Budget 2025: ವೈದ್ಯಕೀಯ ಸರಕು, ಆರೋಗ್ಯ ವಿಮೆ ಮೇಲಿನ ಜಿಎಸ್‌ಟಿ ಕಡಿಮೆ ಮಾಡಲು ಒತ್ತಾಯ
2025-2026 ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಗೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಈ ಬಾರಿ ಬಜೆಟ್ ಬಗ್ಗೆ ವ್ಯಾಪಕ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಧ್ಯಮ ವರ್ಗದ ಮೇಲಿನ ಹೊರೆ ಕಡಿಮೆ ಮಾಡಬಹುದು ಎಂದು ನಿರೀಕ್ಷೆ ಮಾಡಲಾಗಿದೆ.
ಆರೋಗ್ಯ ವಲಯದಿಂದ ಕೂಡ ಈ ಭಾರಿ ಬಜೆಟ್‌ನಲ್ಲಿ ಹೆಚ್ಚಿನ ನಿರೀಕ್ಷೆಗಳಿದೆ. ಅದರಲ್ಲೂ ಆರೋಗ್ಯ ವಲಯವನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದಿರುವುದು ಹೊರೆಯನ್ನು ಮತ್ತಷ್ಟು ಹೆಚ್ಚಿಸಿದ್ದು, ವೈದ್ಯಕೀಯ ಸರಕು ಮೇಲಿನ ಜಿಎಸ್‌ಟಿ ಕಡಿಮೆ ಮಾಡುವಂತೆ ಒತ್ತಾಯ ಕೇಳಿಬಂದಿದೆ.

ಆರೋಗ್ಯ ವಲಯದ ಬೇಡಿಕೆಗಳೇನು?
ವೈದ್ಯಕೀಯ ಸರಕುಗಳ ಮೇಲಿನ ಜಿಎಸ್‌ಟಿ ಕಡಿಮೆ ಮಾಡುವಂತೆ ಒತ್ತಾಯಿಸಿದ್ದು, ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಹೆಚ್ಚಿನ ಹಣಕಾಸು ಸೌಲಭ್ಯ ಒದಗಿಸುವಂತೆ ಮನವಿ ಮಾಡಲಾಗಿದೆ. 60 ವರ್ಷ ಮೇಲ್ಪಟ್ಟವರನ್ನು ಪಿಎಂಜೆಎವೈನಲ್ಲಿ ಸೇರ್ಪಡೆ ಮಾಡುವಂತೆ ಕೇಳಲಾಗಿದೆ. ಆರೋಗ್ಯ ಕ್ಷೇತ್ರದ ಸುಧಾರಣೆಗಾಗಿ ಬಜೆಟ್‌ನಲ್ಲಿ ಹೆಚ್ಚಿನ ಅನುದಾನವನ್ನು ನಿರೀಕ್ಷೆ ಮಾಡಲಾಗಿದೆ.
ಪ್ರಮುಖ ವೈದ್ಯಕೀಯ ಉಪಕರಣಗಳು ಮತ್ತು ಸರಬರಾಜುಗಳ ಮೇಲಿನ ಆಮದು ಸುಂಕಗಳನ್ನು ಕಡಿಮೆ ಮಾಡಬೇಕು ಇದರಿಂದ ರೋಗಿಗಳ ಚಿಕಿತ್ಸಾ ವೆಚ್ಚ ಕೂಡ ಕಡಿಮೆಯಾಗುತ್ತದೆ. ಸರ್ಕಾರವು ಪರಿಚಯಿಸಿರುವ ವಿವಿಧ ಆರೋಗ್ಯ ಯೋಜನೆಗಳುಯ ಸುಲಭವಾಗಿ ಲಭ್ಯವಾಗುವಂತೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ.
ಆರೋಗ್ಯ ಕ್ಷೇತ್ರ ಮೂಲಸೌಕರ್ಯ ಬಲಪಡಿಸಲು ಆರೋಗ್ಯ ವೆಚ್ಚವನ್ನು ಜಿಡಿಪಿಯ 2.5% ಕ್ಕೆ ಹೆಚ್ಚಿಸುವ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸುಧಾರಿತ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಆರೋಗ್ಯ ಸೇವೆಯನ್ನು ಸುಧಾರಿಸಬೇಕು ಎಂದು ಒತ್ತಾಯಿಸಲಾಗಿದೆ.
ಆರೋಗ್ಯ ವಿಮೆ (Health Insurance) ಮತ್ತು ಆಸ್ಪತ್ರೆಗೆ ಪೂರೈಕೆ ಮಾಡುವ ಉಪಕರಣಗಳು, ಅಗತ್ಯ ವಸ್ತುಗಳ ಮೇಲಿನ ಜಿಎಟ್‌ಟಿ ದರವನ್ನು ಕಡಿಮೆ ಮಾಡಲು ವ್ಯಾಪಕವಾಗಿ ಒತ್ತಾಯಿಸಲಾಗುತ್ತಿದೆ. ವೈದ್ಯಕೀಯ ವೆಚ್ಚಗಳಲ್ಲಿ ಕೂಡ ಹಣದುಬ್ಬರ ಹೆಚ್ಚಾಗುತ್ತಿದ್ದು ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂಜೆಎವೈ) ಯೋಜನೆಯಡಿ ಹೆಚ್ಚಿನ ಹಂಚಿಕೆ ಮತ್ತು ಆರೋಗ್ಯ ಸೇವೆ ಬೆಲೆ ಹೆಚ್ಚಳ ಮಾಡುವಂತೆ ಕೋರಲಾಗಿದೆ.
ಕೋವಿಡ್ 19 ಸಾಂಕ್ರಾಮಿಕದ ಬಳಿಕ ನಾಗರಿಕರಲ್ಲಿ ಆರೋಗ್ಯದ ಕಾಳಜಿ ಹೆಚ್ಚಾಗಿದ್ದು, ಆರೋಗ್ಯ ವಿಮೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡಿಸುತ್ತಿದ್ದಾರೆ. ಆದರೆ ಆರೋಗ್ಯ ವಿಮೆ ಮೇಲೂ ಕೇಂದ್ರ ಸರ್ಕಾರ ಜಿಎಸ್‌ಟಿ ವಿಧಿಸಿರುವುದು ಸಾಕಷ್ಟು ಟೀಕೆಗೆ ಗುರಿಯಾಗಿದ್ದು ಬಜೆಟ್‌ನಲ್ಲಿ ಈ ಅಂಶವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆ ಎಂದು ನಿರೀಕ್ಷೆ ಮಾಡಲಾಗಿದೆ.












Click it and Unblock the Notifications