ಬೆಂಗಳೂರು: ಪ್ಲಾನ್ ಮಾಡಿ ಬ್ಯಾಡ್ ಟಚ್, ಹೋಟೆಲ್‌ನಲ್ಲೂ ಹೆಣ್ಣು ಮಕ್ಕಳಿಗಿಲ್ಲ ರಕ್ಷಣೆ
ಬೆಂಗಳೂರು, ಜನವರಿ 18: ಬೆಂಗಳೂರಿನಲ್ಲಿ ಕಾಮುಕರ ಅಟ್ಟಹಾಸ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಹೆಣ್ಣು ಮಕ್ಕಳು ಧೈರ್ಯವಾಗಿ ಓಡಾಡದಂತಹ ಪರಿಸ್ಥಿತಿ ನಗರದಲ್ಲಿ ನಿರ್ಮಾಣವಾಗುತ್ತಿದೆ. ಬಸ್, ಮೆಟ್ರೋ ಸೇರಿದಂತೆ ಜನದಟ್ಟಣೆ ಇರುವ ಸ್ಥಳಗಳಲ್ಲಿ ವಿಕೃತಿ ಮೆರೆಯುತ್ತಿದ್ದ ಕಾಮುಕರು ಇದೀಗ ಹೋಟೆಲ್‌ಗಳಂತ ಸ್ಥಳಗಳಲ್ಲಿಯೂ ವಿಕೃತಿ ಮೆರೆಯುತ್ತಿದ್ದಾರೆ.
ಕಾಮುಕನೊಬ್ಬ ಹೋಟೆಲ್‌ಗೆ ಬಂದ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿರುವ ಘಟನೆ ವಿಜಯನಗರದಲ್ಲಿ ನಡೆದಿದೆ. ಯುವಕನ ಈ ವರ್ತನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಯುವಕರ ಗುಂಪೊಂದು ಉದ್ದೇಶ ಪೂರ್ವಕವಾಗಿಯೇ ಈ ರೀತಿ ನಡೆದುಕೊಂಡಿದ್ದು, ಕೂಡಲೇ ಇಂತಹ ಕಿಡಿಗೇಡಿಗಳನ್ನು ಬಂಧಿಸಿ ಜೈಲಿಗಟ್ಟಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವಿಜಯನಗರದ ಖಾಸಗಿ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ. ಈ ಹೋಟೆಲ್ ಬಳಿ ಬಂದ ಮೂವರು ಆರೋಪಿಗಳು ಹೋಟೆಲ್‌ಗೆ ಬರುವ ಯುವತಿಯರು, ಮಹಿಳೆಯರನ್ನು ಟಾರ್ಗೆಟ್ ಮಾಡಿ ವಿಕೃತಿ ಮೆರೆಯುತ್ತಿದ್ದಾರೆ. ವಿಜಯನಗರ ಆರ್ಪಿಸಿ ಲೇಔಟ್ನಲ್ಲಿರುವ ಹೋಟೆಲ್‌ನಲ್ಲಿ 2023 ಡಿಸಂಬರ್ 30 ರ ಸಂಜೆ 7.30ಕ್ಕೆ ಈ ಘಟನೆ ನಡೆದಿತ್ತು. ಆದರೆ ತಡವಾಗಿ ಪ್ರಕರಣ ಬೆಳಕಿಗೆ ಬಂದಿದ್ದು, 2024ರ ಜನವರಿ 10 ರಂದು ಈ ಘಟನೆ ಸಂಬಂಧ ಎಫ್ಐಆರ್ ದಾಖಲಾಗಿದೆ.
ಹೋಟೆಲ್‌ಗೆ ಬಂದ ಮೂವರು ಹುಡುಗರು ದೋಸೆ ತಿನ್ನುತ್ತ ಅಲ್ಲೇ ನಿಂತು ಹರಟೆ ಹೊಡೆಯುತ್ತಿದ್ದರು. ಯುವತಿಯರ ಜೊತೆ ಅಸಭ್ಯವಾಗಿ ವರ್ತಿಸುವ ಮೊದಲು ಹಾಗೂ ಅವರನ್ನು ಟಚ್ ಮಾಡುವ ಮೊದಲು ಮೂವರು ಆರೋಪಿಗಳು ಪ್ಲಾನ್ ಮಾಡಿಕೊಂಡಿದ್ದಾರೆ. ಅದರಂತೆ ಒಬ್ಬ ಹೆಣ್ಣು ಮಕ್ಕಳನ್ನು ಟಚ್ ಮಾಡುವ ಉದ್ದೇಶದಿಂದ ಹೋದರೆ, ಮತ್ತಿಬ್ಬರು ಅದನ್ನು ನೋಡಿ ಖುಷಿ ಪಡುತ್ತಿದ್ದಾರೆ.
ಈ ವೇಳೆ ಹೋಟೆಲ್‌ಗೆ ಬಂದ ಯುವತಿ ಜೊತೆಗೆ ಒಬ್ಬ ಅನುಚಿತ ವರ್ತನೆ ತೋರಿದ್ದಾರೆ. ಓರ್ವ ಕಾಮುಕ ಯುವತಿಯ ಹಿಂಬದಿಗೆ ಕೈನಿಂದ ಹೊಡೆದು ವಿಕೃತಿ ಮೆರೆದಿದ್ದಾನೆ. ಇದನ್ನು ಅಲ್ಲೇ ಇದ್ದ ಉಳಿದಿಬ್ಬರು ನೋಡಿ ಖುಷಿ ಪಟ್ಟಿದ್ದಾರೆ. ಆರೋಪಿಯ ವರ್ತನೆ ಕಂಡು ಕೋಪಗೊಂಡ ಯುವತಿ ಗಲಾಟೆ ಮಾಡಿ ಕೂಗಾಡಿದ್ದಾರೆ. ಕೂಡಲೇ ಸ್ಥಳೀಯರು ಜಮಾಯಿಸಿದ್ದು, ಮೂವರು ಯುವಕರು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಮೂವರು ಕಾಮುಕರ ಅನುಚಿತ ವರ್ತನೆಯ ಸಂಪೂರ್ಣ ದೃಶ್ಯ ಸೆರೆಯಾಗಿದೆ. ಘಟನೆ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.












Click it and Unblock the Notifications