ಕೋವಿಡ್: ಜಮೀರ್ ಅಹಮ್ಮದ್‌ಗೆ ಕೊನೆಗೂ ಬುದ್ದಿ ಬಂದಿದ್ದು ಹೇಗೆ ಗೊತ್ತಾ?
ಬೆಂಗಳೂರ, ಜೂ. 07: ದೇಶದಲ್ಲಿ ಕೊರೊನಾ ವೈರಸ್ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಪ್ರತಿದಿನ ಸುಮಾರು 3 ನೂರಕ್ಕೂ ಹೆಚ್ಚು ಸೋಂಕಿತರು ಪತ್ತೆ ಆಗುತ್ತಿದ್ದಾರೆ. ಇದಕ್ಕೆ ಬೆಂಗಳೂರು ಹೊರತಾಗಿಲ್ಲ. ರಾಜ್ಯದಲ್ಲಿ ಈವರೆಗೆ (ಜೂನ್ 7ರ ಹೆಲ್ತ್ ಬುಲೆಟಿನ್‌ನಂತೆ) ಒಟ್ಟು 5452 ಜನರು ಕೊರೊನಾ ವೈರಸ್‌ಗೆ ತುತ್ತಾಗಿದ್ದಾರೆ. ಅವರಲ್ಲಿ ಒಟ್ಟು 61 ಜನರು ವೈರಸ್‌ಗೆ ಬಲಿಯಾಗಿದ್ದು, 3257 ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಈವರೆಗೆ ಒಟ್ಟು 475 ಸೋಂಕಿತ ಪ್ರಕಣಗಳು ದೃಢಪಟ್ಟಿದ್ದು, 15 ಜನರು ಕೊರೊನಾ ವೈರಸ್‌ನಿಂದ ಮೃತಪಟ್ಟಿದ್ದಾರೆ.
ಇಡೀ ದೇಶಾದ್ಯಂತ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ. ಮೊದಲು ಕೊರೊನಾ ವೈರಸ್, ಕ್ವಾರಂಟೈನ್, ಲಾಕ್‌ಡೌನ್, ಸೀಲ್‌ಡೌನ್ ಕುರಿತು ನಿರ್ಲಕ್ಷ್ಯದ ಮಾತುಗಳನ್ನು ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಖಾನ್ ಆಡಿದ್ದರು. ಜೊತೆಗೆ ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದ ಆರೋಪಿಗಳನ್ನೂ ಅವರು ಸಮರ್ಥಿಸಿಕೊಂಡಿದ್ದರು. ಆದರೆ ಇದೀಗ ಕೊರೊನಾ ವೈರಸ್ ಕುರಿತು ಶಾಸಕ ಜಮೀರ್ ಅಹಮ್ಮದ್ ಅವರಿಗೂ ಬುದ್ದಿ ಬಂದಿದೆ. ಅದಕ್ಕೆ ಕಾರಣವೂ ಇದೆ!
ಪಾದರಾಯನಪುರ ಪುಂಡರಿಗೆ ಜಮೀರ್ ಅದ್ದೂರಿ ಸ್ವಾಗತ: ಕಾಂಗ್ರೆಸ್ ನಲ್ಲೇ ವ್ಯಾಪಕ ಆಕ್ರೋಶ

ಹಲ್ಲೆ ಸಮರ್ಥನೆ
ಪಾದರಾಯನಪುರ ವಾರ್ಡ್‌ನಲ್ಲಿ ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ದಿಢೀರ್ ವರದಿಯಾದಾಗ ಆರೋಗ್ಯ ಇಲಾಖೆ ಚಿಕಿತ್ಸೆಗೆ ಮುಂದಾಗಿತ್ತು. ಅಲ್ಲಿ ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್‌ಗೆ ಕರೆದೊಯ್ಯಲು ಬಂದಾಗ ಆರೋಗ್ಯ ಕಾರ್ಯಕರ್ತರು, ಪೊಲೀಸರ ಮೇಲೆಯೆ ಹಲ್ಲೆ ನಡೆದಿತ್ತು.
