Zombis Drug: ಬೆಂಗಳೂರಲ್ಲಿ ಜಾಂಬಿ ಡ್ರಗ್ಸ್ ಸೇವಿಸಿ ಯುವಕನ ವಿಚಿತ್ರ ವರ್ತನೆ: ನಟ ದುನಿಯಾ ವಿಜಯ್ ವಿಡಿಯೋ ವೈರಲ್
Zombis Drug: ವಿದೇಶಗಳಲ್ಲಿ ಕುಖ್ಯಾತಿ ಗಳಿಸಿದ್ದ ಹಾಗೂ ಯುವ ಸಮೂಹಕ್ಕೆ ಮಾರಕವಾಗಿರುವ ಜಾಂಬಿ ಡ್ರಗ್ಸ್ (Zombis Drugs) ಇದೀಗ ಬೆಂಗಳೂರಿಗೂ ಕಾಲಿರಿಸಿರುವ ಆತಂಕ ಶುರುವಾಗಿದೆ. ಬೆಂಗಳೂರಿನಲ್ಲಿ ಯುವಕನೊಬ್ಬ ತಾಸು ಗಟ್ಟಲೆ ನಿಂತಲ್ಲೇ ನಿಂತಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ನಟ ದುನಿಯಾ ವಿಜಯ್ ಅವರು, ಈಗಾಗಲೇ ನೀವು ಭೀಮ ಸಿನಿಮಾವನ್ನು ನೋಡಿದ್ದೀರಿ ಅದರಲ್ಲಿ ಗಾಂಜಾ ಮತ್ತು ಟೈಡಲ್ (Tidal Drug) ಬಗ್ಗೆ ಮಾತನಾಡಿದ್ದೀವಿ. ಆದರೆ ಇದೀಗ ಬೆಂಗಳೂರಿಗೆ ಹೊಸ ಡ್ರಗ್ಸ್ ಬಂದಿದೆ ಎಂದು ಅವರು ಮಾತನಾಡಿದ್ದಾರೆ.
ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ಬೆಂಗಳೂರಿಗೆ ಹೊಸ ಡ್ರಗ್ಸ್ ಬಂದಿರುವ ಶಂಕೆ ಇದೆ. ಇದನ್ನು ಜಾಂಬಿ ಡ್ರಗ್ಸ್ ಎಂದು ಕರೆಯುತ್ತಾರೆ ಎಂದು ನಟ ದುನಿಯಾ ವಿಜಯ್ ಅವರು ಹೇಳಿದ್ದಾರೆ. ಯುವಕರು ಈ ವಿಚಾರದಲ್ಲಿ ತುಂಬಾ ಹುಷಾರಾಗಿ ಇರಬೇಕು. ಯುವಕರೊಂದಿಗೆ ಹೆಚ್ಚಾಗಿ ಈ ವಿಚಾರದಲ್ಲಿ ಪೋಷಕರು ಸಹ ಹೆಚ್ಚಿನ ಕಾಳಜಿ ವಹಿಸಬೇಕಾದ ಅವಶ್ಯಕತೆ ಇದೆ. ಮನೆಯಲ್ಲಿ ಇರುವ ಮಕ್ಕಳ ಬಗ್ಗೆ ಗಮನ ಹರಿಸಬೇಕು ಎಂದು ಮನವಿ ಮಾಡಿದ್ದಾರೆ.

