ತಿಂಗಳಿಗೆ 60 ಸಾವಿರದ ಕೆಲಸಕ್ಕೆ ಗುಡ್‌ಬೈ: ಕಂಟೆಂಟ್ ಕ್ರಿಯೇಟರ್ ಆಗಿ ಕೇವಲ 1 ತಿಂಗಳಲ್ಲಿ 1.12 ಲಕ್ಷ ರೂ. ಸಂಪಾದಿಸಿದ ಯುವತಿ

ಇಂದಿನ ಡಿಜಿಟಲ್ ಯುಗದಲ್ಲಿ ಕಂಟೆಂಟ್ ಕ್ರಿಯೇಶನ್ ಎಂಬುದು ಕೇವಲ ಹವ್ಯಾಸವಾಗಿ ಉಳಿದಿಲ್ಲ. ಅದೊಂದು ಪ್ರಮುಖ ವೃತ್ತಿಯಾಗಿ, ಲಕ್ಷಾಂತರ ರೂಪಾಯಿ ಆದಾಯ ತಂದುಕೊಡುವ ದೊಡ್ಡ ಉದ್ಯಮವಾಗಿದೆ. ಕಚೇರಿ ಕೆಲಸಗಳಿಗಿಂತ ತಮ್ಮ ಪ್ಯಾಶನ್ ಅನ್ನ ಬೆನ್ನಟ್ಟುವ ಯುವಜನತೆಯ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ದೆಹಲಿ ಮೂಲದ 23 ವರ್ಷದ ಯುವತಿ ಉಪಾಸನಾ.

ಹೌದು, ತಿಂಗಳಿಗೆ 60 ಸಾವಿರ ರೂಪಾಯಿ ಸಂಬಳ ಬರುತ್ತಿದ್ದ ಉದ್ಯೋಗವನ್ನಾ ಬಿಟ್ಟು ಈ ಯುವತಿ, ಇದೀಗ ಕಂಟೆಂಟ್ ಕ್ರಿಯೇಟರ್ ಆಗಿ ಕೇವಲ ಒಂದು ತಿಂಗಳಲ್ಲಿ 1.12 ಲಕ್ಷ ರೂಪಾಯಿ ಸಂಪಾದಿಸುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.

Woman Quits Rs 60K Job For Content Creation Earns Rs 1 12 Lakh In September An Inspiring Story

ಕಳೆದ ವರ್ಷ, ಅಂದರೆ ಕೇವಲ 22ನೇ ವಯಸ್ಸಿನಲ್ಲಿ ಉಪಾಸನಾ ಅವರು ತಮ್ಮ 60,000 ರೂಪಾಯಿ ಸಂಬಳದ ಕಾರ್ಪೊರೇಟ್ ಕೆಲಸಕ್ಕೆ ಗುಡ್‌ಬೈ ಹೇಳಿದರು. ಆ ಸಮಯದಲ್ಲಿ ಅವರ ಬಳಿ ಭವಿಷ್ಯದ ಬಗ್ಗೆ ಯಾವುದೇ ಯೋಜನೆಯಿರಲಿಲ್ಲ. ಆರ್ಥಿಕ ಸ್ವಾತಂತ್ರ್ಯವನ್ನ ಕಳೆದುಕೊಂಡ ಅವರು, ದೆಹಲಿಯಲ್ಲಿರುವ ತಮ್ಮ ಪೋಷಕರ ಮನೆಗೆ ಮರಳಿದರು.

ಆರಂಭದ ಕೆಲವು ತಿಂಗಳುಗಳು ಸಂಪೂರ್ಣವಾಗಿ ಶೂನ್ಯವಾಗಿದ್ದವು. ಆದಾಯದ ಯಾವುದೇ ಮೂಲವಿರಲಿಲ್ಲ, ಕೇವಲ ತಮ್ಮ ಬಳಿ ಇದ್ದ ಉಳಿತಾಯದ ಹಣದಲ್ಲೇ ಜೀವನ ಸಾಗಿಸಬೇಕಾದ ಅನಿವಾರ್ಯ ಅವರಿಗಿತ್ತು.

