ಬಿಜೆಪಿ ಸದಸ್ಯರಿಂದ ಕೊಲೆ ಬೆದರಿಕೆ ಇದೆ; ರಕ್ಷಣೆ ಕೊಡಿ ಎಂದ ಬಿ.ಕೆ. ಹರಿಪ್ರಸಾದ್
ಬೆಂಗಳೂರು, ಫೆಬ್ರವರಿ 19: ಬಿಜೆಪಿ ಸದಸ್ಯರಿಂದ ನಮಗೆ ಜೀವ ಬೆದರಿಕೆ ಇದೆ, ರಕ್ಷಣೆ ಕೊಡಿ ಎಂದು ವಿಧಾನ ಪರಿಷತ್ ಸಭಾಪತಿಗೆ ಕಾಂಗ್ರೆಸ್ ಪಕ್ಷದ ಪರಿಷತ್ ಸದಸ್ಯರು ಪತ್ರ ಬರೆದಿದ್ದಾರೆ. ಬಿ.ಕೆ. ಹರಿಪ್ರಸಾದ್, ಪ್ರಕಾಶ್ ರಾಥೋಡ್, ಸಲೀಂ ಅಹ್ಮದ್ ಪತ್ರಕ್ಕೆ ಸಹಿ ಹಾಕಿದ್ದಾರೆ.
ಸಭಾಪತಿಗಳಾದ ತಾವು ನಮಗೆ ರಕ್ಷಣೆ ನೀಡಬೇಕು ಎಂದು ಪರಿಷತ್ ಸದಸ್ಯರು ಪತ್ರದಲ್ಲಿ ಮನವಿ ಸಲ್ಲಿಸಿದ್ದಾರೆ. ಈ ಕುರಿತು ಸೂಕ್ತ ಕ್ರಮವಹಿಸುವಂತೆ ವಿಧಾನ ಪರಿಷತ್ ಕಾರ್ಯದರ್ಶಿಗೆ ಸಭಾಪತಿ ಬಸವರಾಜ ಹೊರಟ್ಟಿ ಸೂಚನೆ ನೀಡಿದ್ದಾರೆ.
ಕಾರ್ಯದರ್ಶಿ ಮೂಲಕ ಪೊಲೀಸ್ ಇಲಾಖೆಗೆ ಪತ್ರವನ್ನು ರವಾನಿಸಿ, ರಕ್ಷಣೆ ಕೊಡಿಸಲು ಸಭಾಪತಿ ಸೂಚನೆ ನೀಡಿದ್ದಾರೆ. "ಕಾಂಗ್ರೆಸ್ನವರಿಗೆ ದನಿಯೆತ್ತಲು ಬಿಡಬೇಡಿ'' ಎಂದು ಬಿಜೆಪಿ ಕಚೇರಿಯಲ್ಲಿ ನಳಿನ್ ಕುಮಾರ್ ಕಟೀಲ್ ತಮ್ಮ ಪಕ್ಷದ ಶಾಸಕರಿಗೆ ಸೂಚಿಸಿದ್ದಾರೆ. ಇದು ಪರೋಕ್ಷವಾಗಿ ಕೊಲೆ ಬೆದರಿಕೆಗೆ ಪ್ರಚೋದನೆ ಮಾಡಿದಂತೆ ಇದೆ. ನಮಗೆ ಜೀವ ಬೆದರಿಕೆ ಇರುವುದರಿಂದ ರಕ್ಷಣೆ ಕೊಡಿ,'' ಎಂದು ಬಿ.ಕೆ. ಹರಿಪ್ರಸಾದ್ ವಿನಂತಿಸಿದರು.

ಹರಿಪ್ರಸಾದ್‌ಗೆ ಜೀವ ಬೆದರಿಕೆ ?
