ಅಪಹರಣಕಾರನನ್ನು ಬಂಧಿಸುವ ಕಾರ್ಯಾಚರಣೆಗಾಗಿ ಸತತ 260 ಕಿ.ಮೀ ಸಾಗಿದ ರೈಲು
ಭೋಪಾಲ್, ಅಕ್ಟೋಬರ್ 26: ಅಪಹರಣಕ್ಕೆ ಒಳಗಾದ ಮೂರು ವರ್ಷದ ಬಾಲಕಿಯನ್ನು ರಕ್ಷಿಸಲು ರೈಲೊಂದನ್ನು ಸುಮಾರು 260 ಕಿ.ಮೀ. ಯಾವುದೇ ನಿಲುಗಡೆ ಇಲ್ಲದೆ ನಿರಂತರವಾಗಿ ಓಡಿಸಿದ ಅಚ್ಚರಿದಾಯಕ ಹಾಗೂ ಸಿನಿಮೀಯ ಘಟನೆ ನಡೆದಿದೆ.
ಉತ್ತರ ಪ್ರದೇಶದ ಲಲಿತಪುರದಿಂದ ಮಧ್ಯಪ್ರದೇಶದ ಭೋಪಾಲ್‌ವರೆಗೆ ರೈಲು ಒಂದೂ ತಡೆಯಿಲ್ಲದೆ ಸಾಗಿದೆ. ಬಾಲಕಿಯನ್ನು ಅಪಹರಿಸಿದ್ದ ದುಷ್ಕರ್ಮಿ ರೈಲಿನೊಳಗಿದ್ದ. ಆತ ತಪ್ಪಿಸಿಕೊಳ್ಳದಂತೆ ತಡೆಯಲು ರೈಲ್ವೆ ಪೊಲೀಸರು ಜತೆಯಾಗಿ ಕೆಲಸ ಮಾಡಿದ್ದಾರೆ. ಈ ಸಾಹಸಮಯ ಕಾರ್ಯಾಚರಣೆ ಯಶಸ್ವಿಯಾಗಿದೆ.
ಲಲಿತಪುರದಿಂದ ಹೊರಟಿದ್ದ ರೈಲು ಭೋಪಾಲದಲ್ಲಿ ನಿಂತಿದೆ. ಅಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಲಲಿತಪುರ ರೈಲು ನಿಲ್ದಾಣದಿಂದ ಮಗುವನ್ನು ಅಪಹರಿಸಲಾಗಿತ್ತು. ರೈಲು ನಿಲ್ದಾಣದಲ್ಲಿ ಮಗುವನ್ನು ಅಪಹರಿಸಿದ್ದ ದುಷ್ಕರ್ಮಿ, ಭೋಪಾಲಕ್ಕೆ ಹೊರಟಿದ್ದ ರಪ್ತಿಸಾಗರ್ ಎಕ್ಸ್‌ಪ್ರೆಸ್ ರೈಲನ್ನು ಏರಿದ್ದ.

ಬಾಲಕಿಯ ಕುಟುಂಬದಿಂದ ದೂರು ಬಂದ ಕೂಡಲೇ ಸಕ್ರಿಯರಾದ ರೈಲ್ವೆ ಪೊಲೀಸ್ ಪಡೆ (ಆರ್‌ಪಿಎಫ್) ನಿಲ್ದಾಣದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಅದರಲ್ಲಿ ಬಾಲಕಿಯನ್ನು ಅಪಹರಿಸಿದ ವ್ಯಕ್ತಿ, ಆಕೆಯೊಂದಿಗೆ ರೈಲು ಹತ್ತಿರುವುದು ಕಂಡುಬಂದಿದೆ. ಕೂಡಲೇ ಲಲಿತಪುರದ ಪೊಲೀಸರು ಭೋಪಾಲದಲ್ಲಿರುವ ಕಾರ್ಯಾಚರಣಾ ನಿಯಂತ್ರಣ ಘಟಕಕ್ಕೆ ಸೂಚನೆ ನೀಡಿದ್ದಾರೆ. ಲಲಿತಪುರದಿಂದ ಹೊರಟ ರೈಲನ್ನು ಭೋಪಾಲದವರೆಗೆ ಎಲ್ಲಿಯೂ ನಿಲ್ಲಿಸದಂತೆ ಆರ್‌ಪಿಎಫ್ ಇನ್‌ಸ್ಪೆಕ್ಟರ್ ಮನವಿ ಮಾಡಿದ್ದಾರೆ.
ಮಾರ್ಗಮಧ್ಯೆ ಇಳಿಯುವ ಅಪಹರಣಕಾರನ ಯೋಜನೆಯನ್ನು ಕೆಡಿಸಿದ ಪೊಲೀಸರ ತಂಡ, ನೇರವಾಗಿ ಭೋಪಾಲಕ್ಕೆ ರೈಲು ತೆರಳುವಂತೆ ಮಾಡಿದೆ. ಅಲ್ಲಿ ರೈಲು ಬರುವುದನ್ನೇ ಕಾದಿದ್ದ ಪೊಲೀಸ್ ಸಿಬ್ಬಂದಿ ಆತ ರೈಲಿನಿಂದ ಇಳಿಯುತ್ತಿದ್ದಂತೆಯೇ ಬಂಧಿಸಿದೆ. ಬಾಲಕಿ ಸುರಕ್ಷಿತಳಾಗಿದ್ದು, ಆಕೆಯನ್ನು ಕುಟುಂಬದವರಿಗೆ ಒಪ್ಪಿಸಲಾಗಿದೆ.
ಅಪಹರಣಕಾರನೊಬ್ಬನನ್ನು ಹಿಡಿಯು ಸುಮಾರು 260 ಕಿ.ಮೀ. ಎಲ್ಲಿಯೂ ನಿಲ್ಲಿಸದಂತೆ ರೈಲನ್ನು ಓಡಿಸಿರುವುದು ಭಾರತೀಯ ರೈಲ್ವೆಯ ಇತಿಹಾಸದಲ್ಲಿ ಇದೇ ಮೊದಲು.












Click it and Unblock the Notifications