಉಳಿತಾಯದ ಮಾರ್ಗವಾಗಿ ನೋಡಲಾಗುತ್ತದೆ. ಚಿನ್ನವನ್ನು ಸಾಮಾನ್ಯವಾಗಿ ಬ್ಯಾಂಕ್ ಲಾಕರ್‌ಗಳಲ್ಲಿ ಅಥವಾ ಮನೆಯ ತಿಜೋರಿಗಳಲ್ಲಿ ಭದ್ರವಾಗಿ ಇಡಲಾಗುತ್ತದೆ. ಕೆಲವರಂತೂ ಲಾಕರ್‌ಗಳಲ್ಲಿ ಅಥವಾ ತಿಜೋರಿಗಳಲ್ಲಿ ಇಟ್ಟ ಬಂಗಾರವನ್ನು ವರ್ಷಗಳವರೆಗೆ ಮುಟ್ಟುವುದೇ ಇಲ್ಲ. ಚಿನ್ನದ ಬೆಲೆಯಂತೂ ಇದೀಗ ದಿನೇ ದಿನೇ ರಾಕೆಟ್ ವೇಗದಲ್ಲಿ ಏರ್ತಾ ಇದೆ. ಹಾಗಂತ ಲಾಕರ್‌ನಲ್ಲಿ ಮತ್ತು ತಿಜೋರಿಯಲ್ಲಿ ಇಟ್ಟ ಬಂಗಾರ ಮರಿ ಹಾಕುವುದಿಲ್ಲ. ಅದು ಭದ್ರವಾಗಿ ಇರುತ್ತದೆ ಅಷ್ಟೇ. ಅನೇಕ ಕುಟುಂಬಗಳಲ್ಲಿ, ಚಿನ್ನದ ಆಭರಣಗಳನ್ನು ತಲೆಮಾರುಗಳಿಂದ ಸಂರಕ್ಷಿಸಲಾಗುತ್ತದೆ. ಯಾವತ್ತೋ ಒಂದು ದಿನ ಅದನ್ನು ಮಾರಾಟ ಮಾಡಿದಾಗ ಅಥವಾ ಒತ್ತೆ ಇಟ್ಟಾಗ ಮಾತ್ರ ಅದರ ಬೆಲೆ ಅರಿವಿಗೆ ಬರುತ್ತದೆ.
Gold: ಚಿನ್ನದಿಂದ ಆದಾಯ ಗಳಿಸುವ ಮಾರ್ಗ
ಚಿನ್ನವನ್ನು ಮಾರದೆ ಅಡವಿಡದೇ ಚಿನ್ನದಿಂದಲೂ ಹಣ ಗಳಿಸಬಹುದು. ಹೌದು, ಚಿನ್ನದಿಂದ ಆದಾಯ ಗಳಿಸಲು ಹೊಸ ಆಯ್ಕೆ ಹುಟ್ಟಿಕೊಂಡಿದೆ. ಅದುವೇ ಗೋಲ್ಡ್ ಲೀಸಿಂಗ್. ಇದರಲ್ಲಿ ನೀವು ನಿಮ್ಮ ಚಿನ್ನವನ್ನು ಆಭರಣ ವ್ಯಾಪಾರಿ ಅಥವಾ ಸಂಸ್ಥೆಗೆ ನಿರ್ದಿಷ್ಟ ಅವಧಿಗೆ ಸಾಲವಾಗಿ ನೀಡಬಹುದು. ಆ ಸಾಲದ ಮೇಲೆ ಬಡ್ಡಿ ಸಿಗುತ್ತದೆ. ಇಲ್ಲಿ ಬಹಳ ಮುಖ್ಯವಾದ ವಿಷಯ ಅಂದರೆ ನೀವು ಆ ಚಿನ್ನವನ್ನು ಲೀಸ್‌ಗೆ ಕೊಡುತ್ತೀರಿ ಅಂದರೆ ಆ ಚಿನ್ನದ ಓನರ್ ನೀವೇ ಆಗಿರುತ್ತೀರಿ.

ಗೋಲ್ಡ್ ಲೀಸಿಂಗ್ ಹೇಗೆ ಕೆಲಸ ಮಾಡುತ್ತದೆ ?
