ಟಾಟಾ ಕಂಪನಿ ಜೊತೆ ವ್ಯವಹರಿಸೋ ಈ ಮಹಿಳೆ ಓದಿದ್ದು ಬರೀ 8ನೇ ಕ್ಲಾಸ್, ಉದ್ಯಮಿಯಾಗಲು IIMಗಳಲ್ಲೇ ಓದಬೇಕಿಲ್ಲ!

ಲುಧಿಯಾನದ ಸಮ್ರಾಲಾ ಬಳಿಯ ಭಗವಾನ್‌ಪುರ ಗ್ರಾಮದ 54 ವರ್ಷದ ಚರಂಜಿತ್ ಕೌರ್ ಅಸಂಖ್ಯಾತ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ. ಕೇವಲ 8 ನೇ ತರಗತಿಯವರೆಗೆ ಮಾತ್ರ ಶಾಲೆ ಕಲಿತದ್ದು. ಆದರೆ ತಮ್ಮ ಸರಳ ಕೌಶಲ್ಯವನ್ನು ಯಶಸ್ವಿ ವ್ಯವಹಾರವಾಗಿ ಪರಿವರ್ತಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈಗ ಪ್ರಪಂಚದಾದ್ಯಂತದ ಪ್ರಮುಖ ಕಂಪನಿಗಳಿಗೆ ಜ್ಯೂಟ್‌ ಬ್ಯಾಗ್‌ ಅನ್ನು ಪೂರೈಸುತ್ತಿದ್ದಾರೆ. ಸೀಮಿತ ಸಂಪನ್ಮೂಲಗಳೊಂದಿಗೆ ತನ್ನ ಉದ್ಯಮವನ್ನು ಪ್ರಾರಂಭಿಸಿರುವ ಇವರು ಆರಂಭಿಕ ಕಷ್ಟಗಳನ್ನು ಎದುರಿಸಿಲ್ಲ ಎಂದಲ್ಲ. ಆದರೂ ಕನಸನ್ನು ನನಸಾಗಿಸುವ ಛಲ ಬಿಟ್ಟಿಲ್ಲ. ವ್ಯಕ್ತಿಯ ಸಾಧನೆ ಅವರ ವಿದ್ಯಾರ್ಹತೆಯಿಂದ ನಿರ್ಧಾರವಾಗುವುದಿಲ್ಲ ಬದಲಿಗೆ ದೃಢನಿಶ್ಚಯ, ಧೈರ್ಯ ಮತ್ತು ಕಲಿಯುವ ಇಚ್ಛೆಯಿಂದ ನಡೆಸಲ್ಪಡುತ್ತದೆ ಎನ್ನುವುದನ್ನು ಸಾಬೀತುಪಡಿಸಿ ತೋರಿಸಿದ್ದಾರೆ.

ಹೂವಿನ ಹಾಸಿಗೆಯಾಗಿರಲಿಲ್ಲ ಬದುಕು:

ಚರಂಜಿತ್ ಕೌರ್ ಅವರದ್ದು ನೆಮ್ಮದಿಯ ಬದುಕಾಗಿರಲಿಲ್ಲ, ಬಾಲ್ಯದಿಂದಲೂ ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದ ಕುಟುಂಬ. ಹಾಗಾಗಿ ಜೀವನೋಪಾಯವನ್ನು ಕಂಡುಕೊಳ್ಳುವುದು ಎಷ್ಟು ಮುಖ್ಯ ಎನ್ನುವುದನ್ನು ಅವರು ಬಾಲ್ಯದಲ್ಲಿಯೇ ಅರಿತುಕೊಂಡಿದ್ದರು. ಹಣ ಗಳಿಸುವುದು ಎಷ್ಟು ಮುಖ್ಯ, ಎಷ್ಟು ಕಷ್ಟ ಎನ್ನುವ ಅರಿವು ಕೂಡಾ ಅವರಿಗಿತ್ತು. ಹೇಗಾದರೂ ಮಾಡಿ ತನ್ನ ಕಾಲ ಮೇಲೆ ನಿಲ್ಲಬೇಕು ತನ್ನ ಕುಟುಂಬಕ್ಕೆ ಆಧಾರವಾಗಬೇಕು ಎನ್ನುವ ಆಸೆ ಮನದಾಳದಲ್ಲಿತ್ತು. ಆಗ ಅವರಿಗೆ ಹೊಳೆದದ್ದೇ ಜ್ಯೂಟ್‌ ಬ್ಯಾಗ್‌ ತಯಾರಿಸುವುದು ಹೇಗೆ ಎನ್ನುವುದನ್ನು ಕಲಿಯಬೇಕು ಎಂದು. ಇವರ ಈ ಬಯಕೆಗೆ ಮೊದಲು ಮನೆಯವರಿಂದ ಬೆಂಬಲ ಸಿಗಲಿಲ್ಲ. ಆದರೆ ಚರಂಜಿತ್ ತಮ್ಮ ಹಠ ಬಿಡಲೂ ಇಲ್ಲ.

