ಇಂಗು ಗುಂಡಿ ನಿರ್ಮಾಣ ಎಲ್ಲರ ಜವಾಬ್ದಾರಿ: ವಿಜಯ್ ಕುಮಾರ್
ಬೆಂಗಳೂರು, ಮಾರ್ಚ್ 19: 'ಬೆಂಗಳೂರು ಮಹಾನಗರದ ಜನಸಂಖ್ಯೆ ಬರುವ ದಿನಗಳಲ್ಲಿ ಹೆಚ್ಚಾಗುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ತಲೆದೋರಬಹುದಾದ ಅಂತರ್ಜಲ ಸಮಸ್ಯೆಗೆ ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಇಂಗು ಗುಂಡಿಗಳನ್ನು ನಿರ್ಮಿಸಿಕೊಳ್ಳುವುದು ಅನಿವಾರ್ಯ' ಎಂದು ಜಯನಗರ ಶಾಸಕ ಬಿ.ಎನ್. ವಿಜಯಕುಮಾರ್ ತಿಳಿಸಿದರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಯುಗಾದಿ ದಿನದಂದು ವಿ-ಎಜುಕೇಟ್ ಫೌಂಡೇಷನ್ ಜಯನಗರದ ಶಾಲಿನಿ ಆಟದ ಮೈದಾನದಲ್ಲಿ 'ನೀರು ಉಳಿಸಿ ಹಸಿರು ಬೆಳೆಸಿ' ಎಂಬ ಧ್ಯೇಯ ವಾಕ್ಯಯೊಂದಿಗೆ ಆಯೋಜಿಸಿದ್ದ ಬೆಂಗಳೂರು ಯೂತ್ ಮ್ಯಾರಥಾನ್ ಅನ್ನು ಉದ್ಘಾಟಿಸುವ ಸಂದರ್ಭದಲ್ಲಿ ಓಟಗಾರರನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಜಯನಗರ ಕ್ಷೇತ್ರವೊಂದರಲ್ಲೇ ಸುಮಾರು 600ಕ್ಕೂ ಹೆಚ್ಚು ಇಂಗು ಗುಂಡಿಗಳನ್ನು ನಿರ್ಮಿಸಲಾಗಿದ್ದು, ಬೆಂಗಳೂರು ಮಹಾನಗರದಲ್ಲೇ ಇಷ್ಟೊಂದು ಸಂಖ್ಯೆಯ ಇಂಗುಗುಂಡಿಗಳನ್ನು ನಿರ್ಮಿಸಿರುವ ಮೊದಲ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಜಯನಗರ ಭಾಜನವಾಗಿದೆ ಎಂದರು.

ಬಿಬಿಎಂಪಿ ಮಾಜಿ ಸದಸ್ಯ ಬಿ. ಸೋಮಶೇಖರ್ ಮಾತನಾಡಿ, ಶಾಲಿನಿ ಆಟದ ಮೈದಾನದಲ್ಲಿ ಸುಮಾರು 2 ದಶಲಕ್ಷ ಲೀಟರ್ ನೀರು ಸಂಗ್ರಹಣೆಯ ಇಂಗು ಗುಂಡಿಯನ್ನು ನಿರ್ಮಿಸುತ್ತಿದ್ದು, ಇದರಿಂದ ಸಂಗ್ರಹವಾಗುವ ನೀರನ್ನು ಆಟದ ಮೈದಾನ ಹಾಗೂ ಪಕ್ಕದ ಉದ್ಯಾನವನದ ನಿರ್ವಹಣೆಗೆ ಬಳಸಿಕೊಳ್ಳಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಜಯನಗರ ಬಿಜೆಪಿ ಮುಖಂಡ ಮಂಜುನಾಥ ರೆಡ್ಡಿ, ಚಿತ್ರ ನಟ ವಶಿಷ್ಠ ಸಿಂಹ ಹಾಗೂ ಇತರರು ಉಪಸ್ಥಿತರಿದ್ದರು. ವಿ ಎಜುಕೇಟ್ ಫೌಂಡೇಷನ್ ನ ಅಧ್ಯಕ್ಷ ಜಿ.ಎಸ್. ಮಹೇಶ್ ಕುಮಾರ್ ಮ್ಯಾರಥಾನ್ ನ ಉಸ್ತುವಾರಿ ಹೊತ್ತಿದ್ದರು. ಸುಮಾರು 300ಕ್ಕೂ ಹೆಚ್ಚು ಜನರು ಐದು ಕಿ.ಮೀ ಉದ್ದನೆಯ ಮ್ಯಾರಥಾನ್ ನಲ್ಲಿ ಭಾಗವಹಿಸಿದ್ದರು.












Click it and Unblock the Notifications