ಕೊಲೆ ಆರೋಪಿ ಪತ್ತೆ ಹಚ್ಚಲು ಬಾಬಾ ಬಳಿ ಸಹಾಯ ಕೇಳಿದ ಪೊಲೀಸ್ ಅಧಿಕಾರಿ ಅಮಾನತು
ಭೋಪಾಲ್, ಆಗಸ್ಟ್ 19: ಯಾವುದೇ ಅಪರಾಧ ನಡೆದಾಗ ಅದನ್ನು ಕೂಲಂಕುಷವಾಗಿ ತನಿಖೆ ನಡೆಸಿ ಅಪರಾಧಿಯನ್ನು ಕಂಡು ಹಿಡಿಯುವುದು, ಸೂಕ್ತ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಆತನಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು ಪೊಲೀಸರ ಕರ್ತವ್ಯ, ಅಪರಾಧಿಯನ್ನು ಪತ್ತೆಹಚ್ಚಲು ವೈಜ್ಞಾನಿಕ ಮತ್ತು ಸಮರ್ಪಕ ತನಿಖೆ ಬೇಕು. ಆದರೆ ಇಲ್ಲೊಬ್ಬ ಪೊಲೀಸ್ ಅಧಿಕಾರಿ ಕೊಲೆ ಅಪರಾಧಿ ಯಾರೆಂದು ಪತ್ತೆಹಚ್ಚಲು ಬಾಬಾ ಮೊರೆ ಹೋಗಿದ್ದಾನೆ.
ಕೊಲೆ ಪ್ರಕರಣವನ್ನು ಭೇದಿಸಲು ಸಹಾಯ ಮಾಡುವಂತೆ ಸಮವಸ್ತ್ರಧಾರಿ ಪೊಲೀಸ್ ಅಧಿಕಾರಿಯೊಬ್ಬ ಬಾಬಾನಲ್ಲಿ ವಿನಂತಿ ಮಾಡುತ್ತಿರುವ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ. ಪೊಲೀಸನ ಅಜ್ಞಾನಕ್ಕೆ ಎಲ್ಲೆಡೆಯಿಂದ ಛೀಮಾರಿ ಹಾಕಲಾಗುತ್ತಿದೆ.
ಈ ಘಟನೆ ನಡೆದಿರುವುದು ಮಧ್ಯಪ್ರದೇಶದಲ್ಲಿ. ಛತ್ತರ್‌ಪುರ ಜಿಲ್ಲೆಯ ಬಮಿತಾ ಪೊಲೀಸ್ ಠಾಣೆಯಲ್ಲಿ ಪೋಲಿಸ್ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ಬಾಬಾನಿಂದ ದೈವಿಕ ಸಹಾಯ ಕೇಳುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. 17 ವರ್ಷದ ಬಾಲಕಿಯ ಹತ್ಯೆಯ ಶಂಕಿತ ಆರೋಪಿಯನ್ನು ಗುರುತಿಸುವಲ್ಲಿ ಜುಲೈ 28 ರಂದು ಧಾರ್ಮಿಕ ಗುರು ಬಾಬಾ ಪಾಂಡೋಖರ್ ಸರ್ಕಾರ್ ಮಹಾರಾಜ್ ಸಹಾಯ ಕೇಳಲಾಗಿದೆ.
ಬಮಿತಾ ಪೊಲೀಸರು ಪ್ರಕರಣದ ತನಿಖೆ ನಡೆಸುವಾಗ ಧಾರ್ಮಿಕ ಪ್ರಚಾರಕನ ಮಾರ್ಗದರ್ಶನವನ್ನು ಪಡೆದಿದ್ದಲ್ಲದೆ, ಬಾಬಾನ ಸೂಚನೆಯಂತೆ ಪ್ರಕರಣದಲ್ಲಿ ಕೊಲೆಯಾದ ಹುಡುಗಿಯ ಚಿಕ್ಕಪ್ಪನನ್ನು ಬಂಧಿಸುವ ಮೂಲಕ ತಮ್ಮ ಅಜ್ಞಾನವನ್ನು ಪ್ರದರ್ಶಿಸಿದ್ದಾರೆ.

ಪೊಲೀಸ್ ಅಧಿಕಾರಿ ಅಮಾನತು ಮಾಡಿದ ಎಸ್‌ಪಿ
ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸ್ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಂಡಿದೆ. ಪ್ರಕರಣದಲ್ಲಿ ಕಾರ್ಯನಿರ್ವಹಿಸಿದ ಛತ್ತರ್‌ಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಚಿನ್ ಶರ್ಮಾ ಅವರು ಸಂಬಂಧಪಟ್ಟ ಎಎಸ್‌ಐ, ಎ ಶರ್ಮಾ ಅವರನ್ನು ಅಮಾನತುಗೊಳಿಸಿದ್ದಾರೆ. ಬಮಿತಾ ಪೊಲೀಸ್ ಠಾಣೆಯ ಉಸ್ತುವಾರಿ ಪಂಕಜ್ ಶರ್ಮಾ ಅವರನ್ನು ವರ್ಗಾವಣೆ ಮಾಡಲಾಗಿದೆ.
"ಈ ವಿಷಯದಲ್ಲಿ ಹೆಚ್ಚಿನ ತನಿಖೆಯನ್ನು ಉಪವಿಭಾಗಾಧಿಕಾರಿ ಪೊಲೀಸ್ (ಎಸ್‌ಡಿಒಪಿ-ಖಜುರಾಹೊ) ಮನಮೋಹನ್ ಸಿಂಗ್ ಬಘೇಲ್ ನಡೆಸಲಿದ್ದಾರೆ" ಎಂದು ಛತ್ತರ್‌ಪುರ ಜಿಲ್ಲಾ ಪೊಲೀಸ್ ಉಪ ಎಸ್ಪಿ ಮತ್ತು ಅಧಿಕೃತ ವಕ್ತಾರ ಶಶಾಂಕ್ ಜೈನ್ ಶುಕ್ರವಾರ ತಿಳಿಸಿದ್ದಾರೆ.

