ಬೆಂಗಳೂರು ರಸ್ತೆಗುಂಡಿ ಮುಚ್ಚಲು ಅಸ್ತ್ರಂ ಬಳಕೆ: ವೈರಲ್ ವಿಡಿಯೋ ಬೆನ್ನಲ್ಲೇ ಎಚ್ಚೆತ್ತ ಜಿಬಿಎ!
ಬೆಂಗಳೂರಿನಲ್ಲಿ ರಸ್ತೆಗುಂಡಿ ಸಮಸ್ಯೆ ಸೇರಿದಂತೆ ಕೆಲವೊಂದು ಸಮಸ್ಯೆಗಳಿಗೆ ಸಂಬಂಧಿಸಿದ ವಿಡಿಯೋಗಳು ವೈರಲ್ ಆಗಿರುವ ಬೆನ್ನಲ್ಲೇ ಕೆಲವೊಂದು ಪ್ರಮುಖ ರಸ್ತೆಗಳ ದುರಸ್ತಿಗೆ ಗ್ರೇಟರ್ ಬೆಂಗಳೂರು ಆಡಳಿತದ ಮಹಾನಗರ ಪಾಲಿಕೆಗಳು ಮುಂದಾಗಿವೆ. ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್.ರಮೇಶ್ ಅವರು ನಗರ ಪಾಲಿಕೆಯ ಎಲ್ಲಾ ಎಂಜಿನಿಯರರು, ಬೆಸ್ಕಾಂ, ಕೆಪಿಟಿಸಿಎಲ್, ಬಿಡಬ್ಲ್ಯೂಎಸ್ಎಸ್ ಬಿ, ಗೇಲ್, ರೈಲ್ವೆ ಹಾಗೂ ಪೋಲಿಸ್ ಇಲಾಖೆಗಳೊಂದಿಗೆ ಸೋಮವಾರ (ಸೆಪ್ಟೆಂಬರ್ 22 ರಂದು) ಸಮನ್ವಯ ಸಭೆಯನ್ನು ನಡೆಸಿದ್ದಾರೆ.
ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ಅನುಭವಿಸುವಂತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಸ್ತೆ ಮತ್ತು ರಸ್ತೆ ಗುಂಡಿ ವಿಚಾರಗಳಿಗೆ ಸಂಬಂಧಿಸಿದ ಎಲ್ಲಾ ಕೆಲಸಕಾರ್ಯಗಳನ್ನು ಇನ್ನೂ 15 ದಿನಗಳಲ್ಲಿ ಪೂರ್ಣಗೊಳಿಸುವಂತೆ ಆದೇಶಿಸಿರುತ್ತಾರೆ ಎಂದು ಆಯುಕ್ತರು ತಿಳಿಸಿದ್ದಾರೆ.

ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆಲವೊಂದು ರಸ್ತೆ ಕಾಮಗಾರಿಗಳನ್ನು ಆದ್ಯತೆ ಮೇಲೆ ಅತಿಜರೂರಾಗಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳ ನೋಡಲ್ ಅಧಿಕಾರಿಗಳಿಗೆ ಆಯುಕ್ತರು ಸೂಚಿಸಿದ್ದಾರೆ. ಇದರಲ್ಲಿ ಈಚೆಗೆ ವೈರಲ್ ಆಗಿದ್ದ ವಿಡಿಯೋವೊಂದರ ಪ್ರದೇಶವೂ ಸೇರಿದೆ.