ತಮಗೆ ಪ್ರಾಣ ಬೆದರಿಕೆ ಇದ್ದು, ಸೂಕ್ತ ಭದ್ರತೆ ಒದಗಿಸಬೇಕು ಎಂದು ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಒತ್ತಾಯಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹರಿಪ್ರಸಾದ್ ಅವರಿಗೆ ತಕ್ಕ ಪಾಠ ಕಲಿಸಿ ಎಂದು ತಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಇದೇ ರೀತಿಯ ಪ್ರಚೋದನೆಯಿಂದಾಗಿ ಹಿಂದೆ ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಅವರ ಹತ್ಯೆಯಾಗಿತ್ತು. ತಮ್ಮ ವಿರುದ್ಧ ಕೂಡ ಆ ರೀತಿಯ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವುದಾಗಿ ಹೇಳಿಕೆ ನೀಡಿರುವ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾಗೊಳಿಸುವವರೆಗೂ ತಮ್ಮ ಹೋರಾಟ ನಿಲ್ಲುವುದಿಲ್ಲ. ಇಂದು, ನಾಳೆ ಅಹೋರಾತ್ರಿ ಧರಣಿ ನಡೆಸಿ ಸೋಮವಾರದ ಕಲಾಪದಲ್ಲೂ ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ಬಿ.ಕೆ. ಹರಿಪ್ರಸಾದ್ ಸ್ಪಷ್ಟನೆ ನೀಡಿದರು.

ಬಿಜೆಪಿಯವರು ನಮ್ಮನ್ನು ಏಕವಚನದಲ್ಲಿ ನಿಂದಿಸುವ ಮೂಲಕ ತಮ್ಮ ಸಂಸ್ಕೃತಿಯನ್ನು ಬಹಿರಂಗಪಡಿಸಿಕೊಂಡಿದ್ದಾರೆ. ಸಚಿವ ಈಶ್ವರಪ್ಪ ಸೇರಿದಂತೆ ಅನೇಕರು ಬಚ್ಚಲುಬಾಯಿ ನಾಯಕರು. ಸಂವಿಧಾನ ಬುಡಮೇಲು ಮಾಡುವುದು, ರಾಷ್ಟ್ರಧ್ವಜ ಬದಲಾವಣೆ ಮಾಡುವುದು ಇವರ ಗುಪ್ತ ಕಾರ್ಯಸೂಚಿಯಾಗಿದೆ. ಆದರೆ ಅದು ಯಶಸ್ವಿಯಾಗುವುದಿಲ್ಲ. ಈ ರೀತಿ ಹೇಳಿಕೊಂಡು ಎಷ್ಟೋ ಜನ ಬಂದು ಹೋಗಿದ್ದಾರೆ. ಈಶ್ವರಪ್ಪ ಕೂಡ ಅಂಥವರಲ್ಲಿ ಒಬ್ಬರು. ಬಿಜೆಪಿ ಮತ್ತು ಸಂಘ ಪರಿವಾರದವರು ಸಾಕಿರುವುದೆಲ್ಲ ಇಂತಹ ಹರಕುಬಾಯಿ ನಾಯಕರನ್ನೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಬಿ.ಕೆ. ಹರಿಪ್ರಸಾದ್‌ಗೆ ಅಭಿನಂದನಾ ಸಮಾರಂಭ
ಬೆಂಗಳೂರಿನ ಟೌನ್ಹಾಲ್ನಲ್ಲಿ ಬಿ.ಕೆ.ಹರಿಪ್ರಸಾದ್ ಅವರಿಗೆ ಅಭಿನಂದನಾ ಸಮಾರಂಭ ನಡೆಯಿತು. ನಾನು ಇಂದು ಈ ಮಟ್ಟಕ್ಕೆ ಬರಲು ಸಂವಿಧಾನವೇ ಕಾರಣ. ನಾನು ಮಾಜಿ ಪ್ರಧಾನಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಅವರ ಜೊತೆಗೆ ಕೆಲಸ ಮಾಡಿದ್ದೇನೆ. ಇದು ನಾನು ಬೆಲೆ ಕಟ್ಟಲಾಗದ ಆಸ್ತಿ ಎಂದು ಅಭಿನಂದನಾ ಸಮಾರಂಭದಲ್ಲಿ ಬಿ.ಕೆ. ಹರಿಪ್ರಸಾದ್ ಹೇಳಿದರು.