ಹಿಂದಿನ ಕೆಲಸದಲ್ಲಿ ತಮ್ಮ ಮಾನಸಿಕ ಆರೋಗ್ಯ ಸಂಪೂರ್ಣವಾಗಿ ಹದಗೆಟ್ಟಿತ್ತು ಎಂದು ಅವರು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಒತ್ತಡದ ಬದುಕಿನಿಂದ ಹೊರಬಂದು, ಕೆಲಸ ಬಿಟ್ಟು ಮನೆಗೆ ಬಂದ ನಂತರ ಪೋಷಕರು ಮತ್ತು ತಮ್ಮ ಮುದ್ದಿನ ನಾಯಿಗಳೊಂದಿಗೆ ಹೆಚ್ಚು ಸಮಯ ಕಳೆಯಲು ಆರಂಭಿಸಿದರು.

ಆರ್ಥಿಕ ಸ್ವಾತಂತ್ರ್ಯ ಕೊಂಚ ಕಡಿಮೆಯಾದರೂ, ದಿನನಿತ್ಯ ನಗುತ್ತಾ, ಹೆಚ್ಚು ನೆಮ್ಮದಿ ಮತ್ತು ಸಂತೋಷದಿಂದ ಇರುವುದಾಗಿ ಅವರು ತಮ್ಮ ಅನುಭವವನ್ನ ಹಂಚಿಕೊಂಡಿದ್ದಾರೆ.

ಬ್ರ್ಯಾಂಡ್ ಕೊಲಾಬರೇಶನ್ ಮತ್ತು ಇನ್‌ಸ್ಟಾಗ್ರಾಮ್ ಆದಾಯ

ಉಪಾಸನಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು 14,000 ಫಾಲೋವರ್ಸ್ ಹೊಂದಿದ್ದಾರೆ. ತಮ್ಮ ಒಂದೂವರೆ ವರ್ಷದ ಕಂಟೆಂಟ್ ಕ್ರಿಯೇಶನ್ ಪಯಣದಲ್ಲಿ ಸೆಪ್ಟೆಂಬರ್ ತಿಂಗಳು ಅವರಿಗೆ ಅತಿ ಹೆಚ್ಚು ಆದಾಯ ತಂದುಕೊಟ್ಟ ತಿಂಗಳಾಗಿದೆ.

ಈ ಒಂದು ತಿಂಗಳಲ್ಲಿ ಅವರು ಒಟ್ಟು ಆರು ಬ್ರ್ಯಾಂಡ್ ಕೊಲಾಬರೇಶನ್‌ಗಳನ್ನ ಪಡೆದುಕೊಂಡಿದ್ದಾರೆ. ಇದರಲ್ಲಿ ಒಂದು ಯುಜಿಸಿ (ಬಳಕೆದಾರರು ರಚಿಸಿದ ಕಂಟೆಂಟ್) ವಿಡಿಯೋದಿಂದ 15,000 ರೂ. ಮತ್ತು ಉಳಿದ ಐದು ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳಿಂದ 97,000 ರೂಪಾಯಿ ಸಂಪಾದಿಸಿದ್ದಾರೆ.

