ಪಡಿತರ ಚೀಟಿಗೆ ಚುನಾವಣಾ ಗುರುತಿನ ಚೀಟಿ ಕಡ್ಡಾಯ

ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ತಿಳಿಸಿದ್ದಾರೆ.ರಾಜ್ಯದಲ್ಲಿರುವ ಬೋಗಸ್ ಕಾರ್ಡ್‌ಗಳನ್ನು ಮಟ್ಟ ಹಾಕಲು ಹೊಸ ವ್ಯವಸ್ಥೆ ಅಳವಡಿಸಲಾಗುತ್ತದೆ. ಪಡಿತರ ಚೀಟಿ ಮತ್ತು ವೋಟರ್ ಐಡಿಯನ್ನು ಲಿಂಕ್ ಮಾಡಿದರೆ ಆ ಕುಟುಂಬದ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ ಎಂದರು.
ಈ ಹಿಂದೆ ವಿದ್ಯುತ್ ಮೀಟರ್‌ನ ಆರ್.ಆರ್.ಸಂಖ್ಯೆ ಪಡೆದು ಪಡಿತರ ಚೀಟಿ ವಿತರಿಸಲಾಗುತ್ತಿತ್ತು. ಈ ಹೊಸ ವ್ಯವಸ್ಥೆ ಪ್ರಕಾರ ಗುರುತಿನ ಚೀಟಿ ನೀಡಿಯೇ ಪಡಿತರ ಚೀಟಿಯನ್ನು ಪಡೆದುಕೊಳ್ಳಬೇಕು. ಹೊಸದಾಗಿ ಅರ್ಜಿ ಹಾಕಲು ಹಾಲಿ ಪಡಿತರ ಚೀಟಿ ಹೊಂದಿರುವ ಪರಿಚಯಸ್ಥರ ಸಹಿ ಅಗತ್ಯವಿಲ್ಲ. ಗ್ರಾಹಕರು ತಮ್ಮ ಗುರುತಿನ ಚೀಟಿ ಸಂಖ್ಯೆ ನೀಡುವ ಮೂಲಕ ಪಡೆದುಕೊಳ್ಳಬಹುದಾಗಿದೆ.
ಹೊಸ ಪಡಿತರ ಚೀಟಿ ಪಡೆಯಬೇಕಾದರೆ ಗ್ರಾಹಕರ ಬೆರಳಚ್ಚು ಮತ್ತು ಕುಟುಂಬ ಸದಸ್ಯರ ಫೋಟೋ ನೀಡುವುದನ್ನು ಇಲಾಖೆ ಕಡ್ಡಾಯ ಮಾಡಿದೆ. ಆಹಾರ ಇಲಾಖೆ ಕಚೇರಿಗೆ ಬಂದು ಕುಟುಂಬ ಸದಸ್ಯರು ಫೋಟೋ ತೆಗೆಯಬಹುದಾಗಿದೆ. ಒಂದು ವೇಳೆ ಆಧಾರ್ ಕಾರ್ಡ್ ಇದ್ದಲ್ಲಿ ಕುಟುಂಬ ಸದಸ್ಯರು ಫೋಟೋ ತೆಗೆಯಬೇಕಿಲ್ಲ. ಆಧಾರ್ ಸಂಖ್ಯೆಯನ್ನು ನೀಡಿದರೆ ಇಲಾಖೆ ಆಧಾರ್ ಪ್ರಾಧಿಕಾರದಿಂದ ಗ್ರಾಹಕರ ಮಾಹಿತಿಯನ್ನು ಪಡೆದುಕೊಳ್ಳುತ್ತದೆ. ಆದರೆ ಇದಕ್ಕೆ ಆಧಾರ್ ಕಡ್ಡಾಯವಲ್ಲ. ಆಧಾರ್ ಕಾರ್ಡ್ ನೀಡಿದರೆ ಇಲಾಖೆ ಹೊರೆ ಕಡಿಮೆಯಾಗುವುದರ ಜೊತೆಗೆ ಗ್ರಾಹಕರಿಗೂ ಸಮಸ್ಯೆ ಕಡಿಮೆಯಾಗಲಿದೆ.
2010ಕ್ಕೂ ಹಿಂದೆ ವಿತರಿಸಿದ ಪಡಿತರ ಚೀಟಿಗಳಿಗೆ ಭಾವಚಿತ್ರ ಮತ್ತು ಬೆರಳಚ್ಚು ನೀಡಿ ನವೀಕರಿಸಿಕೊಳ್ಳಲು ಜೂನ್ 30 ಅಂತಿಮ ದಿನವಾಗಿದೆ. ಹೊಸ ಪಡಿತರ ಚೀಟಿಗೆ ಜೂನ್ 1ರಿಂದ ಅರ್ಜಿ ಸಲ್ಲಿಸಬಹುದು.
