ಬೆಂಗಳೂರಿನ 110 ಹಳ್ಳಿಗಳಿಗೆ ನೀರು ಪೂರೈಸುವ ಕಾವೇರಿ ನೀರು ಸರಬರಾಜು ಯೋಜನೆ ಮತ್ತಷ್ಟು ವಿಳಂಬ!
ಬೆಂಗಳೂರು, ಜುಲೈ 20: ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ 5,500 ಕೋಟಿ ರೂಪಾಯಿ ವೆಚ್ಚದ 5ನೇ ಹಂತದ ಕಾವೇರಿ ನೀರು ಸರಬರಾಜು ಯೋಜನೆ ಮತ್ತಷ್ಟು ವಿಳಂಬವಾಗಲಿದೆ.
ಕಾರ್ಮಿಕರ ತೀವ್ರ ಕೊರತೆ ಮತ್ತು ಯುರೋಪ್‌ನಿಂದ ಉಪಕರಣಗಳು ತಡವಾಗಿ ಬರುವುದರಿಂದ ಕುಡಿಯುವ ನೀರು ಮತ್ತು ಒಳಚರಂಡಿ ಯೋಜನೆಯ ಕಾಮಗಾರಿಗಳು ಮತ್ತಷ್ಟು ವಿಳಂಬವಾಗಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಈ ವರ್ಷದ ಡಿಸೆಂಬರ್‌ನೊಳಗೆ ಯೋಜನೆಯನ್ನು ಪೂರ್ಣಗೊಳಿಸಲು ಉದ್ದೇಶಿಸಿದೆ, ಕೋರೊನಾ ಸಾಂಕ್ರಾಮಿಕದಿಂದಾಗಿ ಈಗಾಗಲೇ ಯೋಜನೆ ಆರು ತಿಂಗಳ ವಿಳಂಬವಾಗಿದೆ.

ಜಪಾನ್ ಇಂಟರ್‌ನ್ಯಾಶನಲ್ ಕೋಆಪರೇಷನ್ ಏಜೆನ್ಸಿ ಅನುದಾನಿತ ಈ ಯೋಜನೆಯು ಮಹದೇವಪುರ, ರಾಜರಾಜೇಶ್ವರಿ ನಗರ, ಬೊಮ್ಮನಹಳ್ಳಿ, ದಾಸರಹಳ್ಳಿ, ಯಲಹಂಕ, ಕೆಆರ್ ಪುರಂ ಮತ್ತು ಬ್ಯಾಟರಾಯನಪುರಕ್ಕೆ ದಿನಕ್ಕೆ 775 ಮಿಲಿಯನ್ ಲೀಟರ್ ನೀರು ಸರಬರಾಜು ಮಾಡುವ ನಿರೀಕ್ಷೆಯಿದೆ.
"ನೀರನ್ನು ಸಾಗಿಸಲು ತೊರೆಕಾಡನಹಳ್ಳಿ (ಟಿಕೆ ಹಳ್ಳಿ) ನಿಂದ ವಾಜರಹಳ್ಳಿಯವರೆಗೆ 70 ಕಿಮೀ ವರೆಗೆ 3,000-ಎಂಎಂ ವ್ಯಾಸದ ಪೈಪ್‌ಲೈನ್ ಅನ್ನು ಹಾಕುತ್ತಿದ್ದೇವೆ. ಈ ಕೆಲಸದಲ್ಲಿ ಸುಮಾರು 85 ಪ್ರತಿಶತ ಪೂರ್ಣಗೊಂಡಿದೆ." ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಹೊಸ ಪಂಪಿಂಗ್ ಸ್ಟೇಷನ್ ನಿರ್ಮಾಣ
ಗ್ರಾಮಗಳಿಗೆ ನೀರು ಹರಿಸಲು ಈಗಿರುವ ಪಂಪಿಂಗ್ ಸ್ಟೇಷನ್‌ಗಳಿಗೆ ಹೊಂದಿಕೊಂಡಂತೆ ಟಿ.ಕೆ.ಹಳ್ಳಿ, ಹಾರೋಹಳ್ಳಿ ಮತ್ತು ತಾತಗುಣಿಯಲ್ಲಿ ಹೊಸ ಪಂಪಿಂಗ್ ಸ್ಟೇಷನ್‌ಗಳನ್ನು ನಿರ್ಮಿಸಬೇಕು ಎಂದು ಹೇಳಿದ್ದಾರೆ.