Charanjit Kaur

ಶ್ರಮಕ್ಕೆ ತಕ್ಕ ಯಶಸ್ಸು:

ಚರಂಜಿತ್ ಕೌರ್ ಸಮ್ರಾಲಾದ ಕೃಷಿ ವಿಜ್ಞಾನ ಕೇಂದ್ರ ದಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಸೇರಿದರು. ಇದು ಅವರ ಕೌಶಲ್ಯಗಳನ್ನು ಸುಧಾರಿಸಲು ಮತ್ತು ವ್ಯವಹಾರದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಸಹಾಯ ಮಾಡಿತು. ಅಲ್ಲಿಂದ ಜ್ಯೂಟ್‌ ಬ್ಯಾಗ್‌ ತಯಾರಿಸುವ ಪಯಣ ಶುರುವಾಯಿತು. ಈಗ ಅವರು ಅವುಗಳನ್ನು ಬೇರೆ ಬೇರೆ ಕಂಪನಿಗಳಿಗೆ ಬ್ಯಾಗ್‌ ಪೂರೈಸುತ್ತಾರೆ. ಈ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನು ಸರಿಯಾಗಿ ಬಳಸಿಕೊಂಡು ಸ್ವಲ್ಪ ಪರಿಶ್ರಮಪಟ್ಟರೆ ಯಾರು ಬೇಕಾದರೂ ಯಶಸ್ವಿಯಾಗಬಹುದು ಎನ್ನುವುದನ್ನು ಸಾಧಿಸಿ ತೋರಿಸಿದ್ದಾರೆ.

1 ಲಕ್ಷ ಸಂಬಳ ನಿರ್ವಹಣೆ ಹೇಗೆ ಮಾಡಬೇಕು? ಸಂಪೂರ್ಣ ಹಣಕಾಸು ಮಾರ್ಗದರ್ಶಿ
1 ಲಕ್ಷ ಸಂಬಳ ನಿರ್ವಹಣೆ ಹೇಗೆ ಮಾಡಬೇಕು? ಸಂಪೂರ್ಣ ಹಣಕಾಸು ಮಾರ್ಗದರ್ಶಿ

ದೊಡ್ಡ ಅವಕಾಶಗಳಿಗೆ ಕಾರಣವಾಯಿತು ಸಣ್ಣ ಆರ್ಡರ್‌ಗಳು:

ತರಬೇತಿ ಮುಗಿದ ನಂತರ, ಚರಂಜಿತ್ ಬ್ಯಾಗ್‌ಗಳನ್ನು ತಯಾರಿಸಲು ಪ್ರಾರಂಭಿಸಿದರು. ಸಣ್ಣ ಸಣ್ಣ ಆರ್ಡರ್‌ಗಳನ್ನು ಪಡೆದರು. ಈ ಸಣ್ಣ ಉದ್ಯಮವು ನೋಡ ನೋಡುತ್ತಲೇ ದೊಡ್ಡ ವ್ಯವಹಾರವಾಗಿ ಬೆಳೆಯಿತು. ಇಂದು ಟಾಟಾ ಮತ್ತು ಜಾಂಟಿ ಆಗ್ರೋದಂತಹ ಕಂಪನಿಗಳ ಆರ್ಡರ್‌ಗಳನ್ನು ಚರಂಜಿತ್ ಪಡೆಯುತ್ತಾರೆ. ವಿದೇಶಗಳಲ್ಲಿ ನೆಲೆಸಿರುವ ಅನೇಕರು ಇವರಿಂದ ಬ್ಯಾಗ್‌ಗಳನ್ನು ಖರೀದಿಸುತ್ತಾರೆ.

