ಆಕ್ಸಿಸ್ ಬ್ಯಾಂಕ್‌ನಲ್ಲಿ 3,000 ಉದ್ಯೋಗಿಗಳ ಕಡಿತ: ತಂತ್ರಜ್ಞಾನವೇ ಇದಕ್ಕೆ ಕಾರಣವಾಯ್ತಾ? ತ್ರೈಮಾಸಿಕ ವರದಿಯ ಅಸಲಿ ಸತ್ಯ ಇಲ್ಲಿದೆ
ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಆಗಿರುವ ಆಕ್ಸಿಸ್ ಬ್ಯಾಂಕ್ 2025-26ನೇ ಆರ್ಥಿಕ ವರ್ಷದ ತನ್ನ ಮಾರ್ಚ್ ತ್ರೈಮಾಸಿಕದ ಆರ್ಥಿಕ ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ ಬ್ಯಾಂಕ್‌ನ ಒಟ್ಟು ಸಿಬ್ಬಂದಿ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದೆ. ಕಳೆದ ಕೆಲವು ವರ್ಷಗಳಿಂದ ಬ್ಯಾಂಕಿಂಗ್ ತಂತ್ರಜ್ಞಾನದಲ್ಲಿ ಮಾಡಿರುವ ನಿರಂತರ ಹೂಡಿಕೆಗಳು ಮತ್ತು ಡಿಜಿಟಲ್ ಬದಲಾಗಿರುವುದರಿಂದ ಕೆಲಸದ ದಕ್ಷತೆ ಹೆಚ್ಚಾಗಿದ್ದು, ಸಿಬ್ಬಂದಿ ಸಂಖ್ಯೆ ಕಡಿಮೆಯಾಗಲು ಇದೇ ಪ್ರಮುಖ ಕಾರಣ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.
3,000 ಉದ್ಯೋಗಿಗಳ ಕಡಿತಕ್ಕೆ ಕಾರಣವೇನು?
ಬ್ಯಾಂಕ್ ಬಿಡುಗಡೆ ಮಾಡಿರುವ ಅಧಿಕೃತ ಅಂಕಿಅಂಶಗಳ ಪ್ರಕಾರ, ಕಳೆದ ಹಣಕಾಸು ವರ್ಷದಲ್ಲಿ ಆಕ್ಸಿಸ್ ಬ್ಯಾಂಕ್‌ನ ಒಟ್ಟು ಉದ್ಯೋಗಿಗಳ ಸಂಖ್ಯೆ 1.04 ಲಕ್ಷ ಇತ್ತು. ಆದರೆ 2025-26ನೇ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಈ ಸಂಖ್ಯೆ 1.01 ಲಕ್ಷಕ್ಕೆ ಇಳಿಕೆಯಾಗಿದೆ. ಅಂದರೆ ಅಂದಾಜು 3,000 ಉದ್ಯೋಗಿಗಳ ಸಂಖ್ಯೆ ಕಡಿಮೆಯಾದಂತಾಗಿದೆ. ಆಕ್ಸಿಸ್ ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸುಬ್ರತ್ ಮೊಹಂತಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, "ಈ ಉದ್ಯೋಗ ಕಡಿತವು ಯಾವುದೇ ನಿರ್ದಿಷ್ಟ ವಿಭಾಗವನ್ನು ಗುರಿಯಾಗಿಸಿ ಮಾಡಿದ್ದಲ್ಲ. ಬ್ಯಾಂಕ್‌ನ ದೀರ್ಘಕಾಲೀನ ಡಿಜಿಟಲೀಕರಣದ ಗುರಿಯಿಂದಾಗಿ ಸಹಜವಾಗಿಯೇ ಮಾನವ ಸಂಪನ್ಮೂಲದ ಮೇಲಿನ ಅವಲಂಬನೆ ಕಡಿಮೆಯಾಗುತ್ತಿದೆ. ತಂತ್ರಜ್ಞಾನದ ಬಳಕೆಯಿಂದ ಉದ್ಯೋಗಿಗಳ ಉತ್ಪಾದಕತೆ ಹಾಗೂ ಕಾರ್ಯಾಚರಣೆಯ ದಕ್ಷತೆ ಸುಧಾರಿಸಿದೆ" ಎಂದು ತಿಳಿಸಿದ್ದಾರೆ.