ಆರೋಪಿಗಳು ಯಾರೆಂದು ಬಾಬಾನ ಬಳಿ ಪ್ರಶ್ನೆ
ಬಮಿತಾ ಪೊಲೀಸ್ ಠಾಣೆಯ ಎಎಸ್‌ಐ ಶರ್ಮಾ ಅವರು ಭಕ್ತರ ಗುಂಪಿನ ಮುಂದೆ ಬಾಬಾನಿಂದ ಸಹಾಯ ಕೇಳುತ್ತಿರುವ ವಿಡಿಯೋ ವೈರಲ್ ಆಗಿದೆ. 2.50 ನಿಮಿಷಗಳ ವೀಡಿಯೊದಲ್ಲಿ, ಧಾರ್ಮಿಕ ಬೋಧಕನು ತಾನು ಕೆಲವು ವ್ಯಕ್ತಿಗಳ ಹೆಸರನ್ನು ಕರೆದಿದ್ದೇನೆ ಎಂದು ಹೇಳುವುದನ್ನು ಕೇಳಬಹುದು.
ಧಾರ್ಮಿಕ ಬೋಧಕರು ಸಮವಸ್ತ್ರಧಾರಿ ಪೊಲೀಸರಿಗೆ ಪ್ರಧಾನ ಶಂಕಿತ ಮಜ್ಗುವಾನ್ ಪ್ರದೇಶದವರು ಎಂದು ಹೇಳುವುದನ್ನು ಕಾಣಬಹುದು, ಪ್ರಕರಣದ ತಳಹದಿಯನ್ನು ಪಡೆಯಲು ಆತ ಸಹಾಯ ಮಾಡುತ್ತಾನೆ ಎನ್ನುವುದನ್ನು ಕೇಳಬಹುದು."ನಾನು ಯಾರ ಹೆಸರನ್ನು ತೆಗೆದುಕೊಳ್ಳಲಿಲ್ಲವೋ ಆ ವ್ಯಕ್ತಿ ನಿಜವಾಗಿ ಅಪರಾಧ ಎಸಗಿದ್ದಾನೆ ಎಂದು ನಾನು ಹೇಳುತ್ತಿಲ್ಲ, ಆದರೆ ಆ ವ್ಯಕ್ತಿ ನಿಮ್ಮನ್ನು ಪ್ರಕರಣದ ತನಿಖೆ ಭೇದಿಸಲು ಸಹಾಯ ಮಾಡುತ್ತಾನೆ ಮತ್ತು ಸತ್ಯವು ಅಂತಿಮವಾಗಿ ಮೇಲುಗೈ ಸಾಧಿಸುತ್ತದೆ. ನಾಲ್ಕು ಜನರ ಗ್ಯಾಂಗ್‌ಗೆ ಇದರಲ್ಲಿ ಭಾಗಿಯಾಗಿದೆ" ಎಂದು ಬಾಬಾ ಪೊಲೀಸರಿಗೆ ಹೇಳುತ್ತಿರುವುದು ಕಂಡುಬರುತ್ತದೆ.

