ಕಾರ್ಮಿಕರ ಬಗ್ಗೆ ಮಾತನಾಡಿ ಮತ್ತೆ ಸುದ್ದಿಯಾದ 90 ಗಂಟೆ ಎಸ್‌ಎನ್ ಸುಬ್ರಹ್ಮಣ್ಯನ್
ಇನ್ಫೋಸಿಸ್ ನಾರಾಯಣಮೂರ್ತಿ ಅವರು ಉದ್ಯೋಗಿಗಳು ವಾರಕ್ಕೆ 70 ಗಂಟೆ ಕೆಲಸ ಮಾಡಬೇಕೆನ್ನುವ ಹೇಳಿಕೆ ನೀಡಿ ಸುದ್ದಿಯಾಗಿದ್ದರು. ಬಳಿಕ ಎಲ್&ಟಿ ಅಧ್ಯಕ್ಷ ಎಸ್‌ಎನ್ ಸುಬ್ರಹ್ಮಣ್ಯನ್ 90 ಗಂಟೆ ಕೆಲಸ ಮಾಡಬೇಕೆಂದು ಹೇಳಿ ಉದ್ಯೋಗಿಗಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಎಸ್‌ಎನ್ ಸುಬ್ರಹ್ಮಣ್ಯನ್ ಅವರು ಮತ್ತೊಂದು ವಿವಾದಿನ ಹೇಳಿಕೆ ನೀಡಿ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಸರ್ಕಾರಿ ಕಲ್ಯಾಣ ಯೋಜನೆಗಳ ಲಭ್ಯತೆಯಿಂದಾಗಿ ಕಾರ್ಮಿಕರು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಬರಲು ಹಿಂಜರಿಯುತ್ತಿದ್ದಾರೆ ಎಂದು ಹೇಳಿದ್ದಾರೆ. ಚೆನ್ನೈನಲ್ಲಿ ಮಂಗಳವಾರ ನಡೆದ ಸಿಐಐನ ಮಿಸ್ಟಿಕ್ ಸೌತ್ ಗ್ಲೋಬಲ್ ಲಿಂಕೇಜಸ್ ಸಮ್ಮಿಟ್ 2025ರಲ್ಲಿ ಮಾತನಾಡಿದ ಸುಬ್ರಹ್ಮಣ್ಯನ್, ಕಟ್ಟಡ ನಿರ್ಮಾಣ ಉದ್ಯಮಕ್ಕೆ ಕೆಲಸಗಾರರನ್ನು ಪಡೆಯುವುದು ಕಷ್ಟಕರವಾಗಿದೆ. ಕೆಲಸಗಾರರು ತಮ್ಮ ಸ್ವಂತ ಊರಿನಿಂದ ಬೇರೆಡೆಗೆ ಪ್ರಯಾಣಿಸಲು ಇಷ್ಟಪಡುವುದಿಲ್ಲ. ಅವರಿಗೆ ವಿಶ್ರಾಂತಿಯೇ ಮುಖ್ಯ ಎಂದು ಹೇಳಿದ್ದಾರೆ.

ನರೇಗಾ, ನೇರ ನಗದು ವರ್ಗಾವಣೆ ಮತ್ತು ಜನ್‌ಧನ್ ಖಾತೆಗಳಂತಹ ಯೋಜನೆಗಳು ಕಾರ್ಮಿಕರ ಸ್ಥಳಾಂತರದ ಮೇಲೆ ಪರಿಣಾಮ ಬೀರುತ್ತಿದೆ. ಕಾರ್ಮಿಕರು ಅವಕಾಶಗಳಿಗಾಗಿ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಬರಲು ಇಷ್ಟಪಡುತ್ತಿಲ್ಲ. ಬಹುಶಃ ಅವರ ಸ್ಥಳೀಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿರುವುದರಿಂದ, ವಿವಿಧ ಸರ್ಕಾರಿ ಯೋಜನೆಗಳಿಂದಾಗಿ ಅವರು ಈ ನಡೆ ಅನುಸರಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ, ಕಾರ್ಮಿಕರ ಕೊರತೆಯು ಭಾರತದ ಮೂಲಸೌಕರ್ಯ ನಿರ್ಮಾಣದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅವರು ಹೇಳಿದ್ದಾರೆ.
