Bengaluru: ಇನ್ನೆರಡು ವರ್ಷದಲ್ಲಿ ಬೆಂಗಳೂರಿನ ಈ ಭಾಗದಲ್ಲಿ ಆಸ್ತಿ ಮೌಲ್ಯ, ಬಾಡಿಗೆ ಹೆಚ್ಚಳ; ಕಾರಣವೇನು?
ನಮ್ಮ ಮೆಟ್ರೋ ಬೆಂಗಳೂರಿನ ಜನರಿಗೆ ಟ್ರಾಫಿಕ್‌ನಿಂದ ಮುಕ್ತಿ ಕೊಟ್ಟಿರುವುದು ಸುಳ್ಳಲ್ಲ, ಮೆಟ್ರೋ ಸೇವೆ ಇಲ್ಲದೇ ಇದ್ದರೆ ಇಂದು ಬೆಂಗಳೂರಿನ ಪರಿಸ್ಥಿತಿಯನ್ನು ಊಹಿಸಿಕೊಳ್ಳಲು ಸಾಧ್ಯವಿರಲಿಲ್ಲ. ಬಿಎಂಆರ್ ಸಿಎಲ್ ಪ್ರಕಾರ ಈಗ ಪ್ರತಿದಿನ 7-8 ಲಕ್ಷ ಜನ ಮೆಟ್ರೋ ಸೇವೆಯನ್ನು ಬಳಸುತ್ತಿದ್ದಾರೆ ಒಂದು ವೇಳೆ ಇಷ್ಟು ಜನ ರಸ್ತೆ ಸಾರಿಗೆ ಬಳಸಿದ್ದರು ಬೆಂಗಳೂರು ಟ್ರಾಫಿಕ್ ಮತ್ತಷ್ಟು ಕೆಟ್ಟದಾಗಿರುತ್ತಿತ್ತು, ನಮ್ಮ ಮೆಟ್ರೋ ಯೋಜನೆ ಬೆಂಗಳೂರಿನ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುವ ಜೊತೆಗೆ ಆಸ್ತಿ ಮೌಲ್ಯ ಹೆಚ್ಚಳಕ್ಕೂ ಗಣನೀಯ ಕೊಡುಗೆ ನೀಡಿದೆ.
ಕರ್ನಾಟಕ ಸರ್ಕಾರ ಈಗಾಗಲೇ ನಮ್ಮ ಮೆಟ್ರೋ ಜಾಲವನ್ನು ವಿಸ್ತರಿಸುವ ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಇನ್ನಷ್ಟು ಮಾರ್ಗಗಳಲ್ಲಿ ಮೆಟ್ರೋ ವಿಸ್ತರಣೆಗೆ ಡಿಪಿಆರ್ ಮಾಡಲಾಗುತ್ತಿದೆ. ಸರ್ಜಾಪುರದಿಂದ ಹೆಬ್ಬಾಳಕ್ಕೆ ಸಂಪರ್ಕಿಸುವ ನಮ್ಮ ಮೆಟ್ರೋ ಕೆಂಪು ಮಾರ್ಗಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಆಗ್ನೇಯ ಸರ್ಜಾಪುರ ಮತ್ತು ಹೆಬ್ಬಾಳದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಸ್ತಿ ಬೆಲೆ ಮತ್ತು ಬಾಡಿಗೆ ದರ ಹೆಚ್ಚುವ ಸಾಧ್ಯತೆ ಇದೆ ಎಂದು ನಿರೀಕ್ಷೆ ಮಾಡಲಾಗಿದೆ.

ಎರಡು ವರ್ಷದಲ್ಲಿ ಬಾಡಿಗೆ ಕೂಡ ಹೆಚ್ಚಳ!
ಇನ್ನು ಎರಡು ವರ್ಷಗಳಲ್ಲಿ ಸರ್ಜಾಪುರ ಮತ್ತು ಹೆಬ್ಬಾಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ 10 ರಿಂದ 30 ಪ್ರತಿಶತ ಬಾಡಿಗೆ ಹೆಚ್ಚಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ನಮ್ಮ ಮೆಟ್ರೋ ಕೆಂಪು ಮಾರ್ಗಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿರುವ ಬೆನ್ನಲ್ಲೇ ಬಿಎಂಆರ್ ಸಿಎಲ್ ಭೂಸ್ವಾಧೀನ, ಯುಟಿಲಿಟಿ ಶಿಫ್ಟಿಂಗ್ ಮತ್ತು ವಿನ್ಯಾಸ ಕೆಲಸ ಸೇರಿದಂತೆ ನಿರ್ಮಾಣ ಪೂರ್ವ ಚಟುವಟಿಕೆಗಳನ್ನು ಆರಂಭಿಸಿದೆ. ಕೇಂದ್ರ ಸಚಿವ ಸಂಪುಟದ ಅನುಮೋದನೆ ಸಿಕ್ಕ ಬಳಿಕವೇ ಕಾಮಗಾರಿ ಆರಂಭವಾಗಲಿದೆ.