ಗೋಲ್ಡ್ ಲೀಸಿಂಗ್ ಅಂದರೆ ಆಭರಣ ತಯಾರಿಕೆಗೆ ಅಗತ್ಯವಿರುವ ಆಭರಣ ವ್ಯಾಪಾರಿಗಳಿಗೆ ಅಂದರೆ ಜ್ಯುವೆಲ್ಲರ್‌ಗೆ ನಿಮ್ಮ ಚಿನ್ನವನ್ನು ಸಾಲವಾಗಿ ನೀಡುತ್ತೀರಿ. ಪ್ರತಿಯಾಗಿ, ಅವರು ಸಾಮಾನ್ಯವಾಗಿ ವರ್ಷಕ್ಕೆ 2% ರಿಂದ 7% ವರೆಗೆ ಬಡ್ಡಿ ನೀಡುತ್ತಾರೆ. ಈ ಲಾಭವನ್ನು ನಗದು ಬದಲಾಗಿ ಹೆಚ್ಚುವರಿ ಗ್ರಾಂ ಚಿನ್ನದ ರೂಪದಲ್ಲಿ ನೀಡುತ್ತಾರೆ. ಉದಾಹರಣೆಗೆ, 100 ಗ್ರಾಂ ಚಿನ್ನವನ್ನು ಲೀಸ್‌ಗೆ ಕೊಟ್ಟರೆ ಅವಧಿಯ ಕೊನೆಯಲ್ಲಿ, ಮೂಲ 100 ಗ್ರಾಂ ಬಂಗಾರದ ಜೊತೆಗೆ ಸ್ವಲ್ಪ ಹೆಚ್ಚುವರಿ ಚಿನ್ನವನ್ನು ಬಡ್ಡಿಯಾಗಿ ಪಡೆಯಬಹುದು. ಕೆಲವು ಬ್ಯಾಂಕುಗಳು RBIನ ಗೋಲ್ಡ್ ಮೊನೆಟೈಸೇಶನ್ ಸ್ಕೀಮ್ ಅಡಿಯಲ್ಲಿ ಈ ಸೌಲಭ್ಯವನ್ನು ನೀಡುತ್ತವೆ. ವಿವಿಧ ಫಿನ್‌ಟೆಕ್ ಪ್ಲಾಟ್‌ಫಾರ್ಮ್‌ಗಳು ಕೂಡಾ ಈ ಸೇವೆಯನ್ನು ಒದಗಿಸುತ್ತವೆ.
ಡಿಜಿಟಲ್ ಚಿನ್ನವನ್ನು ಕೂಡಾ ಲೀಸ್‌ಗೆ ನೀಡಬಹುದೇ ?
ಕೆಲವು ತಜ್ಞರು ಡಿಜಿಟಲ್ ಗೋಲ್ಡ್ ಅನ್ನು ಗುತ್ತಿಗೆಗೆ ನೀಡಬಹುದು ಎಂದು ಹೇಳುತ್ತಾರೆ. ಭಾರತದಲ್ಲಿ ಡಿಜಿಟಲ್ ಚಿನ್ನಕ್ಕೆ ನಿಯಂತ್ರಣ ಇಲ್ಲ ಎನ್ನುವುದು ಕಾನೂನು ತಜ್ಞರ ಅಭಿಪ್ರಾಯ. ಹೂಡಿಕೆದಾರರಿಗೆ ಷೇರು ಮಾರುಕಟ್ಟೆಯಲ್ಲಿ ಸಿಗುವಷ್ಟು ಭದ್ರತೆ ಡಿಜಿಟಲ್ ಗೋಲ್ಡ್‌ನಲ್ಲಿ ಸಿಗುವುದಿಲ್ಲ. ಹಾಗಾಗಿ ಡಿಜಿಟಲ್ ಗೋಲ್ಡ್ ಅನ್ನು ಲೀಸ್‌ಗೆ ನೀಡುವುದು ಅಷ್ಟು ಸೇಫ್ ಅಲ್ಲ ಎನ್ನಲಾಗಿದೆ.
ಗೋಲ್ಡ್ ಲೀಸಿಂಗ್‌ಗೆ ವಿಮಾ ರಕ್ಷಣೆ ಇದೆಯೇ?
ಗೋಲ್ಡ್ ಲೀಸ್‌ಗೆ ಬ್ಯಾಂಕ್ ಠೇವಣಿಗಳಂತೆ ಸರ್ಕಾರಿ ಬೆಂಬಲಿತ ವಿಮಾ ರಕ್ಷಣೆ ಇರುವುದಿಲ್ಲ. ಕೆಲವು ಖಾಸಗಿ ಪ್ಲಾಟ್‌ಫಾರಂಗಳು ವಿಮಾ ರಕ್ಷಣೆಯನ್ನು ಒದಗಿಸುವುದಾಗಿ ಹೇಳಿಕೊಂಡರೂ, ಇದು ಎಲ್ಲಾ ಕಡೆ ಸಾಧ್ಯವಿಲ್ಲ. ತಜ್ಞರ ಪ್ರಕಾರ, ಪ್ರೈವೆಟ್ ಡಿಜಿಟಲ್ ಗೋಲ್ಡ್ ಲೀಸ್ ಅನ್ನು RBI ಅಥವಾ SEBI ನೇರವಾಗಿ ನಿಯಂತ್ರಿಸುವುದಿಲ್ಲ. ಆದ್ದರಿಂದ, ಜ್ಯುವೆಲ್ಲರ್ಸ್ ಡೀಫಾಲ್ಟ್ ಮಾಡಿದರೆ, ಹೂಡಿಕೆದಾರರಿಗೆ ಸರ್ಕಾರಿ ರಕ್ಷಣೆ ಸಿಗುವುದಿಲ್ಲ.
