ತುಷಾರ್ ಗಿರಿನಾಥ್ ವೆಲ್ಕಂ ಟು ಸಮಸ್ಯೆಗಳ ಆಗರ ಬಿಬಿಎಂಪಿ
ಬೆಂಗಳೂರು, ಮೇ 06: ಮೇಲ್ನೋಟಕ್ಕೆ ಆಡಳಿತಾತ್ಮಕವಾದ ವರ್ಗಾವಣೆವಿದು ಎಂದು ಬಸವರಾಜ ಬೊಮ್ಮಾಯಿ ಸರಕಾರ ಹೇಳಿದರೂ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಹಲವು ಸಮಸ್ಯೆಗಳಿಂದಾಗಿ ಜನರು ತಿರುಗಿ ಬೀಳಬಹುದು ಎನ್ನುವ ಕಾರಣಕ್ಕಾಗಿಯೇ ಬಿಬಿಎಂಪಿ ಆಯುಕ್ತರಾದ ಗೌರವ್ ಗುಪ್ತಾರನ್ನು ಎತ್ತಂಗಡಿ ಮಾಡಲಾಗಿದೆ.
ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ತುಷಾರ್ ಗಿರಿನಾಥ್ ಅವರನ್ನು ಬಿಬಿಎಂಪಿ ಆಯುಕ್ತರನ್ನಾಗಿ ನೇಮಿಸಿ ಸರಕಾರ ಆದೇಶ ಹೊರಡಿಸಿದೆ. ಬಹಶಃ ಇತ್ತೀಚಿನ ದಿನಗಳಲ್ಲಿ ವಿವಿಧ ಕಾರಣಗಳಿಗಾಗಿ ಹೈಕೋರ್ಟಿನಿಂದ ಗೌರವ್ ಗುಪ್ತಾ ಹಾಕಿಸಿಕೊಂಡಿದ್ದಷ್ಟು ಛೀಮಾರಿ ಇನ್ನೊಬ್ಬ ಅಧಿಕಾರಿ ಹಾಕಿಕೊಂಡಿರಲಿಲ್ಲವೇನೋ?.
1993ರ ಬ್ಯಾಚಿನ, ಉತ್ತರ ಪ್ರದೇಶ ಮೂಲದ ತುಷಾರ್ ಗಿರಿನಾಥ್ ಬಿಬಿಎಂಪಿ ಮುಖ್ಯ ಆಯುಕ್ತರಾಗಿ ಶುಕ್ರವಾರ (ಮೇ 6) ಅಧಿಕಾರ ಸ್ವೀಕರಿಸಿದ್ದಾರೆ. ಅಲ್ಲಿಗೆ, ಬೆಂಗಳೂರು ಮಹಾನಗರದ ದೈನಂದಿನ ಸಮಸ್ಯೆಗಳಿಗೆ ಇನ್ನೊಬ್ಬರು ಜವಾಬ್ದಾರಿಯಾಗಲಿದ್ದಾರೆ.
ಬಿಬಿಎಂಪಿ ಆಯುಕ್ತ ಎನ್ನುವ ಹುದ್ದೆ ಸಮಸ್ಯೆಗಳ ಆಗರದಿಂದ ತುಂಬಿರುವ ಇಲಾಖೆಯನ್ನು ನಿಭಾಯಿಸುವುದು. ಪಾಲಿಕೆಯಲ್ಲಿ ಚುನಾಯಿತ ಅಧಿಕಾರಿಗಳ ಅವಧಿ ಸೆಪ್ಟಂಬರ್ 10, 2020ಕ್ಕೆ ಅಂತ್ಯಗೊಂಡಿರುವುದರಿಂದ, ಆಯುಕ್ತರ ಮೇಲೆ ಹೆಚ್ಚುವರಿ ಜವಾಬ್ದಾರಿಯಿದೆ.

ಬೆಂಗಳೂರು ಮಳೆ, ಟ್ರಾಫಿಕ್, ಕಸ
ಬೆಂಗಳೂರು ಮಳೆ, ಬೆಂಗಳೂರು ಟ್ರಾಫಿಕ್, ಬೆಂಗಳೂರು ಕಸ ಅದೆಷ್ಟೋ ಬಾರಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಸರಕಾರ ಯಾರದ್ದೇ ಇರಲಿ, ಬಿಬಿಎಂಪಿ ಕಮಿಷನರ್ ಯಾರೇ ಇರಲಿ, ಮಳೆಯ ವೇಳೆ ತಗ್ಗು ಪ್ರದೇಶದ ಮನೆಯೊಳಗೆ ನೀರು ಹೋಗುವುದು ತಪ್ಪುವುದಿಲ್ಲ. ಬೆಂಗಳೂರಿನ ಮೂಲಭೂತ ಸೌಕರ್ಯಕ್ಕೆ ಬಜೆಟಿನಲ್ಲಿ ಅದೆಷ್ಟೋ ಅನುದಾನ ಮೀಸಲಾಗಿಟ್ಟಿದ್ದರೂ, ಹಣ ಎಲ್ಲಿ ಹೋಯಿತು? ಎಂದು ಜನರು ಪ್ರಶ್ನಿಸುವಂತಾಗಿದೆ. ಪ್ರತಿ ಮಳೆಗೂ ಬೆಂಗಳೂರಿನ ಹಲವು ಪ್ರದೇಶದ ಜನರು ಬೆಚ್ಚಿಬೀಳಿಸುವಂತೆ ಮಾಡಿದೆ.