ಬಾಬಾ ಮಾತು ಕೇಳಿ ಮೃತ ಮಹಿಳೆಯ ಚಿಕ್ಕಪ್ಪನ ಬಂಧನ
ಕೆಲವು ದಿನಗಳ ನಂತರ, ಬಮಿತಾ ಪೊಲೀಸರು ಕೊಲೆಯಾದ ಹುಡುಗಿಯ ಚಿಕ್ಕಪ್ಪ ತಿರತ್ ಅಹಿರ್ವಾರ್ ಅವರನ್ನು ಕಸ್ಟಡಿಗೆ ತೆಗೆದುಕೊಂಡರು. ಅವನು ತನ್ನ ಸೊಸೆ ಯಾರೊಂದಿಗೋ ಅಕ್ರಮ ಸಂಬಂಧವನ್ನು ಹೊಂದಿದ್ದಾಳೆ ಎಂಬ ಅನುಮಾನವಿದೆ ಎಂದು ಹೇಳಿಕೊಂಡಿದ್ದಾನೆ. ಆಕೆಯ ಚಾರಿತ್ರ್ಯದ ಬಗ್ಗೆ ಅನುಮಾನಗೊಂಡ ಆತ ಮಹಿಳೆಯನ್ನು ಕೊಲೆ ಮಾಡಿ ಬಮಿತಾ ಪೊಲೀಸ್ ಠಾಣೆ ವ್ಯಾಪ್ತಿಯ ಓಟಾ ಪೂರ್ವ ಗ್ರಾಮದ ಬಾವಿಗೆ ಎಸೆದು ಪರಾರಿಯಾಗಿದ್ದಾಗಿ ಆರೋಪಿಸಲಾಗಿದೆ.
ಬಂಧಿತ ತೀರ್ಥ ಅಹಿರ್ವಾರ್ ಅವರ ಸಂಬಂಧಿಕರು "ಬಮಿತಾ ಪೊಲೀಸ್ ಠಾಣೆಯ ಇನ್‌ಚಾರ್ಜ್ ಎಎಸ್‌ಐಗೆ ಪಾಂಡೋಖರ್ ಸರ್ಕಾರ್ ಮಹಾರಾಜ್ ಮಾರ್ಗದರ್ಶನ ನೀಡುತ್ತಿರುವ ವೀಡಿಯೊವನ್ನು ನಮಗೆ ತೋರಿಸಿದರು ಮತ್ತು ನಂತರ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ಬಂಧಿತ ತಿರತ್ ಅಹಿರ್ವಾರ್‍ಗೆ ಪೊಲೀಸ್ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಲಾಯಿತು ಮತ್ತು ಅಪರಾಧ ಮಾಡಿರುವುದಾಗಿ ಒಪ್ಪಿಕೊಳ್ಳುವಂತೆ ಒತ್ತಾಯಿಸಲಾಯಿತು ಎಂದು ಆರೋಪಿಸಲಾಗಿದೆ.
ನಂತರ ಆತನನ್ನು ಜೈಲಿಗೆ ಕಳುಹಿಸಲಾಯಿತು, ಆದರೆ ಈಗಾಗಲೇ ಪೊಲೀಸ್ ಕಸ್ಟಡಿಯಲ್ಲಿದ್ದ ಇತರ ಮೂವರು ಶಂಕಿತರನ್ನು ಬಿಡುಗಡೆ ಮಾಡಲಾಯಿತು ಎಂದು ತೀರತ್ ಅವರ ಸಂಬಂಧಿಗಳು ಆರೋಪಿಸಿದ್ದಾರೆ.

ಉನ್ನತ ಅಧಿಕಾರಿಗಳಿಗೆ ದೂರು ಕೊಟ್ಟ ಗ್ರಾಮಸ್ಥರು
ಬಾಬಾನ ಮಾತು ಕೇಳಿ ಆರೋಪಿ ಎಂದು ಮೃತ ಮಹಿಳೆಯ ಚಿಕ್ಕಪ್ಪನನ್ನು ಬಂಧಿಸಿರುವುದಕ್ಕೆ ಆಘಾತಕ್ಕೊಳಗಾದ ತಿರತ್‌ನ ಗ್ರಾಮದ ನಿವಾಸಿಗಳು ಇತ್ತೀಚೆಗೆ ಛತ್ತರ್‌ಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಚಿನ್ ಶರ್ಮಾ ಅವರಿಗೆ ಸಂಪೂರ್ಣ ವಿಷಯ ತಿಳಿಸಿ, ದೂರು ನೀಡಿದ್ದಾರೆ.
ವಿಚಾರ ತಿಳಿಯುತ್ತಿದ್ದಂತೆ ಎಸ್‌ಪಿ-ಛತ್ತರ್‌ಪುರ ಜಿಲ್ಲೆ ಸಂಬಂಧಪಟ್ಟ ಸಹಾಯಕ ಸಬ್‌ಇನ್ಸ್‌ಪೆಕ್ಟರ್ ಎ. ಶರ್ಮಾರನ್ನು ತಕ್ಷಣ ಅಮಾನತುಗೊಳಿಸುವಂತೆ ಆದೇಶ ನೀಡಿದ್ದಾರೆ. ಬಮಿತಾ ಪೊಲೀಸ್ ಠಾಣೆಯ ಉಸ್ತುವಾರಿ ಪಂಕಜ್ ಶರ್ಮಾ ಅವರನ್ನು ಜಿಲ್ಲಾ ಪೊಲೀಸ್ ಲೈನ್‌ಗಳಿಗೆ ವರ್ಗಾವಣೆ ಮಾಡಲಾಗಿದೆ. ಇಡೀ ಪ್ರಕರಣ ಮತ್ತು ಸಂಬಂಧಿತ ಅಂಶಗಳ ಕುರಿತು ಹೆಚ್ಚಿನ ತನಿಖೆ ನಡೆಸುವಂತೆ ಉಪವಿಭಾಗಾಧಿಕಾರಿ ಪೊಲೀಸ್ ಮನಮೋಹನ್ ಸಿಂಗ್ ಬಘೇಲ್ ಅವರಿಗೆ ಸೂಚಿಸಲಾಗಿದೆ.












Click it and Unblock the Notifications