ಡಿಸೆಂಬರ್ 7ರಂದು ಸಚಿವ ಸಂಪುಟ ನಮ್ಮ ಮೆಟ್ರೋದ ಹಂತ 3ಎ ಹಂತದ ಕಾಮಗಾರಿಗೆ ಅನುಮೋದನೆ ನೀಡಿದೆ. 36.59 ಕಿಮೀ ಕಾರಿಡಾರ್ ಇದಾಗಿದ್ದು ಬೆಂಗಳೂರಿನ ಪ್ರಮುಖ ಐಟಿ ಕಾರಿಡಾರ್ ಗಳಾದ ಸರ್ಜಾಪುರ ಮತ್ತು ಹೆಬ್ಬಾಳವನ್ನು ಸಂಪರ್ಕಿಸುತ್ತದೆ.
ಕೆಂಪು ಮಾರ್ಗದ ವಿವರ
ನಮ್ಮ ಮೆಟ್ರೋ ಕೆಂಪು ಮಾರ್ಗದಲ್ಲಿ ಒಟ್ಟು 28 ನಿಲ್ದಾಣಗಳು ನಿರ್ಮಾಣವಾಗಲಿವೆ. ಇಬ್ಬಲೂರು, ಅಗರ, ಡೈರಿ ಸರ್ಕಲ್, ಕೆಆರ್ ಸರ್ಕಲ್ ಮತ್ತು ಹೆಬ್ಬಾಳದಲ್ಲಿ ಇಂಟರ್ ಚೇಂಜ್ ನಿಲ್ದಾಣಗಳನ್ನು ಒಳಗೊಂಡಿರುತ್ತದೆ. 28,405 ಕೋಟಿ ರೂಪಾಯಿ ವೆಚ್ಚದ ಯೋಜನೆ ಇದಾಗಿದ್ದು, ಅನುಮೋದನೆಗಾಗಿ ಕೇಂದ್ರ ಸಚಿವ ಸಂಪುಟಕ್ಕೆ ಕಳಿಸಲಾಗಿದೆ.
ಈ ವರ್ಷದ ಡಿಸೆಂಬರ್ ತಿಂಗಳಿಗೆ ಮೊದಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡುವ ನಿರೀಕ್ಷೆ ಇದ್ದು, ಅದಾದ ಬಳಿಕ ಮುಂದಿನ 5-6 ವರ್ಷದಲ್ಲಿ ಕಾಮಗಾರಿ ಮುಗಿಸುವ ಯೋಜನೆ ರೂಪಿಸಲಾಗಿದೆ. 2031ರ ವೇಳೆಗೆ ಈ ಮಾರ್ಗದಲ್ಲಿ ಮೆಟ್ರೋ ಓಡಾಡುವ ನಿರೀಕ್ಷೆ ಮಾಡಲಾಗಿದೆ. ಒಂದು ಕಿಲೋ ಮೀಟರ್ ಮಾರ್ಗಕ್ಕಾಗಿ 776 ಕೋಟಿ ರೂಪಾಯಿ ವೆಚ್ಚವಾಗಲಿದ್ದು ದುಬಾರಿ ವೆಚ್ಚದ ಕಾಮಗಾರಿ ಇದಾಗಿದೆ.
ಬೆಂಗಳೂರಿನಲ್ಲಿ ಈಗಾಗಲೇ ಆಸ್ತಿ ಮೌಲ್ಯ, ಬಾಡಿಗೆ ಗಗನಕ್ಕೇರಿದೆ. ಹೊಸ ಹೊಸ ಅಭಿವೃದ್ಧಿ ಯೋಜನೆಗಳು ಬಂದಷ್ಟು ಇದು ಹೆಚ್ಚಾಗುತ್ತಲೇ ಇರುತ್ತದೆ. ಕೆಂಪು ಮಾರ್ಗಕ್ಕೆ ಅನುಮೋದನೆ ಸಿಕ್ಕ ಬೆನ್ನಲ್ಲೇ ರಿಯಲ್ ಎಸ್ಟೇಟ್ ಗರಿಗೆದರಿದ್ದು ಹೊಸ ಕಟ್ಟಡಗಳು, ಅಪಾರ್ಟ್‌ಮೆಂಟ್‌ಗಳು ತಲೆ ಎತ್ತಲಿವೆ.












Click it and Unblock the Notifications