ಭಾರತವು ವಲಸೆಯ ವಿಶಿಷ್ಟ ಸಮಸ್ಯೆಯನ್ನು ಎದುರಿಸುತ್ತಿದೆ. ಎಲ್&ಟಿ ಕಂಪನಿಗೆ 4 ಲಕ್ಷ ಕೆಲಸಗಾರರ ಅಗತ್ಯ ಇದ್ದರೂ, ಕೆಲಸ ಬಿಡುವವರ ಸಂಖ್ಯೆ ಹೆಚ್ಚಿರುವುದರಿಂದ 16 ಲಕ್ಷ ಜನರನ್ನು ನೇಮಕ ಮಾಡಿಕೊಳ್ಳಬೇಕಾಗುತ್ತದೆ. ಮಧ್ಯಪ್ರಾಚ್ಯದಲ್ಲಿ ಭಾರತಕ್ಕಿಂತ 3-3.5ರಷ್ಟು ಹೆಚ್ಚು ಸಂಬಳ ಸಿಗುವುದರಿಂದ, ಕೆಲಸಗಾರರು ಅಲ್ಲಿಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಹಣದುಬ್ಬರಕ್ಕೆ ಅನುಗುಣವಾಗಿ ಕಾರ್ಮಿಕರ ವೇತನವನ್ನು ಪರಿಷ್ಕರಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.
ಈ ಹಿಂದೆ ಉದ್ಯೋಗಿಗಳು ಭಾನುವಾರದಂದು ಕೂಡ ಕೆಲಸ ಮಾಡಬೇಕೆಂದು ಹೇಳುವ ಮೂಲಕ ಸುದ್ದಿಯಾಗಿದ್ದರು. ನೀವು ಮನೆಯಲ್ಲಿ ಕುಳಿತು ಏನು ಮಾಡುತ್ತೀರಿ? ಎಷ್ಟು ಹೊತ್ತು ನಿಮ್ಮ ಹೆಂಡತಿಯ ಮುಖವನ್ನು ನೋಡುತ್ತಾ ಕುಳಿತುಕೊಂಡಿರುತ್ತೀರಿ? ಕಚೇರಿಗೆ ಬಂದು ಕೆಲಸ ಮಾಡಿ. ನಾನು ಭಾನುವಾರದಂದೂ ಕೆಲಸ ಮಾಡುತ್ತೇನೆ ಎಂದು ಹೇಳಿಕೆ ನೀಡಿ ಸುದ್ದಿಯಾಗಿದ್ದರು.
ಆಘಾತಕಾರಿ ವಿಚಾರ ಬಹಿರಂಗ: ಎಸ್.ಎನ್.ಸುಬ್ರಹ್ಮಣ್ಯನ್ ವಾರಕ್ಕೆ 90 ಗಂಟೆ ಕೆಲಸ ಮಾಡಬೇಕೆಂದು ಹೇಳಿಕೆ ನೀಡಿ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದರು. ಈ ಬೆನ್ನಲ್ಲೇ ಇದೀಗ ಸಮೀಕ್ಷೆಯ ವರದಿಯೊಂದು ಆಘಾತಕಾರಿ ವಿಚಾರವೊಂದನ್ನ ಬಹಿರಂಗಗೊಳಿಸಿದೆ.
