ಬೀದರ್ ಕಾರ್ಖಾನೆಯಲ್ಲಿ ಅನಿಲ ಸೋರಿಕೆ: 2ಸಾವು 8 ಮಂದಿಗೆ ಗಂಭೀರ ಗಾಯ, ಆಗಿದ್ದೇನು?
ಬೆಂಗಳೂರು, ಜನವರಿ 23: ಕಲ್ಯಾಣ ಕರ್ನಾಟಕದ ಬೀದರ್ ಜಿಲ್ಲೆಯ ಹುಮನಾಬಾದ್ ಕೈಗಾರಿಕಾ ಪ್ರದೇಶದಲ್ಲಿನ ರಾಸಾಯನಿಕ ಕಾರ್ಖಾನೆಯಲ್ಲಿ ವಿಷಕಾರಿ ಅನಿಲ ಸೋರಿಕೆಯಾಗಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ನಡೆದಿದೆ. ಘಟನೆಯಲ್ಲಿ ಒಟ್ಟು ಎಂಟು ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿದ ಘಟನೆ ಸೋಮವಾರ ನಡೆದಿದೆ.
ಅಧಿಕಾರಿಗಳು ಹೇಳುವ ಪ್ರಕಾರ, ಮೃತರನ್ನು ಹುಮನಾಬಾದ್‌ನ ವಡ್ಡನ ಕೆರೆ ಗ್ರಾಮದ ನಿವಾಸಿ ಮೊಹಮ್ಮದ್ ಶಾಬಾದ್ (21), ಮಧ್ಯಪ್ರದೇಶದ ಇಂದ್ರಜೀತ್ (23) ಎಂದು ಗುರುತಿಸಲಾಗಿದೆ. ಘಟನೆ ವೇಳೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಕೈಗಾರಿಕಾ ಪ್ರದೇಶದ ಪ್ರಸನ್ನ ಪ್ರಿ-ಪ್ರೊಸೆಸಿಂಗ್ ಲಿಮಿಟೆಡ್ ಕಾರ್ಖಾನೆಯಲ್ಲಿ ಈ ದುರಂತ ನಡೆದಿದೆ. ರಾಸಾಯನಿಕ ಗಾಳಿಯನ್ನು ಸೇವಿಸಿದ ಇತರ ಎಂಟು ಕಾರ್ಮಿಕರು ಅಸ್ವಸ್ಥರಾಗಿದ್ದಾರೆ. ಅವರನ್ನು ಹುಮನಾಬಾದ್‌ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬೀದರ್ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸಣ್ಣ ಮಾಹಿತಿ ನೀಡಿದರು.
ವಿಷಾನೀಲ ಸಮೀಪದ ಪ್ರದೇಶಕ್ಕೆ ವ್ಯಾಪಿಸಿಲ್ಲ
ಘಟನೆ ಬಳಿಕ ಈ ಪ್ರದೇಶದಲ್ಲಿನ ಕೈಗಾರಿಕಾ ಸ್ಥಾವರಗಳ ಮೇಲೆ ಪರಿಣತಿ ಹೊಂದಿರುವ ಕಂಪನಿಯು ಅಧಿಕಾರಿಗಳ ಪರಿಶೀಲಿಸಿದರು. ಅಪಾಯಕಾರಿ ರಾಸಾಯನಿಕ ತ್ಯಾಜ್ಯದಿಂದ ಹೊರಹೊಮ್ಮುವ ವಿಷಕಾರಿ ಹೊಗೆ ಪರಿಣಾಮವಾಗಿ ಅನಿಲ ಸೋರಿಕೆಯಾಗಿದೆ ಎಂದು ಬಾಯ್ಲರ್‌ಗಳ ಇನ್‌ಸ್ಪೆಕ್ಟರ್ ಮತ್ತು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳ ಪ್ರಾಥಮಿಕ ತನಿಖೆ ತಿಳಿಸಿದೆ.
ಅದೃಷ್ಟವಶಾತ್ ಈ ರಾಸಾಯನಿಕ ಅನಿಲ ಸಮೀಪದ ಪ್ರದೇಶಗಳಿಗೆ ಹರಡಿಲ್ಲ ಎಂದು ಬೀದರ್ ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ ಸಾರ್ವಜನಿಕರಿಗೆ ಧೈರ್ಯ ತುಂಬಿದರು. ಕಾರ್ಖಾನೆಗಳು ಮತ್ತು ಬಾಯ್ಲರ್‌ಗಳು ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳ ತನಿಖೆಯ ನಂತರವೇ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದರು.

ಆಸ್ಪತ್ರೆಗೆ ಸ್ಥಳಿಯ ನಾಯಕರ ಭೇಟಿ, ಭರವಸೆ
ಘಟನೆಯು ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿದರು. ಸ್ಥಳದಲ್ಲಿ ಸುವ್ಯವಸ್ಥೆ ಕಾಪಾಡಲು ಮತ್ತು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜಿಸಿತು. ಘಟನೆ ನಂತರ ಹುಮನಾಬಾದ್ ಶಾಸಕ ಸಿದ್ದಲಿಂಗಪ್ಪ ಪಾಟೀಲ್, ಎಂಎಲ್ ಸಿ ಭೀಮರಾವ್ ಪಾಟೀಲ್ ಅವರು ಗಾಯಾಳುಗಳು ಇದ್ದ ಆಸ್ಪತ್ರೆಗೆ ಭೇಟಿ ನೀಡಿದರು.
ಗಾಯಾಳು ಆರೋಗ್ಯ ವಿಚಾರಿಸಿದ್ದಲ್ಲದೇ, ಸಂತ್ರಸ್ತರ ಎಲ್ಲಾ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಅವರು ಭರವಸೆ ನೀಡಿದರು. ಮೃತರ ಕುಟುಂಬಗಳಿಗೆ ಹಾಗೂ ಅಸ್ವಸ್ಥರಾದವರಿಗೆ ಸರ್ಕಾರ ಆರ್ಥಿಕ ಪರಿಹಾರ ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.
ಪರಿಹಾರಕ್ಕೆ ಒತ್ತಾಯ
ಈ ವೇಳೆ ಶಾಸಕ ಪಾಟೀಲ ಮಾತನಾಡಿ, ಮೃತರು ಮತ್ತು ಸಂತ್ರಸ್ತ ಕಾರ್ಮಿಕರಿಗೆ ಆರ್ಥಿಕ ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಘಟನೆಯನ್ನು ಸರ್ಕಾರದ ಗಮನಕ್ಕೆ ತರಲಗುವುದು. ಕಾರ್ಖಾನೆಯ ಮಾಲೀಕರಿಗೆ ಸಾಕಷ್ಟು ಪರಿಹಾರವನ್ನು ನೀಡುವಂತೆ ಒತ್ತಾಯಿಸಲಿದ್ದೇವೆ ಎಂದು ಹೇಳಿದರು.
ಮೃತ ಕಾರ್ಮಿಕರ ಮೃತದೇಹ ಗ್ರಾಮಗಳಿಗೆ ಸಾಗಿಸಲು ಅನುಕೂಲ ಮಾಡಿಕೊಡುವಂತೆ ಜಿಲ್ಲಾಧಿಕಾರಿ ರೆಡ್ಡಿ ಅವರು ಕಾರ್ಖಾನೆ ಮಾಲೀಕರಿಗೆ ಸೂಚಿಸಿದರು. ಸದ್ಯ ಪ್ರಕರಣ ದಾಖಲಾಗಿದೆ.












Click it and Unblock the Notifications