ಗೋಲ್ಡ್ ಲೀಸಿಂಗ್ ಪ್ರಯೋಜನಗಳು
1.ನಿಮ್ಮ ಚಿನ್ನವನ್ನು ಮಾರಾಟ ಮಾಡದೆಯೇ ಆದಾಯ ಗಳಿಸಬಹುದು.
2.ಲಾಕರ್‌ನಲ್ಲಿ ಸುಮ್ಮನೆ ಇಡುವ ಬದಲು, ಆದಾಯ ಗಳಿಸುವುದಕ್ಕೆ ಸಹಾಯವಾಗುವುದು.
3. ಚಿನ್ನದ ರೂಪದಲ್ಲಿ ಬಡ್ಡಿ ಸಿಗುತ್ತದೆ.
4.ಭವಿಷ್ಯದಲ್ಲಿ ಚಿನ್ನದ ಬೆಲೆ ಏರಿದರೆ, ಹೆಚ್ಚುವರಿ ಲಾಭವನ್ನು ಪಡೆಯಬಹುದು.
5.ಆಭರಣ ವ್ಯಾಪಾರಿಗಳು ದುಬಾರಿ ಸಾಲಗಳನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ.
ಚಿನ್ನದ ಗುತ್ತಿಗೆಯ ಅಪಾಯಗಳು
1. ಡೀಫಾಲ್ಟ್ ಅಪಾಯ: ಆಭರಣ ವ್ಯಾಪಾರಿ ಅಥವಾ ಸಾಲಗಾರ ಚಿನ್ನವನ್ನು ವಾಪಸ್ ನೀಡಲು ವಿಫಲವಾದರೆ ಹೂಡಿಕೆದಾರರು ನಷ್ಟ ಅನುಭವಿಸಬಹುದು.
2. ಮಾರುಕಟ್ಟೆ ಅಪಾಯ: ಗ್ರಾಂ ಚಿನ್ನದ ರೂಪದಲ್ಲಿ ಬಡ್ಡಿ ಸಿಗುತ್ತದೆ. ಚಿನ್ನದ ಬೆಲೆ ಕುಸಿದರೆ, ನಿಮ್ಮ ಹೂಡಿಕೆಯ ರೂಪಾಯಿ ಮೌಲ್ಯ ಕಡಿಮೆಯಾಗಬಹುದು.
3. ಲಿಕ್ವಿಡಿಟಿ ರಿಸ್ಕ್: ನಿಮ್ಮ ಚಿನ್ನವು ಗುತ್ತಿಗೆಯ ಅವಧಿಯವರೆಗೆ ಲಾಕ್ ಆಗಿರುತ್ತದೆ. ಅಗತ್ಯವಿದ್ದಲ್ಲಿ ನೀವು ಅದನ್ನು ತಕ್ಷಣ ಮಾರಾಟ ಮಾಡಲು ಸಾಧ್ಯವಿಲ್ಲ.
4. ಪ್ಲಾಟ್‌ಫಾರ್ಮ್ ಅಪಾಯ: ಗೋಲ್ಡ್ ಲೀಸಿಂಗ್ ಸೇವೆ ನೀಡುವ ಕಂಪನಿಯು ಆರ್ಥಿಕ ಬಿಕ್ಕಟ್ಟನ್ನು ಎದುರಿಸಿದರೆ ಅಥವಾ ಮುಚ್ಚಿದರೆ ಚಿನ್ನವನ್ನು ವಾಪಸ್ ಪಡೆಯುವುದರಲ್ಲಿ ಕಾನೂನು ತೊಡಕುಗಳು ಉಂಟಾಗಬಹುದು.
Gold: ಹೂಡಿಕೆ ಮಾಡುವ ಮೊದಲು ಈ ವಿಷಯ ತಿಳಿದಿರಲಿ
ತಜ್ಞರ ಸಲಹೆಯ ಪ್ರಕಾರ, ಚಿನ್ನದ ಮಾಲೀಕತ್ವವು ನಿಮ್ಮ ಹೆಸರಿನಲ್ಲಿಯೇ ಇದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಸಾಕಷ್ಟು ವಿಮಾ ರಕ್ಷಣೆ ತೆಗದುಕೊಳ್ಳಿ. ಪ್ಲಾಟ್‌ಫಾರಂ ಮತ್ತು ಜ್ಯುವೆಲ್ಲರ್ ಇಬ್ಬರೂ ವಿಶ್ವಾಸಾರ್ಹ ಎನ್ನುವುದನ್ಬು ಮನದಟ್ಟು ಮಾಡಿಕೊಳ್ಳಿ. ಎಲ್ಲಾ ಕಾನೂನು ನಿಯಮಗಳನ್ನು ಲಿಖಿತವಾಗಿ ದಾಖಲಿಸುವುದು ಅಗತ್ಯ. ಗೋಲ್ಡ್ ಲೀಸ್ ಆದಾಯವನ್ನು ಗಳಿಸುವ ಅವಕಾಶವನ್ನು ನೀಡುತ್ತದೆಯಾದರೂ, ಅಪಾಯಗಳನ್ನು ಕೂಡಾ ಹೊಂದಿದೆ.


Click it and Unblock the Notifications
