BMTC: ರಸ್ತೆ ದಾಟುತ್ತಿದ್ದ ಮಹಿಳೆಗೆ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಡಿಕ್ಕಿ: ಸ್ಥಳದಲ್ಲೇ ಸಾವು
ಬೆಂಗಳೂರು, ಡಿಸೆಂಬರ್ 28: ಬೆಂಗಳೂರು ನಗರದಲ್ಲಿ ಬಿಎಂಟಿಸಿ ಬಸ್‌ಗಳಿಂದ ಸಂಭವಿಸುವ ಅಪಘಾತಗಳಿಗೆ ಕಡಿವಾಣ ಇಲ್ಲದಂತಾಗಿದೆ. ಬಿಎಂಟಿಸಿ ಬಸ್‌ಗೆ ಮತ್ತೊಂದು ಜೀವ ಬಲಿಯಾಗಿರುವ ಘಟನೆ ನಗರದ ಸುಬ್ಬಯ್ಯ ಸರ್ಕಲ್ ಬಳಿ ಘಟನೆ. ಪುಷ್ಪ (51) ಬಿಎಂಟಿಸಿಗೆ ಬಲಿಯಾದ ಮಹಿಳೆ ಎಂದು ಗುರುತಿಸಲಾಗಿದೆ.
ಪುಷ್ಪ ನಗರದ ಕಬ್ಬನ್ ಪೇಟೆ ನಿವಾಸಿಯಾಗಿದ್ದು, ಮನೆಯಿಂದ ಬೇಕರಿಗೆ ತೆರಳುತಿದ್ದ ವೇಳೆ ಘಟನೆ ನಡೆದಿದೆ. ಮಹಿಳೆ ರಸ್ತೆ ದಾಟುವಾಗ ಎದುರಿಗೆ ಬಂದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಏಕಾಏಕಿ ಡಿಕ್ಕಿಯಾಗಿದೆ. ಘಟನೆಯಲ್ಲಿ ಮಹಿಳೆ ಗಂಭೀರ ಗಾಯಗೊಂಡಿದ್ದು, ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಇಂದು(ಡಿಸೆಂಬರ್ 28) ಸಾವನ್ನಪ್ಪಿದ್ದಾರೆ.

ಅಪಘಾತದಲ್ಲಿ ಮಹಿಳೆ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಚಾಲಕ ನಾಗರಾಜ್ ಎನ್ನುವಾತನ್ನು ಹಲಸೂರು ಗೇಟ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಎಂಟಿಸಿ ಬಸ್ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇತ್ತೀಚಿಗೆ ಮಹಿಳೆ ಸಾವನ್ನಪ್ಪಿದ್ದರು.
ಸಿಲ್ಕ್ ಬೋರ್ಡ್ ಜೆಂಕ್ಷನ್ ಬಳಿಯ ಮಡಿವಾಳ ಫ್ಲೇವೋವರ್ ಮೇಲೆ ದ್ವಿಚಕ್ರ ವಾಹನಕ್ಕೆ ಬಿಎಂಟಿಸಿ ಬಸ್ ಡಿಕ್ಕಿಯಾಗಿದ್ದು, ಬಸ್ ಹರಿದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಘಟನೆ ಬಳಿಕ ಬಿಎಂಟಿಸಿ ಚಾಲಕ ಬಸ್ ಬಿಟ್ಟು ಪರಾರಿಯಾಗಿದ್ದರು. ಈ ಸಂಬಂಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಿಎಂಟಿಸಿ ಅಪಘಾತಕ್ಕೆ ಬ್ರೇಕ್ ಹಾಕಲು ಟ್ರಾಫಿಕ್ ಪೊಲೀಸರ ಹೊಸ ಯತ್ನ
2023ರ ಜನವರಿಯಿಂದ ನವೆಂಬರ್‌ವರೆಗೆ ಬಿಎಂಟಿಸಿ ಬಸ್ ಅಪಘಾತದಲ್ಲಿ ಒಟ್ಟು 34 ಜನರು ಸಾವನ್ನಪ್ಪಿದ್ದು, 97 ಜನರು ಗಾಯಗೊಂಡಿದ್ದಾರೆ. ಬಿಎಂಟಿಸಿ ಚಾಲಕರ ವಿರುದ್ಧ ಸಂಚಾರ ನಿಯಮ ಉಲ್ಲಂಘನೆಗಾಗಿ 13,917 ಪ್ರಕರಣಗಳನ್ನು ದಾಖಲಿಸಲಾಗಿದೆ ಹಾಗೂ ಮೋಟಾರು ವಾಹನ ಕಾಯ್ದೆಯಡಿ ಬಿಎಂಟಿಸಿ ನಿಗಮಕ್ಕೆ 1.04 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ.
ಹೀಗಾಗಿ ಬೆಂಗಳೂರು ಸಂಚಾರಿ ಪೊಲೀಸರು ಬಿಎಂಟಿಸಿ ಜೊತೆ ಸೇರಿ ಈ ತಪ್ಪುಗಳಿಗೆ ಬ್ರೇಕ್ ಹಾಕಲು ನಿರ್ಧರಿಸಿದ್ದಾರೆ. ಈ ನಿಟ್ಟಿನಲ್ಲಿ ಬೆಂಗಳೂರು ಸಂಚಾರಿ ಪೊಲೀಸರು ಬಿಎಂಟಿಸಿ ಬಸ್ ಚಾಲಕರಿಗೆ ಡ್ರೈವಿಂಗ್ ತರಬೇತಿ ನೀಡಲಿದ್ದಾರೆ. ಬೆಂಗಳೂರಿನ ರಸ್ತೆಗಳಲ್ಲಿ ಹೇಗೆ ಬಸ್ ಓಡಿಸಬೇಕು. ಸಂಚಾರಿ ನಿಯಮಗಳನ್ನು ಹೇಗೆ ಪಾಲಿಸಬೇಕು, ಅಪಘಾತ ತಡೆಗೆ ತೆಗೆದುಕೊಳ್ಳಬೇಕಾದ ಕ್ರಮಗಳೇನು ಎಂದು ತರಬೇತಿ ನೀಡಲಿದ್ದಾರೆ.












Click it and Unblock the Notifications