ಹಣ ಇಲ್ಲದವರೂ ಕೂಡ ರಾಜಕಾರಣ ಮಾಡಬಹುದು. ನೀವು, ನಾವು ಎಲ್ಲರೂ ಬದುಕಬೇಕು ಎನ್ನುವುದು ಕಾಂಗ್ರೆಸ್ ಸಿದ್ಧಾಂತ. ತಾವೊಬ್ಬರೇ ಬದುಕಬೇಕು ಎಂಬ ಸಂಸ್ಕೃತಿ ಬಿಜೆಪಿಯಲ್ಲಿ ಮಾತ್ರ ಇದೆ. ಸಿಬಿಐ, ಇಡಿ ಏನೇ ಬಂದರೂ ನಾನು ಮೋದಿ ವಿರುದ್ಧ ಮಾತನಾಡುತ್ತೇನೆ. ನನಗೆ ಯಾವುದೇ ಭಯವಿಲ್ಲ ಎಂದು ಹೇಳಿದರು.
ನಾನು ಇಂದು ಈ ಮಟ್ಟಕ್ಕೆ ಬರಲು ಸಂವಿಧಾನವೇ ಕಾರಣ. ರಾಷ್ಟ್ರಧ್ವಜ, ರಾಷ್ಟ್ರಗೀತೆಗೆ ಗೌರವ ಕೊಡಬೇಕು. ಹಣ ಇದ್ದವರಿಗೆ ಮಾತ್ರವೇ ರಾಜಕಾರಣ ಅಲ್ಲ. ಹಣ ಇಲ್ಲದವರೂ ರಾಜಕಾರಣ ಮಾಡಬಹುದು. ಅದರಲ್ಲೂ ನಿಷ್ಠಾವಂತರಿಗೆ ಒಳ್ಳೆಯ ಹುದ್ದೆ ಹುಡುಕಿಕೊಂಡು ಬರುತ್ತದೆ. ನೀವು ಹಾಗೂ ನಾವು ಬದುಕಬೇಕು ಎನ್ನುವುದು ಕಾಂಗ್ರೆಸ್ ಸಿದ್ಧಾಂತ.
ಬಿಜೆಪಿಯಲ್ಲಿ ಮಾತ್ರ ತಾವೊಬ್ಬರೇ ಬದುಕಬೇಕು ಎಂಬ ಸಂಸ್ಕೃತಿ ಇದೆ. ಹಿಜಾಬ್ ವಿಚಾರವನ್ನು ದೊಡ್ಡದು ಮಾಡಿ ಸಣ್ಣ ಮಕ್ಕಳ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ನಮ್ಮ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರು ಸುಮ್ಮನೇ ಇರಬಾರದು. ಅವರು ನಿಮ್ಮ ಮಕ್ಕಳು ಅಂತ ನಿಲ್ಲಬೇಕು ಎಂದು ಸಲಹೆ ಮಾಡಿದರು. ಕಾಂಗ್ರೆಸ್ ಹೈಕಮಾಂಡ್ ಸಣ್ಣ ನಾಯಕರನ್ನೂ ಗುರುತಿಸುತ್ತದೆ. ಏನನ್ನೂ ನಿರೀಕ್ಷೆ ಮಾಡದೆ ಜೊತೆಗೆ ನಿಂತು ಕಾಂಗ್ರೆಸ್ ಪಕ್ಷ ಬೆಳಸಬೇಕು ಎಂದು ವಿಧಾನ ಪರಿಷತ್ ಬಿ.ಕೆ. ಹರಿಪ್ರಸಾದ್ ಕರೆ ನೀಡಿದರು.












Click it and Unblock the Notifications