ಸ್ಥಿರ ಆದಾಯವಾಗಿ ಪರಿವರ್ತನೆಯಾದ ಕೌಶಲ್ಯ:

ಎಲ್ಲಾ ವ್ಯವಹಾರದಂತೆ, ಚರಂಜಿತ್ ಅವರ ಉದ್ಯಮವು ಅದರದೇ ಆದ ಏರಿಳಿತಗಳನ್ನು ಹೊಂದಿದೆ. ಆರ್ಡರ್‌ಗಳು ನಿಧಾನವಾಗುವ ಸಂದರ್ಭಗಳಿವೆ, ಆದರೆ, ಅವರ ಉದ್ಯಮದ ಒಟ್ಟಾರೆ ಬೆಳವಣಿಗೆ ಪ್ರಭಾವಶಾಲಿಯಾಗಿದೆ. ಸರಾಸರಿ, ಅವರು ತಮ್ಮ ವ್ಯವಹಾರದ ಮೂಲಕ ಪ್ರತಿ ತಿಂಗಳು ಸುಮಾರು 50,000 ರೂಪಾಯಿ ಗಳಿಸುತ್ತಾರೆ. ಈ ಗಳಿಕೆಯು ಅವರ ಕುಟುಂಬದ ಆರ್ಥಿಕ ಸ್ಥಿತಿಯನ್ನು ಸುಧಾರಿಸಿದ್ದು ಮಾತ್ರವಲ್ಲದೆ, ಅವರ ಸಮುದಾಯದ ಇತರ ಮಹಿಳೆಯರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ. ಸುಮಾರು ಒಂದು ಡಜನ್ ಮಹಿಳೆಯರು ಈಗ ಅವರ ಉದ್ಯಮದೊಂದಿಗೆ ಸಂಬಂಧ ಹೊಂದಿದ್ದು, ಆರ್ಡರ್‌ಗಳನ್ನು ಪೂರೈಸುವಲ್ಲಿ ಕೊಡುಗೆ ನೀಡುತ್ತಾರೆ.

ಬಾಡಿಗೆಗೆ ದುಡ್ಡಿಲ್ಲ, ಬದುಕು ಕಟ್ಟಿಕೊಳ್ಳುವ ಛಲ:ಹೆಗಲ ಮೇಲೆ 15 ಕಿಲೋ ತೂಕದ ಸಂಪೂರ್ಣ ಕೆಫೆ ಹೊತ್ತು ಯುವಕನ ವ್ಯಾಪಾರ
ಬಾಡಿಗೆಗೆ ದುಡ್ಡಿಲ್ಲ, ಬದುಕು ಕಟ್ಟಿಕೊಳ್ಳುವ ಛಲ:ಹೆಗಲ ಮೇಲೆ 15 ಕಿಲೋ ತೂಕದ ಸಂಪೂರ್ಣ ಕೆಫೆ ಹೊತ್ತು ಯುವಕನ ವ್ಯಾಪಾರ

