Bengaluru 2nd Airport: ಬೆಂಗಳೂರು 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ಆರಂಭ ಯಾವಾಗ & ಎಲ್ಲಿ?
Bengaluru 2nd Intrernational Airport: ಬೆಂಗಳೂರಿನಲ್ಲಿ ಈಗಾಗಲೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಇದು ಎರಡು ಟರ್ಮಿನಲ್ ಹೊಂದಿದ್ದು, ಎರಡನೇಯದು ವಿಶ್ವದ ಅತ್ಯಂತ ಸುಂದರ ಟರ್ಮಿನಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಷ್ಟಿದ್ದರೂ ಸಹ ಪ್ರಯಾಣಿಕರ ದಟ್ಟಣೆ ಮಾತ್ರ ಹೆಚ್ಚಾಗುತ್ತಲೇ ಇದೆ. ಆದ್ದರಿಂದ ಬೆಂಗಳೂರಿನ ಸಮೀಪ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಸರ್ಕಾರ ನಿರ್ಧರಿಸಿದೆ.
ಈಗಾಗಲೇ ಸರ್ಕಾರವು ರಾಜ್ಯದ ನೆಲಮಂಗಲ, ತುಮಕೂರು, ಬಿಡದಿ, ರಾಮನಗರ ಭಾಗಗಳಲ್ಲಿ ಎರಡನೇ ವಿಮಾನ ನಿಲ್ದಾಣಕ್ಕೆ ಜಾಗಗಳನ್ನು ಗುರುತು ಮಾಡಿತ್ತು. ಈ ಪೈಕಿ ನೆಲಮಂಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸರ್ವೇ ಕಾರ್ಯಗಳು ನಡೆಸಲಾಗಿತ್ತು. ಇದಕ್ಕೆ ಈ ಭಾಗದ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ನೆಲಮಂಗಲದಲ್ಲಿ ಯಾವುದೇ ಕಾರಣಕ್ಕೂ ವಿಮಾನ ನಿಲ್ದಾಣ ನಿರ್ಮಾಣ ಆಗಲು ಬಿಡುವುದಿಲ್ಲ. ವಿಮಾನ ನಿಲ್ದಾಣ ನಿರ್ಮಾಣ ಆದ್ರೆ ನಾವು ಫಲವತ್ತಾದ ಭೂಮಿಯನ್ನು ಕಳೆದುಕೊಳ್ಳುತ್ತೇವೆ ಎನ್ನವ ಆತಂಕದಲ್ಲಿ ಈ ಭಾಗದ ರೈತರಿದ್ದರು. ಇನ್ನು ಇಲ್ಲಿನ ರೈತರಿಗೆ ಕ್ಷೇತ್ರದ ಶಾಸಕರು, ಇಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮುಂದಾದರೆ ನಾನು ಶಾಸಕ ಸ್ಥಾನವನ್ನು ಮುಡುಪಾಗಿಟ್ಟರೂ ಹೋರಾಟಕ್ಕಿಳಿದು ರೈತರ ಪರ ನಿಲ್ಲುತ್ತೇನೆ ಎಂದು ಹೇಳುವ ಮೂಲಕ ರೈತರಿಗೆ ಧೈರ್ಯ ತುಂಬಿದ್ದರು.
ಇದರ ನಡುವೆಯೇ ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಲಾಗಿತ್ತು. ಆದರೆ ಇಲ್ಲಿನ ರೈತರು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದ ತಮ್ಮ ತಮಿಳುನಾಡು ಸರ್ಕಾರದ ವಿರುದ್ಧವೇ ತಿರುಗಿಬಿದ್ದು ವಿರೋಧ ವ್ಯಕ್ತಪಡಿಸಿದ್ದರು. ಮತ್ತೊಂದೆಡೆ ಕರ್ನಾಕದ ತುಮಕೂರಿನಲ್ಲಿ ವಿಮಾನ ನಿಲ್ದಾಣ ಮಾಡಿ ಎನ್ನುವ ಕೂಗುಗಳು ಜೋರಾಗಿವೆ.
ತುಮಕೂರಿನಲ್ಲಿ ವಿಮಾನ ನಿಲ್ದಾಣ ಮಾಡಿದರೆ, ಉತ್ತರ ಕರ್ನಾಟಕ ಭಾಗದ ಜನರಿಗೆ ತುಂಬಾ ಸಹಕಾರಿ ಆದಂತಾಗಲಿದೆ ಎಂದು ಸಚಿವ ಜಿ.ಪರಮೇಶ್ವರ್ ಹಾಗಾಗಾ ಹೇಳುತ್ತಲೇ ಬಂದಿದ್ದಾರೆ. ಅಷ್ಟೇ ಅಲ್ಲದೆ ಇವರ ಮಾತಿಗೆ ಹಲವು ಶಾಸಕರು, ಸಚಿವರು ಕೂಡ ಸಮ್ಮತಿ ಸೂಚಿಸಿದ್ದಾರೆ. ಆದರೆ ಸರ್ಕಾರದ ನಿಲುವು ಮಾತ್ರ ಬೇರೆ ಇದ್ದಂತಿದೆ. ಇನ್ನು ಇಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಆಗದಿದ್ದರೆ, ಬೆಂಗಳೂರಿಗೆ ಪರ್ಯಾಯ ನಗರಿಯಾಗಿ ತುಮಕೂರು ಅಭಿವೃದ್ಧಿ ಬರೀ ಕನಸಷ್ಟೇ ಎಂಬಂತಾಗಿದೆ.
ಹಾಗೆಯೇ ಬೆಂಗಳೂರಿನ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುತ್ತೇವೆ ಅಂತಾ 2024ರ ವರ್ಷಪೂರ್ತಿ ಬರೀ ಚರ್ಚೆಗಳೇ ನಡೆಸಿದರು. ಇನ್ನೂ ಇದೀಗ 2025 ಬಂದರೂ ಕೂಡ ಇದೇ ಗೋಳಾಗಿದೆ. ಈಗಾಗಲೇ ಭೂಮಿ ಗುರುತು ಮಾಡಿರುವ ಕೆಲವೆಡೆ ವಿಮಾನ ನಿಲ್ದಾಣ ನಿರ್ಮಾಣಕ್ಕೆ ರೈತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮತ್ತೇ ಕೆಲವೆಡೆ ಅಂದರೆ, ತುಮಕೂರಿನಲ್ಲಿ ನಿರ್ಮಾಣ ಮಾಡಿ ಅಂದರೂ ಇದರತ್ತ ಸರ್ಕಾರ ಮಾತ್ರ ಗಮನಹರಿಸುತ್ತಿಲ್ಲ. ಹಾಗಾದರೆ ಸರ್ಕಾರವು ವಿಮಾನ ನಿಲ್ದಾಣ ಕಾಮಗಾರಿಯನ್ನು ಇನ್ನೂ ಯಾವಾಗ ಆರಂಭಿಸಲಿದೆ ಹಾಗೂ ಎಲ್ಲಿ ಭೂಮಿ ಫೈನಲ್ ಮಾಡಲಿದೆ ಎನ್ನುವ ಪ್ರಶ್ನೆಗಳು ಎದ್ದಿವೆ.












Click it and Unblock the Notifications