"ಕೆಲಸಗಾರರು, ಬಾರ್ ಬೆಂಡರ್‌ಗಳಂತಹ ಕುಶಲಕರ್ಮಿಗಳು ಪಶ್ಚಿಮ ಬಂಗಾಳ, ಒಡಿಶಾ ಮತ್ತು ಬಿಹಾರದಲ್ಲಿ ಮಾತ್ರ ಲಭ್ಯವಿರುವುದರಿಂದ ನಾವು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಸಾಂಕ್ರಾಮಿಕ ರೋಗದ ನಂತರ, ಉದ್ಯೋಗಿಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ನಮ್ಮಲ್ಲಿ ಸದ್ಯಕ್ಕೆ 40-50 ಪ್ರತಿಶತ ಕಾರ್ಮಿಕರ ಕೊರತೆಯಿದೆ ಮತ್ತು ಕೆಲಸವನ್ನು ನಿರ್ವಹಿಸುವ ಬಹು ಗುತ್ತಿಗೆದಾರರು ಶೀಘ್ರದಲ್ಲೇ ಕಾರ್ಮಿಕರನ್ನು ಹೆಚ್ಚಿಸಲು ಪ್ರಯತ್ನಿಸುರುವುದಾಗಿ ನಮಗೆ ಭರವಸೆ ನೀಡಿದ್ದಾರೆ" ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ಉಪಕರಣಗಳ ಪೂರೈಕೆ ವಿಳಂಬ
ಕಾಮಗಾರಿಗೆ ಬೇಕಾದ ವಿವಿಧ ಉಪಕರಣಗಳ ಪೂರೈಕೆಯಲ್ಲಿ ಕೂಡ ವಿಳಂಬವಾಗಿದೆ. "ಇತ್ತೀಚೆಗೆ ಹೆಚ್ಚಿನ ಸಾಮರ್ಥ್ಯದ ಪಂಪ್‌ಗಳು (2000 HP) ಮತ್ತು ಜಪಾನ್‌ನಿಂದ ಮೋಟಾರ್‌ಗಳನ್ನು ಮತ್ತು ಟರ್ಕಿಯಿಂದ ಸ್ಲೂಸ್ ವಾಲ್ವ್‌ಗಳನ್ನು ಸ್ವೀಕರಿಸಿದ್ದೇವೆ. ಆಸ್ಟ್ರೇಲಿಯಾದಿಂದ ಪಂಪ್ ಮಾನಿಟರಿಂಗ್ ಸಿಸ್ಟಮ್‌ಗಳನ್ನು ಸಹ ಪಡೆದುಕೊಂಡಿದ್ದೇವೆ, ಆದರೆ ಫ್ರಾನ್ಸ್, ಜರ್ಮನಿ ಮತ್ತು ಸ್ವಿಟ್ಜರ್‌ಲ್ಯಾಂಡ್‌ನಿಂದ ಬರಬೇಕಿದ್ದ ನೀರು ಶುದ್ಧೀಕರಣ ಮತ್ತು ವಿವಿಧ ರೀತಿಯ ಸಂವೇದಕಗಳನ್ನು ಇನ್ನೂ ಬಂದಿಲ್ಲ," ಎಂದು ಹೇಳಿದ್ದಾರೆ.
2020ರ ಅಂತ್ಯದಲ್ಲಿ ಒಪ್ಪಂದಗಳನ್ನು ಅಂತಿಮಗೊಳಿಸಲಾಗಿದ್ದು, ವಿವಿಧ ಪ್ಯಾಕೇಜ್‌ಗಳಿಗೆ ಪ್ರತ್ಯೇಕ ಗಡುವುಗಳನ್ನು ನೀಡಲಾಗಿದೆ. 2023ರ ಜುಲೈನಲ್ಲಿ ಅಂತಿಮ ಪ್ಯಾಕೇಜ್‌ನ ಗಡುವು ಮುಗಿದಿದೆ, ಕೊರೊನಾ ಸಾಂಕ್ರಾಮಿಕ ಮತ್ತು ಉದ್ಯೋಗಿಗಳ ಕೊರತೆ ಕೆಲಸ ವಿಳಂಬವಾಗಲು ಕಾರಣವಾಗಿದೆ. ಆರು ತಿಂಗಳು ಗಡುವು ವಿಸ್ತರಿಸಲಾಗಿದ್ದು, ಡಿಸೆಂಬರ್ ತಿಂಗಳಲ್ಲಿ ಮುಗಿಯುವ ವಿಶ್ವಾಸವಿದೆ" ಎಂದು ಹೇಳಿದರು.
ಕಾಮಗಾರಿ ವ್ಯಾಪ್ತಿಯಲ್ಲಿ ಎಲ್ಲಾ ವಿತರಣಾ ಪೈಪ್‌ಲೈನ್‌ಗಳನ್ನು ಹಾಕುವ ಕಾರ್ಯ ಪೂರ್ಣಗೊಂಡಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಟಿ.ಕೆ.ಹಳ್ಳಿಯಲ್ಲಿ 775 ಎಂಎಲ್ ಡಿ ಸಾಮರ್ಥ್ಯದ ನೀರು ಶುದ್ಧೀಕರಣ ಘಟಕ ನಿರ್ಮಿಸಲಾಗುತ್ತಿದೆ.












Click it and Unblock the Notifications