ಇನ್ನು ಚರಂಜಿತ್ ತಾವು ಉದ್ಯಮಿಯಾಗಿ ಬೆಳೆದದ್ದು ಮಾತ್ರವಲ್ಲ, ಬೇರೆ ಮಹಿಳೆಯರು ತಮ್ಮ ಕಾಲ ಮೇಲೆ ನಿಲ್ಲಲು ಸಹಾಯ ಮಾಡುತ್ತಿದ್ದಾರೆ.ತಮ್ಮ ಊರಿನ ಮಹಿಳೆಯರಿಗೆ ಜ್ಯೂಟ್‌ ಬ್ಯಾಗ್‌ ತಯಾರಿಸುವುದು ಹೇಗೆ ಎನ್ನುವುದನ್ನು ತಿಳಿಸಿ ಕೊಡುತ್ತಾರೆ. ಹೇಗೆ ಸ್ವಂತವಾಗಿ ಹಣ ಸಂಪಾದಿಸಬಹುದು ಎನ್ನುವ ಅರಿವು ಮೂಡಿಸುತ್ತಾರೆ. ಪ್ರತಿಯೊಬ್ಬ ಮಹಿಳೆಯೂ ಹಣ ಸಂಪಾದಿಸಬೇಕು, ತನ್ನ ಕುಟುಂಬಕ್ಕೆ ಆಧಾರವಾಗಬೇಕು ಎನ್ನುವ ಬಯಕೆ ಇವರದ್ದು.

ವೈವಿಧ್ಯಮಯ ಅಗತ್ಯಗಳನ್ನು ಪೂರೈಸುವ ಉತ್ಪನ್ನಗಳು:

ಚರಂಜಿತ್ ಮತ್ತು ಅವರೊಂದಿಗೆ ಕೆಲಸ ಮಾಡುವ ಜನರು ಬಹಳಷ್ಟು ಬ್ಯಾಗ್‌ಗಳನ್ನು ತಯಾರಿಸುತ್ತಾರೆ. ಅವು ಎಲ್ಲಾ ಆಕಾರ ಮತ್ತು ಗಾತ್ರಗಳಲ್ಲಿ ಬರುತ್ತವೆ. ಸಾಮಾನ್ಯ ಚೀಲಗಳ ಬೆಲೆ 45 ರಿಂದ 100 ರೂ.ರವರೆಗೆ ಇರುತ್ತದೆ. ವಿದೇಶಗಳಲ್ಲಿ ವಾಸಿಸುವ ಜನರಿಗಾಗಿಯೂ ಈ ಚೀಲಗಳನ್ನು ತಯಾರಿಸುತ್ತಾರೆ. ಆ ಬ್ಯಾಗ್‌ಗಳ ವಿನ್ಯಾಸ ಮತ್ತು ಬಳಕೆಯ ಆಧಾರದ ಮೇಲೆ ಅದರ ಬೆಲೆ ನಿರ್ಧಾರವಾಗುತ್ತದೆ. ಕೆಲವೊಮ್ಮೆ ಈ ಬೆಲೆ 1,000ದವರೆಗೂ ತಲುಪುವುದು.

ಶಿಕ್ಷಣವಿಲ್ಲದೆ ಮತ್ತು ಹಣಕಾಸಿನ ಸಮಸ್ಯೆಗಳಿಂದ ಬಳಲುವುದರಿಂದ ಹಿಡಿದು ಯಶಸ್ವಿ ವ್ಯವಹಾರವನ್ನು ರಚಿಸುವವರೆಗೆ, ಚರಂಜಿತ್ ಕೌರ್ ಅವರ ಕಥೆ ನಿಜವಾಗಿಯೂ ಸ್ಪೂರ್ತಿದಾಯಕವಾಗಿದೆ. ದೃಢನಿಶ್ಚಯದಿಂದ ಇದ್ದಾಗ ಏನೂ ಬೇಕಾದರೂ ಮಾಡಬಹುದು ಎಂಬುದನ್ನು ಇದು ತೋರಿಸುತ್ತದೆ. ಇಂದು ಅವರು ಕೇವಲ ಉದ್ಯಮಿ ಅಲ್ಲ, ಅನೇಕ ಮಹಿಳೆಯರ ಆಶಾಕಿರಣ. ನಿಮ್ಮಲ್ಲಿ ಕೌಶಲ್ಯವಿದ್ದರೆ ನಿಮ್ಮ ಮೇಲೆ ನಂಬಿಕೆ ಇಟ್ಟರೆ, ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಇವರೇ ಸಾಕ್ಷಿ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+