ಕುಖ್ಯಾತಿ ಪಡೆಯುತ್ತಿರುವ ಬೆಂಗಳೂರಿನ ರಸ್ತೆ ಗುಂಡಿಗಳು
ಬೆಂಗಳೂರು ಕಸದಷ್ಟೇ ಇತ್ತೀಚಿನ ದಿನಗಳಲ್ಲಿ ಕುಖ್ಯಾತಿಯನ್ನು ಪಡೆಯುತ್ತಿರುವುದು ರಸ್ತೆ ಗುಂಡಿಗಳು. ಇಡೀ ನಗರದಲ್ಲಿ ಗುಂಡಿಯಿಲ್ಲದ ರಸ್ತೆಗಳಿಲ್ಲ (ರಾಜಕಾರಣಿಗಳು ಹೆಚ್ಚಾಗಿರುವ ಪ್ರದೇಶಗಳನ್ನು ಬಿಟ್ಟು) ಎಂದೇ ಹೇಳಬಹುದಾಗಿದೆ. ಗುಂಡಿಯಿಂದಾಗಿ ಪ್ರಾಣತೆತ್ತ ಉದಾಹರಣೆಗಳಿವೆ. ನಿಮ್ಮನ್ನು ವಜಾಗೊಳಿಸಿ, ಜೈಲಿಗೆ ಅಟ್ಟುವ ಆದೇಶವನ್ನು ನೀಡಬೇಕಾಗುತ್ತದೆ ಎಂದು ಹೈಕೋರ್ಟ್ ಎಚ್ಚರಿಕೆ ನೀಡಿದ್ದರೂ, ಸಂಪೂರ್ಣವಾಗಿ ಸಮಸ್ಯೆಯಿಂದ ಹೊರಬರಲು ಬಿಬಿಎಂಪಿಗೆ ಸಾಧ್ಯವಾಗಿಲ್ಲ.

ರಾಜಾಕಾಲುವೆ ಒತ್ತುವರಿ, ಬೀದಿದೀಪ ಮುಂತಾದ ಸಮಸ್ಯೆ
ಅನಧಿಕೃತ ಕಟ್ಟಡಗಳು, ರಾಜಾಕಾಲುವೆ ಒತ್ತುವರಿ, ಬೀದಿದೀಪ ಮುಂತಾದ ಸಮಸ್ಯೆಗಳಿಗೆ ದಶಕಗಳಿಂದ ಪರಿಹಾರವೇ ಸಿಗುತ್ತಿಲ್ಲ. ಪದೇಪದೇ ಹೈಕೋರ್ಟ್ ಛೀಮಾರಿ ಹಾಕುತ್ತಿದ್ದರೂ ಸಮಸ್ಯೆಗಳು ಇದ್ದಲ್ಲೇ ಇವೆ. ಘನತಾಜ್ಯ ವಿಲೇವಾರಿಗೆ ಕೋಟಿಕೋಟಿ ಸುರಿದರೂ ಕಸದ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತಿಲ್ಲ. ಬಿಬಿಎಂಪಿ ಮತ್ತು ಗುತ್ತಿಗೆದಾರರ ನಡುವಿನ ಸಮಸ್ಯೆ ಆಗಿಂದಾಗೆ ಎದ್ದೇಳುತ್ತಲೇ ಇದೆ. ಇದೆಲ್ಲಾ ಕೆಲವೊಂದು ಸ್ಯಾಂಪಲ್‌ಗಳು ಮಾತ್ರ, ಹೊಸದಾಗಿ ಸೇರ್ಪಡೆಗೊಂಡ ಪ್ರದೇಶಗಳ ಅಭಿವೃದ್ದಿ, ಕುಂಟುತ್ತಾ ಸಾಗುತ್ತಿರುವ ಕಾಮಗಾರಿಗಳು. ಈ ರೀತಿಯ ಸಮಸ್ಯೆಗಳು ಒಂದಲ್ಲಾ, ಎರಡಲ್ಲಾ.

ಬಿಬಿಎಂಪಿಯ ಸಮಸ್ಯೆಗಳ ಬಗ್ಗೆ ಅರಿವಿದೆ
"ಬಿಬಿಎಂಪಿ ಆಯುಕ್ತನಾಗಿ ನೇಮಕವಾದ ಆದೇಶದ ಪ್ರತಿ ಸಿಕ್ಕಿದೆ, ಬಿಬಿಎಂಪಿಯ ಸಮಸ್ಯೆಗಳ ಬಗ್ಗೆಯೂ ಅರಿವಿದೆ"ಎಂದು ನೂತನ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ. ತುಷಾರ್ ಅವರಿಂದ ಉತ್ತವಾಗಿ ಕೆಲಸ ತೆಗೆಸುವ ಅವಶ್ಯಕತೆ ಸರಕಾರಕ್ಕೂ ಮುಂದಿನ ಚುನಾವಣೆಯ ದೃಷ್ಟಿಯಿಂದ ಇದೆ. ಹಿಂದಿನ ಕಂದಾಯ ಇಲಾಖೆಯಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸಿರುವ ತುಷಾರ್ ಗಿರಿನಾಥ್, ಬಿಬಿಎಂಪಿ ಸಮಸ್ಯೆಗಳಿಗೆ ವೃತ್ತಿಪರತೆಯಿಂದ ಸ್ಪಂದಿಸುತ್ತಾರೋ ಅಥವಾ ಹತ್ತರ ಜೊತೆ ಹನ್ನೊಂದರಂತೆ ಇನ್ನೋರ್ವ ಬಿಬಿಎಂಪಿ ಕಮಿಷನರ್ ಆಗುತ್ತಾರೋ ಎಂದು ಕಾದು ನೋಡಬೇಕಿದೆ.












Click it and Unblock the Notifications