ಹಲ್ಲೆ ಮಾಡಿದವರನ್ನು ಪೊಲೀಸರು ಬಂಧಿಸಿದಾಗ, ಬಂಧಿತರ ಪರವಾಗಿಯೇ ಜಮೀರ್ ಹೇಳಿಕೆ ಕೊಟ್ಟಿದ್ದರು. ಹಲ್ಲೆ ಮಾಡಿದ್ದವರು ಅಮಾಯಕರು ಎಂದಿದ್ದರು. ಅವರ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಸ್ವತಃ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಜಮೀರ್ ಮಾತನ್ನು ಖಂಡಿಸಿದ್ದರು. ಆದರೆ ಇದೀಗ ಜಮೀರ್ ಅಹಮ್ಮದ್ ಬದಲಾಗಿದ್ದಾರೆ.

ಇಮ್ರಾನ್ ಪಾಶಾಗೆ ಸೋಂಕು
ಕಳೆದ ಕೆಲ ದಿನಗಳ ಹಿಂದೆ ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಶಾಗೆ ಕೋವಿಡ್ ಸೋಂಕು ದೃಢಪಟ್ಟಿತ್ತು. ಸೋಂಕು ದೃಢಪಟ್ಟಿದ್ದರೂ ಆಸ್ಪತ್ರೆಗೆ ತೆರಳಲು ನಿರಾಕರಿಸಿದ್ದ ಪಾಶಾ, ತಾಯಿ ಮನೆಯಲ್ಲಿ ಇಲ್ಲ. ಅವರು ಬಂದು ಖುರಾನ್ ಓದಿದ ಮೇಲೆ ಮನೆಯಿಂದ ಹೊರಗೆ ಬರುತ್ತೇನೆ ಎಂದಿದ್ದರು. ನಂತರ ಶಾಸಕ ಜಮೀರ್ ಅಹಮ್ಮದ್ ಬಂದು ಮನವೊಲಿಸಿದ ಬಳಿಕ ವಿಕ್ಟೋರಿಯಾ ಆಸ್ಪತ್ರೆಗೆ ಪಾಶಾ ದಾಖಲಾಗಿದ್ದರು.
ಹಲವು ದಿನಗಳ ಚಿಕಿತ್ಸೆಯ ಬಳಿಕ ಇದೀಗ ಕಾರ್ಪೊರೇಟರ್ ಪಾಶಾ ಚೇತರಿಸಿಕೊಂಡಿದ್ದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಆದರೂ ಪಾಶಾಗೆ ಬುದ್ದಿ ಬಂದಂತಿಲ್ಲ.
ಜಮೀರ್ ಅಹ್ಮದ್ ಒಬ್ಬ ಅರೆದಡ್ಡ, ದೇಶದ್ರೋಹಿ, ಶಾಸಕ ಸ್ಥಾನ ವಜಾಮಾಡಿ

ಮತ್ತೆ ಬಂಧಿಸಿ ಕ್ವಾರಂಟೈನ್!
ಕೊರೊನಾ ವೈರಸ್‌ಗೂ ಅತೀತ ಎಂಬಂತೆ ವರ್ತನೆ ಮಾಡಿದ್ದ ಪಾದರಾಯನಪುರ ಬಿಬಿಎಂಪಿ ಕಾರ್ಪೊರೇಟರ್ ಇಮ್ರಾನ್ ಪಾಶಾ ಕೊರೊನಾ ವೈರಸ್ ಸೋಂಕಿನಿಂದ ಗುಣಮುಖರಾಗಿರುವುದು ಒಳ್ಳೆಯ ಸಂಗತಿ. ಆದರೆ ಮಾರಣಾಂತಿಕ ಸಾಂಕ್ರಾಮಿಕ ರೋಗ ಕೋವಿಡ್-19 ಸೋಂಕಿಗೆ ತುತ್ತಾಗಿ ಗುಣಮುಖರಾದ ಮೇಲೂ ಪಾಶಾಗೆ ಬುದ್ದಿ ಬಂದಿಲ್ಲ.