ಹೊಸ ಶಾಖೆಗಳ ವಿಸ್ತರಣೆ
ಒಂದೆಡೆ ಒಟ್ಟಾರೆ ಉದ್ಯೋಗಿಗಳ ಸಂಖ್ಯೆ ಕಡಿಮೆಯಾಗಿದ್ದರೂ, ಮತ್ತೊಂದೆಡೆ ಬ್ಯಾಂಕ್ ತನ್ನ ಭೌತಿಕ ಶಾಖೆಗಳ ವಿಸ್ತರಣೆಯನ್ನು ನಿರಂತರವಾಗಿ ಮುಂದುವರಿಸಿದೆ. ಈ ಒಂದು ವರ್ಷದಲ್ಲಿ ದೇಶಾದ್ಯಂತ ಸುಮಾರು 400 ಹೊಸ ಶಾಖೆಗಳನ್ನು ತೆರೆಯಲಾಗಿದೆ. ಹೊಸ ಶಾಖೆಗಳ ನಿರ್ವಹಣೆಗೆ ಹೊಸ ನೇಮಕಾತಿ ಮತ್ತು ತರಬೇತಿ ಪ್ರಕ್ರಿಯೆಗಳು ನಡೆದಿದ್ದರೂ ಸಹ, ಡಿಜಿಟಲೀಕರಣದ ಪ್ರಭಾವದಿಂದಾಗಿ ಒಟ್ಟು ಮಾನವ ಸಂಪನ್ಮೂಲದ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. ತಂತ್ರಜ್ಞಾನ ಆಧಾರಿತ ದಕ್ಷತೆ ಮತ್ತು ಶಾಖೆಗಳ ವಿಸ್ತರಣೆ ಎರಡನ್ನೂ ಸರಿದೂಗಿಸಿಕೊಂಡು ಹೋಗುವುದು ಬ್ಯಾಂಕ್‌ನ ಕಾರ್ಯತಂತ್ರವಾಗಿದೆ.
ತಂತ್ರಜ್ಞಾನಕ್ಕೆ ಹೆಚ್ಚಿನ ಹೂಡಿಕೆ ಹಾಗೂ ಎಐ ಪಾತ್ರ
ಬ್ಯಾಂಕ್‌ನ ಉನ್ನತ ಅಧಿಕಾರಿ ಚೌಧರಿ ಅವರು ವಿವರಿಸಿದಂತೆ, ಕಳೆದ ಮೂರ್ನಾಲ್ಕು ವರ್ಷಗಳಿಂದ ಆಕ್ಸಿಸ್ ಬ್ಯಾಂಕ್ ತನ್ನ ಒಟ್ಟು ನಿರ್ವಹಣಾ ವೆಚ್ಚದ ಶೇಕಡಾ 9 ರಿಂದ 10 ರಷ್ಟು ಹಣವನ್ನು ಕೇವಲ ತಂತ್ರಜ್ಞಾನದ ಅಭಿವೃದ್ಧಿಗಾಗಿ ಮೀಸಲಿಡುತ್ತಿದೆ. ವ್ಯವಹಾರದಲ್ಲಿ ಏರಿಳಿತಗಳಿದ್ದರೂ, ದೀರ್ಘಕಾಲೀನ ಲಾಭದ ದೃಷ್ಟಿಯಿಂದ ಈ ಹೂಡಿಕೆಯನ್ನು ಮುಂದುವರಿಸಲಾಗಿದೆ. ಕುತೂಹಲಕಾರಿ ಸಂಗತಿಯೆಂದರೆ, ಬ್ಯಾಂಕ್‌ನಲ್ಲಿ ಎಐ ತಂತ್ರಜ್ಞಾನದ ಬಳಕೆಯು ಪ್ರಸ್ತುತ ಉದ್ಯೋಗ ಕಡಿತಕ್ಕೆ ಕಾರಣವಾಗಿಲ್ಲ. ಎಐ ಪರಿಕರಗಳನ್ನು ಕೇವಲ ಪ್ರಕ್ರಿಯೆಗಳನ್ನು ಸರಳೀಕರಿಸಲು ಮತ್ತು ವಹಿವಾಟಿನ ಸಮಯವನ್ನು ವೇಗಗೊಳಿಸಲು ಬಳಸಲಾಗುತ್ತಿದೆಯೇ ಹೊರತು, ಮನುಷ್ಯರ ಕೆಲಸವನ್ನು ಕಸಿದುಕೊಳ್ಳಲು ಅಲ್ಲ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.
ಹಣಕಾಸು ವಹಿವಾಟಿನ ವಿಚಾರಕ್ಕೆ ಬಂದರೆ, ಮಾರ್ಚ್ ತ್ರೈಮಾಸಿಕದಲ್ಲಿ ಆಕ್ಸಿಸ್ ಬ್ಯಾಂಕ್ ಬಹುಪಾಲು ಸ್ಥಿರವಾದ ಪ್ರದರ್ಶನ ನೀಡಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 7,117 ಕೋಟಿ ರೂ. ಲಾಭ ಗಳಿಸಿದ್ದ ಬ್ಯಾಂಕ್, ಈ ಬಾರಿ 7,071 ಕೋಟಿ ರೂ. ಲಾಭವನ್ನು ದಾಖಲಿಸಿದೆ. ಲಾಭದ ಪ್ರಮಾಣದಲ್ಲಿ ಯಾವುದೇ ದೊಡ್ಡ ಬದಲಾವಣೆ ಕಂಡುಬಂದಿಲ್ಲ.













Click it and Unblock the Notifications