ಬೀದರ್: ನಗರಸಭೆ ಚುನಾವಣೆಯಲ್ಲಿ ಗೆದ್ದು ಬೀಗಿದ ಕಾಂಗ್ರೆಸ್, ಖಾತೆ ತೆರೆದ ಆಪ್!
ಬೀದರ್, ಏಪ್ರಿಲ್ 30: ಬೀದರ್ ನಗರಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅತೀ ಹೆಚ್ಚು ಸ್ಥಾನಗಳಲ್ಲಿ ಗೆದ್ದು ಬೀಗಿದರೆ, ಆಮ್ ಆದ್ಮಿ ಪಕ್ಷ ಮೊದಲ ಬಾರಿ ಖಾತೆ ತೆರೆದಿದೆ.
ಆಡಳಿತರೂಢ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿಯಲು ಭಾರೀ ಸರ್ಕಸ್ ನಡೆಸಿತ್ತಾದರೂ ಫಲ ನೀಡಿಲ್ಲ. ಲಾಕ್‌ಡೌನ್‌ನಿಂದಾಗಿ ಗೆದ್ದ ಅಭ್ಯರ್ಥಿಗಳಿಗೆ ತಮ್ಮ ಖುಷಿ ಹಂಚಿಕೊಳ್ಳಲೂ ಆಗದಂತ ಪರಿಸ್ಥಿತಿ ನಿರ್ಮಾಣವಾಗಿದೆ.
35 ಸ್ಥಾನಗಳ ಬಲದ ಬೀದರ್ ನಗರಸಭೆಯಲ್ಲಿ ವಾರ್ಡ್ ನಂ.26 ಹಾಗೂ 32 ಸ್ಥಾನಗಳಿಗೆ ನ್ಯಾಯಾಲಯದ ತಡೆಯಾಜ್ಞೆ ಇದೆ. ವಾರ್ಡ್ ನಂ.28ರ ಬಿಜೆಪಿ ಅಭ್ಯರ್ಥಿ ರಾಜಾರಾಂ ಅವಿರೋಧ ಆಯ್ಕೆಯಾಗಿದ್ದು, ಉಳಿದ 32 ಸ್ಥಾನಗಳಿಗೆ ಚುನಾವಣೆ ನಡೆದಿತ್ತು.

ಕಾಂಗ್ರೆಸ್ 15 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ್ದರೆ, ಬಿಜೆಪಿ 8 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಜೆಡಿಎಸ್ 7 ಸ್ಥಾನಗಳಲ್ಲಿ ಗೆದ್ದಿದ್ದರೆ, ಎಂಐಎಐಎ ಪಕ್ಷ ಎರಡು ಸ್ಥಾನಗಳಲ್ಲಿ ವಿಜಯಿಯಾಗಿದ್ದು, ಆಪ್ ಕೂಡ ತನ್ನ ಚೊಚ್ಚಲ ಸ್ಪರ್ಧೆಯಲ್ಲಿ ಗೆಲುವಿನ ನಗೆ ಬೀರಿದೆ.
ಅಧಿಕಾರ ಹಿಡಿಯಲು 17 ಸ್ಥಾನಗಳ ಅಗತ್ಯವಿದ್ದು, ಕಾಂಗ್ರೆಸ್‌ಗೆ ಇನ್ನೆರಡು ಸ್ಥಾನಗಳ ಅಗತ್ಯವಿದೆ. ಮಿನಿ ಮಹಾಸಮರ ಎಂದೇ ಪರಿಗಣಿಸಲ್ಪಸುವ ನಗರಸಭೆ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳ ನಡುವೆ ಭಾರೀ ಪೈಪೋಟಿ ಏರ್ಪಟ್ಟಿತ್ತು.

ಬೀದರ್ ನಗರದ ನೆಹರು ಕ್ರೀಡಾಂಗಣದ ಹತ್ತಿರವಿರುವ ಗುರುನಾನಕ್ ಪಬ್ಲಿಕ್ ಸ್ಕೂಲ್‌ನಲ್ಲಿ ನಗರಸಭೆ ಚುನಾವಣೆ ಮತ ಏಣಿಕೆ ಕಾರ್ಯ ನಡೆದಿದ್ದು, ಸುತ್ತಮುತ್ತ ಭಾರೀ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಯಾವೊಂದು ಪಕ್ಷದ ಕಾರ್ಯಕರ್ತರೂ ಆ ಕಡೆಗೆ ಸುಳಿಯಲು ಅವಕಾಶ ಇರಲಿಲ್ಲ.
ಮೊದಲ ಬಾರಿ ಬೀದರ್ ನಗರಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಗೆದ್ದಿದ್ದು, ಬೀದರ್ ತಂಡಕ್ಕೆ ಅಭಿನಂದನೆಗಳನ್ನು ಆಮ್ ಆದ್ಮಿ ಪಕ್ಷ ತಿಳಿಸಿದೆ.












Click it and Unblock the Notifications