ಈಗಿನ ದಿನಮಾನಗಳಲ್ಲಿ ಆರೋಗ್ಯದಲ್ಲಿ ಯಾವುದೇ ತೊಂದರೆಯಿಲ್ಲದೆ, ಮಾನಸಿಕವಾಗಿ ಕುಗ್ಗಿ ಸಮಸ್ಯೆಗಳನ್ನು ಎದುರಿಸುತ್ತಿರುವವರ ಸಂಖ್ಯೆ ಹೆಚ್ಚಾಗಿಬಿಟ್ಟಿದೆ. ಅದರಲ್ಲೂ ಅತಿಯಾದ ಒತ್ತಡದಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನುಂಟು ಮಾಡುತ್ತಿದೆ. ಜೊತೆಗೆ ಕೆಲಸದ ಅವಧಿ ಹೆಚ್ಚಿಸುವ ಬಗ್ಗೆಯೂ ಕೆಲವು ಪ್ರಸಿದ್ಧ ಕಂಪನಿಯ ಮುಖ್ಯಸ್ಥರು ಮಾತನಾಡುತ್ತಿದ್ದಾರೆ. ಈ ನಡುವೆಯೇ ಬಜೆಟ್ ಪೂರ್ವ ಆರ್ಥಿಕ ಸಮೀಕ್ಷೆಯು ವಾರಕ್ಕೆ 60 ಗಂಟೆಗಿಂತ ಹೆಚ್ಚು ಕೆಲಸ ಮಾಡುವುದು ಆರೋಗ್ಯದ ಮೇಲೆ ಹೆಚ್ಚು ಪರಿಣಾಮವನ್ನುಂಟು ಮಾಡಬಹುದು ಎಂದು ಅಧ್ಯಯನಗಳು ಹೇಳಿದ್ದನ್ನು ಉಲ್ಲೇಖಿಸಲಾಗಿದೆ.
ಎಲ್ &ಟಿ ಕಂಪನಿ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಸ್.ಎನ್.ಸುಬ್ರಹ್ಮಣ್ಯನ್ ನೌಕರರು ಭಾನುವಾರ ಮನೆಯಲ್ಲಿ ಕುಳಿತುಕೊಳ್ಳುವ ಬದಲು ಆ ದಿನವೂ ಸೇರಿ ವಾರಕ್ಕೆ 90 ಗಂಟೆಗಳ ಕಾಲ ಕೆಲಸ ಮಾಡಬೇಕೆಂದು ಹೇಳಿಕೆ ನೀಡಿದ್ದರು. ಇದಕ್ಕೆ ಬಹುತೇಕ ಮಂದಿ ಸಾಮಾಜಿಕ ಜಾಲತಾಣದ ಮೂಲಕ ಠಕ್ಕರ್ ಕೊಡುವ ಕೆಲಸವನ್ನು ಈಗಲೂ ಮುಂದುವರೆಸಿದ್ದಾರೆ.
ಇನ್ನು ಇದೀಗ ಆರ್ಥಿಕ ಸಮೀಕ್ಷೆಯ ಕೆಲಸದ ಸಮಯದ ಬಗ್ಗೆ ನಿಲುವವನ್ನು ಸ್ಪಷ್ಟಪಡಿಸಿದೆ. ಎಲ್ & ಟಿ ಅಧ್ಯಕ್ಷರ ಮಾತಿಗೆ ಧ್ವನಿಗೂಡಿಸಿದ್ದ ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರ ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕೆಂದು ಸಲಹೆ ನೀಡಿದ್ದರು. ಆದರೆ, ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವಧಿಗಿಂತ ಹೆಚ್ಚು ಕೆಲಸ ಮಾಡಿದರೆ ಹೆಂಡತಿ ಮನೆ ಬಿಟ್ಟು ಹೋಗುತ್ತಾರೆ ಎಂದು ಠಕ್ಕರ್ ಕೊಟ್ಟಿದ್ದರು.
ಕೆಲಸದಲ್ಲಿ ಕಳೆಯುವ ಸಮಯವನ್ನು ಅನೌಪಚಾರಿಕವಾಗಿ ಉತ್ಪಾದಕತೆಯ ಪ್ರಮಾಣ ಎಂದು ಪರಿಗಣಿಸಲಾಗುತ್ತದೆ. ಆದರೆ, ಹಿಂದಿನ ಅಧ್ಯಯನವು ವಾರಕ್ಕೆ 55-60 ಗಂಟೆಗಳನ್ನ ಮೀರಿದಾಗ ಆರೋಗ್ಯದ ಮೇಲೆ ಹೆಚ್ಚು ಅಪಾಯಕಾರಿ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ.












Click it and Unblock the Notifications