ಒಟ್ಟಾರೆಯಾಗಿ ಸೆಪ್ಟೆಂಬರ್ ತಿಂಗಳೊಂದರಲ್ಲೇ ಅವರ ಗಳಿಕೆ 1,12,000 ರೂಪಾಯಿ ದಾಟಿದೆ. ಇದು ಅವರು ಒಂದು ಲಕ್ಷ ರೂಪಾಯಿ ಗಡಿಯನ್ನ ದಾಟಿದ ಮೊದಲ ತಿಂಗಳಾಗಿದೆ. ಆದಾಗ್ಯೂ, ಬ್ರ್ಯಾಂಡ್‌ಗಳು ವಿಭಿನ್ನ ಪಾವತಿ ನಿಯಮಗಳನ್ನ ಮತ್ತು ಸೈಕಲ್‌ಗಳನ್ನ ಹೊಂದಿರುವುದರಿಂದ, ಈ ಸಂಪೂರ್ಣ ಹಣ ಇನ್ನೂ ತಮ್ಮ ಬ್ಯಾಂಕ್ ಖಾತೆಗೆ ಜಮೆಯಾಗಿಲ್ಲ ಎಂಬುದನ್ನೂ ಅವರು ಸ್ಪಷ್ಟಪಡಿಸಿದ್ದಾರೆ.

ನೆಟ್ಟಿಗರ ಮೆಚ್ಚುಗೆ

ಉಪಾಸನಾ ಅವರ ಈ ದಿಟ್ಟ ಹೆಜ್ಜೆಗೆ ಸೋಶಿಯಲ್‌ ಮಿಡಿಯಾದಲ್ಲಿ ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿಡಿಯೋ ವೈರಲ್ ಆಗುತ್ತಲೇ ಹಲವರು ಸ್ಫೂರ್ತಿದಾಯಕ ಕಮೆಂಟ್‌ಗಳನ್ನ ಮಾಡಿದ್ದಾರೆ.

"ಈ ತಲೆಮಾರಿನ ಯುವಜನತೆ ರಿಸ್ಕ್ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ ಎಂಬುದು ಖುಷಿಯ ವಿಚಾರ. ಶಾಲೆಯಲ್ಲಿ ನಮಗೆ ರಿಸ್ಕ್ ತೆಗೆದುಕೊಳ್ಳುವುದನ್ನ ಕಲಿಸುವುದಿಲ್ಲ, ಇದು ನಮಗೂ ಸ್ಫೂರ್ತಿ" ಎಂದು ಬಳಕೆದಾರರೊಬ್ಬರು ಹೊಗಳಿದ್ದಾರೆ. ಮತ್ತೊಬ್ಬರು "ನಾನೂ ಕೂಡ ಕಂಟೆಂಟ್ ಕ್ರಿಯೇಶನ್ ಶುರು ಮಾಡಲು ಇದೊಂದು ಉತ್ತಮ ಪ್ರೇರಣೆ" ಎಂದಿದ್ದಾರೆ.

ಸದ್ಯಕ್ಕೆ ಯಾವುದೇ ಖಾಯಂ ಉದ್ಯೋಗವಿಲ್ಲದಿದ್ದರೂ, ಸ್ವತಂತ್ರವಾಗಿ ಬದುಕಲು ಬೇಕಾದಷ್ಟು ಹಣವನ್ನ ಸಂಪಾದಿಸುತ್ತಿರುವುದಾಗಿ ಹೇಳಿರುವ ಉಪಾಸನಾ, ಇದು ತಮ್ಮ ಅಂತಿಮ ಗುರಿಯಲ್ಲ ಎಂದಿದ್ದಾರೆ. "ಭವಿಷ್ಯದಲ್ಲಿ ಇನ್ನಷ್ಟು ದೊಡ್ಡ ಅವಕಾಶಗಳು ಮತ್ತು ಸಾಧನೆಗಳು ನನಗಾಗಿ ಕಾಯುತ್ತಿವೆ" ಎಂದು ವಿಶ್ವಾಸ ವ್ಯಕ್ತಪಡಿಸುವ ಮೂಲಕ, ಹೊಸದಾಗಿ ಕಂಟೆಂಟ್ ಕ್ರಿಯೇಟರ್ ಆಗಲು ಬಯಸುವ ಅನೇಕ ಯುವಜನತೆಗೆ ಅವರು ಮಾದರಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+