ಗ್ರಾಹಕರು ಎಸ್‌ಎಂಎಸ್ ಮೂಲಕ ಚುನಾವಣಾ ಆಯೋಗದ ಗುರುತಿನ ಚೀಟಿ ಸಂಖ್ಯೆ ನೀಡಬಹುದಾಗಿದೆ. ಮೊಬೈಲ್‌ನಲ್ಲಿ ಮಾಹಿತಿ ಕಳುಹಿಸಲು ಸಾಧ್ಯವಾಗದವರು ನಾಡಕಚೇರಿ ಅಥವಾ ಇಲಾಖೆಯ ಕಚೇರಿಗೆ ಹೋಗಿ ತಮ್ಮ ಮಾಹಿತಿಯನ್ನು ನೀಡಬಹುದು.
ಎಸ್‌ಎಂಎಸ್ ಮೂಲಕ ಗುರುತಿನ ಚೀಟಿ ಸಂಖ್ಯೆಯನ್ನು ಕಳುಹಿಸುವ ವಿಧಾನ:
* ಹಾಲಿ ಪಡಿತರ ಚೀಟಿದಾರರು ತಮ್ಮ ಮೊಬೈಲ್‌ನಿಂದ RCMOB ಎಂದು ಟೈಪ್ ಮಾಡಿ ಒಂದು ಸ್ಪೇಸ್ ಬಿಟ್ಟು ರೇಷನ್ ಕಾರ್ಡ್ ಸಂಖ್ಯೆಯನ್ನು ಟೈಪ್ ಮಾಡಿ 9212357123ಗೆ ಎಸ್‌ಎಂಎಸ್ ಕಳುಹಿಸಿ ಮೊಬೈಲ್ ಸಂಖ್ಯೆಯನ್ನು ನೋಂದಣಿ ಮಾಡಿಸಿಕೊಳ್ಳಬೇಕು.
* ಹೊಸ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿರುವ ಗ್ರಾಹಕರು RCMOB ಎಂದು ಟೈಪ್ ಮಾಡಿ ಒಂದು ಸ್ಪೇಸ್‌ಬಿಟ್ಟು ಅರ್ಜಿ ಸಂಖ್ಯೆಯನ್ನು ನಮೂದಿಸಿ 9212357123ಗೆ ಎಸ್‌ಎಂಎಸ್ ಕಳುಹಿಸಬೇಕು.
* ಮೊಬೈಲ್ ಮೂಲಕ ರೇಷನ್‌ಕಾರ್ಡ್ ಅಥವಾ ಅರ್ಜಿ ಸಂಖ್ಯೆಯನ್ನು ಕಳುಹಿಸಿದ ಮೇಲೆ, ಅದೇ ಮೊಬೈಲ್ ಸಂಖ್ಯೆಯಿಂದ RCEPI ಎಂದು ಟೈಪ್ ಮಾಡಿ ಸ್ಪೇಸ್ ಬಿಟ್ಟು ವೋಟರ್ ಐಡಿ ನಂಬರನ್ನು ಟೈಪ್ ಮಾಡಿ 9212357123ಗೆ ಎಸ್‌ಎಂಎಸ್ ಕಳುಹಿಸಬೇಕು.
* ಕುಟುಂಬದ ಎಲ್ಲ ಸದಸ್ಯರ ವೋಟರ್ ಐಡಿ ನಂಬರನ್ನು ಒಂದೊಂದಾಗಿ ಕಳುಹಿಸಬೇಕು.
* ಆಧಾರ್ ಕಾರ್ಡ್ ಹೊಂದಿರುವ ಗ್ರಾಹಕರು ಮೊಬೈಲ್‌ನಿಂದ RCUID ಎಂದು ಟೈಪ್ ಮಾಡಿ, ತಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಟೈಪ್ ಮಾಡಿ 9212357123ಗೆ ಎಸ್‌ಎಂಎಸ್ ಕಳುಹಿಸಬೇಕು.
* ಹೆಚ್ಚಿನ ಮಾಹಿತಿಗೆ ಗ್ರಾಹಕರು 1967 ನಂಬರ್‌ಗೆ ಕರೆ ಮಾಡಬಹುದು.












Click it and Unblock the Notifications