ಅಲ್ಲದೆ ಬೆಂಗಳೂರಿನಲ್ಲಿ ಜಾಂಬಿ ಡ್ರಗ್ಸ್ ಸಿಗುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಸ್ಪಷ್ಟನೆ ನೀಡಬೇಕು ಹಾಗೂ ಈ ನಿಟ್ಟಿನಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ಮನವಿ ಮಾಡಿದ್ದಾರೆ. ಜನಗಳಿಗೆ ಜಾಂಬಿ ಡ್ರಗ್ಸ್‌ಗೆ ಸಂಬಂಧಿಸಿದಂತೆ ಮಾಹಿತಿ ನೀಡಬೇಕು. ಈಗಾಗಲೇ ಕರ್ನಾಟಕ ಸರ್ಕಾರ, ಕರ್ನಾಟಕ ಪೊಲೀಸರು ಡ್ರಗ್ಸ್ ನಿಯಂತ್ರಣ ವಿಚಾರದಲ್ಲಿ ಮೇಲುಗೈ ಸಾಧಿಸಿದ್ದಾರೆ. ಇದನ್ನು ತಡೆಯುವಲ್ಲಿಯೂ ಯಶಸ್ವಿಯಾಗುತ್ತಾರೆ ಎನ್ನುವ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನನ್ನದೊಂದು ಮನವಿ ಈ ರೀತಿಯ ಜಾಂಬಿ ಡ್ರಗ್ಸ್ ವಿಷಯ / ಯಾರಾದರೂ ಅನುಮಾನಸ್ಪದವಾಗಿ ಕಂಡರೆ ಸಮೀಪದ ಪೊಲೀಸ್ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿ. ವಿಷಯ ತಿಳಿಸಿ ಹಾಗೂ ಪೊಲೀಸರಿಗೆ ಸಹಾಯ ಮಾಡಿ ಎಂದು ಅವರು ಮನವಿ ಮಾಡಿದ್ದಾರೆ.
ಜಾಂಬಿ ಡ್ರಗ್ಸ್ ಎಂದರೇನು ?
ಫಿಲಡೆಲ್ಫಿಯಾದ ಕೆನ್ಸಿಂಗ್ಟನ್ ಅವೆನ್ಯೂ ಪ್ರದೇಶದಲ್ಲಿ ಫೆಂಟನಿಲ್ ಎನ್ನುವ ಅತ್ಯಂತ ಶಕ್ತಿಯ ನೋವು ನಿವಾರಕ ಔಷಧಿಯನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಈ ಔಷಧಿ ಕೆಲವೊಮ್ಮೆ ಪ್ರಾಣಿಗಳಿಗೂ ಸಹ ನೀಡಲಾಗುತ್ತದೆ. ಇದನ್ನು ಇತರ ಮದ್ದುಗಳ ಜೊತೆ ಮಿಶ್ರಣ ಮಾಡಿ ಜನರಿಗೆ ಮಾರಾಟ ಮಾಡಲಾಗುತ್ತದೆ. ಇದನ್ನು ಜಾಂಬಿ ಡ್ರಗ್ ಅಂತಲೂ ಕರೆಯಲಾಗುತ್ತದೆ. ಅದನ್ನು ಸೇವಿಸಿದವರೂ ಸಹ ಇದೇ ರೀತಿ ವರ್ತಿಸುತ್ತಾರೆ ಎನ್ನುವುದು ಇದೀಗ ಶುರುವಾಗಿರುವ ಅನುಮಾನಕ್ಕೆ ಕಾರಣವಾಗಿದೆ.
ನೆಟ್ಟಿಗರು ಹೇಳಿದ್ದೇನು
ಅಣ್ಣ ನೀವು ಈ ಡ್ರಗ್ಸ್ ಗಾಂಜಾ ಹಾಗೂ ಟೈಡಲ್ ಮಾತ್ರೆ ಇನ್ನಿತರೆ ಮಾದಕ ದ್ರವ್ಯ ಸೇವನೆ ಬಗ್ಗೆ ಬಹಳಷ್ಟು ಮಾಹಿತಿ ಕಲೆ ಹಾಕಿದ್ದೀರಿ ಆದರೂ ಸಹ ಇಲ್ಲಿಯವರೆಗೂ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ಲಿಂಗರಾಜು ಎನ್ನುವವರು ಹೇಳಿದ್ದಾರೆ. ಏನಿದರ ಮರ್ಮ ಆದರೂ ಸಹ ತಾವು ಎಡೆಬಿಡದೆ ಇಂಥ ಒಂದು ಸಮಾಜಘಾತುಕ ಶಕ್ತಿಗಳ ವಿರುದ್ಧ ಒಂಟಿ ಸಲಗ ರೀತಿಯಲ್ಲಿ ನಿರ್ಭಯವಾಗಿ ಧೈರ್ಯವಾಗಿ ಹೋರಾಟ ಮುಂದುವರೆಸುತ್ತಿದ್ದೀರಾ ಎಂದಿದ್ದಾರೆ. ಹಲವರು ಆ ಹುಡುಗನ ಮುಖ ತೋರಿಸಬಾರದಿತ್ತು ಎಂದೂ ಹೇಳಿದ್ದಾರೆ.












Click it and Unblock the Notifications