ಆಸ್ಪತ್ರೆಯಿಂದ ನೇರವಾಗಿ ಮನೆಗೆ ತೆರಳದೇ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಮೆರವಣಿಗೆ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಆಗಿತ್ತು. ಪಟಾಕಿ ಸಿಡಿಸಿ ಸಾಮಾಜಿಕ ಅಂತರ ಮುರಿದು ಬೆಂಬಲಿಗರು ಸಂಭ್ರಮಿಸಿದ್ದರು. ಆದಾದ ಬಳಿಕ ಪೊಲೀಸರ ಸೂಚನೆ ಮೀರಿ 150ಕ್ಕೂ ಹೆಚ್ಚು ಬೈಕ್‌ಗಳೊಂದಿಗೆ ರೋಡ್ ಶೋ ನಡೆಸಿದ್ದರಿಂದ ಇಮ್ರಾನ್ ಪಾಶಾ ಅವರನ್ನು ಬಂಧಿಸಿರುವುದಾಗಿ ನಗರ ಪೊಲೀಸ್ ಆಯುಕ್ತ ಡಾ.ಭಾಸ್ಕರ್ ರಾವ್ ತಿಳಿಸಿದ್ದಾರೆ. ಇಮ್ರಾನ್ ಪಾಶಾಗೆ ಮತ್ತೆ ಕ್ವಾರಂಟೈನ್ ಮಾಡಲಾಗಿದೆ ಎಂಬ ಮಾಹಿತಿಯಿದೆ.

ಜಮೀರ್‌ಗೆ ತಪ್ಪಿನ ಅರಿವು
ಕಾರ್ಪೊರೇಟರ್ ಇಮ್ರಾನಾ ಪಾಶಾ ತಪ್ಪುಗಳಿಂದ ಶಾಸಕ ಜಮೀರ್ ಅಹಮ್ಮದ್ ಅವರಿಗೆ ಬುದ್ದಿ ಬಂದಂತಾಗಿದೆ. ಸ್ವತಃ ತಾವೇ ಬೆಂಬಲಿಸಿದ್ದ ಇಮ್ರಾನ್ ಪಾಶಾ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ಈಗ ಮಾಜಿ ಸಚಿವ, ಶಾಸಕ ಜಮೀರ್ ಅಹಮ್ಮದ್ ಆಗ್ರಹಿಸಿದ್ದಾರೆ.
ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಶಾ ಕೊರೊನಾ ವೈರಸ್ ನಿಂದ ಗುಣಮುಖರಾಗಿ ಬಂದಿದ್ದು ನನಗೂ ಸಂತೋಷವಾಗಿತ್ತು. ಆದರೆ ಈ ರೀತಿ ಯುದ್ಧ ಗೆದ್ದು ಬಂದವರಂತೆ ಮೆರವಣಿಗೆ ಮೂಲಕ ಬಂದಿದ್ದನ್ನು ನಾನು ಖಂಡಿಸುತ್ತೇನೆ. ಅವರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಲಿ. ರಾಜ್ಯಕ್ಕೆ ರಾಜ್ಯವೇ ಕೊರೊನಾ ವೈರಸ್ ನಿಂದ ಕಂಗಾಲಾಗಿದೆ. ಇಂತಹ ಸಂದಿಗ್ಧ ಸಮಯದಲ್ಲಿ ಜನರನ್ನು ಗುಂಪುಗೂಡಿಸಿ ಮೆರವಣಿಗೆ ಮಾಡುವುದು ಬೇಜವಾಬ್ದಾಯ ನಡುವಳಿಕೆ ಆಗುತ್ತದೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಜನರಿಗೆ ತಿಳಿಹೇಳಬೇಕಾದವರೆ ಈ ರೀತಿ ವರ್ತಿಸಿದರೆ ಹೇಗೆ? ಎಂದು ಜಮೀರ್ ಪ್ರಶ್ನೆ ಮಾಡಿದ್ದಾರೆ. ಆ ಮೂಲಕ ಜನರಿಗೆ ಕೊರೊನಾ ವೈರಸ್ ಮಾರಕತೆಯನ್ನು ತಿಳಿಸಿದ್ದಾರೆ.