ಪಣತ್ತೂರು ರಸ್ತೆ: ಕಾಡುಬೀಸನಹಳ್ಳಿ ಆರ್ಚ್ ನಿಂದ ರೈಲ್ವೆ ಕೆಳಸೇತುವೆವರೆಗಿನ ರಸ್ತೆಯೂ ಸುಮಾರು 1.ಕಿ.ಮೀ ಉದ್ದವಿದ್ದು ಬಿಡಬ್ಲ್ಯೂಎಸ್ಎಸ್ ಬಿ ಇಲಾಖೆಯಿಂದ ಕೈಗೊಂಡಿರುವ ನೀರು ಮತ್ತು ಒಳಚರಂಡಿ ಕೊಳವೆ ಅಳವಡಿಸುವ ಕಾರ್ಯ ಪೂರ್ಣಗೊಂಡಿರುವುದರಿಂದ ಮನೆಗಳಿಗೆ ಸಂಪರ್ಕ ಕಲ್ಪಿಸುವ ಕಾರ್ಯ ಬಾಕಿ ಇದೆ. ಇನ್ನೆರಡು ದಿನಗಳಲ್ಲಿ ಬಿಡಬ್ಲ್ಯೂಎಸ್ಎಸ್ ಬಿ ಇಲಾಖೆಯೂ ತನ್ನ ಬಾಕಿ ಕೆಲಸಗಳನ್ನು ಪೂರ್ಣಗೊಳಿಸಿಬೇಕೆಂದು ಹಾಗೂ ರಸ್ತೆ ಮತ್ತು ಮೂಲಭೂತ ವಿಭಾಗವು ಪಣತ್ತೂರು ರಸ್ತೆ ಕೆಲಸಗಳನ್ನು ವೇಗವಾಗಿ ಪೂರ್ಣಗೊಳಿಸುವಂತೆ ಸೂಚಿಸಿದ್ದಾರೆ.
ಬಳಗೆರೆ ರಸ್ತೆ: ಬಳಗೆರೆ ರಸ್ತೆಯು ಸುಮಾರು 4 ಕಿ.ಮೀ ಉದ್ದವಿದ್ದು, ಕೆಪಿಟಿಸಿಎಲ್ ಇಲಾಖೆಯಿಂದ ರಸ್ತೆಯನ್ನು ಅಗೆದಿರುವುದನ್ನು ಸರಿಯಾಗಿ ರಿಸ್ಟೋರೇಷನ್ ಕೆಲಸವನ್ನು ನಿರ್ವಹಿಸಿಲ್ಲ, ಅಲ್ಲಲ್ಲಿ ರಸ್ತೆಗಳು ಕುಸಿಯುತ್ತಿದ್ದು ಸರಿಯಾಗಿ ರಿಸ್ಟೋರೇಷನ್ ಕೆಲಸವನ್ನು ಪೂರ್ಣಗೊಳಿಸುವಂತೆ ಇನ್ನೂ ಒಂದು ವಾರದಲ್ಲಿ ಬಳಗೆರೆ ರಸ್ತೆಯನ್ನು ವಾಹನ ಸಂಚಾರಕ್ಕೆ ಯೋಗ್ಯವಾದ ರಸ್ತೆಯನ್ನಾಗಿ ಮಾಡುವಂತೆ ಕೆಪಿಟಿಸಿಎಲ್ ಹಾಗೂ ರಸ್ತೆ ಮತ್ತು ಮೂಲಭೂತ ಸೌಕರ್ಯ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು.
ವಿಬ್ ಗಯಾರ್ ಶಾಲೆ ರಸ್ತೆ: ವಿಬ್ ಗಯಾರ್ ಶಾಲೆ ರಸ್ತೆಯಲ್ಲಿ ಸುಮಾರು 1.5 ಕಿ.ಮೀ ಉದ್ದದ ರಸ್ತೆಯಲ್ಲಿ ಜಲಮಂಡಳಿ ವತಿಯಿಂದ ಈಗಾಗಲೇ ಕೊಳವೆ ಸಂಪರ್ಕ ಕಾರ್ಯ ಪೂರ್ಣಗೊಂಡಿದ್ದು, ನೀರು ಲೀಕೇಜ್ ಪರಿಶೀಲನೆ ಕಾರ್ಯವನ್ನು ಶೇ. 100 ರಷ್ಟು ಪರಿಶೀಲಿಸಿ ಆದಷ್ಟು ಬೇಗ ಎನ್.ಒ.ಸಿ ನೀಡಬೇಕೆಂದು ಹಾಗೂ ಇನ್ನೆರಡು ದಿನಗಳಲ್ಲಿ ಈ ರಸ್ತೆಯ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಆಯುಕ್ತರು ಸೂಚನೆ ನೀಡಿದ್ದಾರೆ.
ಗೇರ್ ಸ್ಕೂಲ್ ರಸ್ತೆ: ಗೇರ್ ಸ್ಕೂಲ್ ರಸ್ತೆಯಲ್ಲಿ ಸುಮಾರು 4.5 ಕಿ.ಮೀ ಉದ್ದ ರಸ್ತೆ ಕಾಮಗಾರಿಯನ್ನು ಈಗಾಗಲೇ ಕೈಗೊಂಡಿದ್ದು, ಇನ್ನುಳಿದ 1.5 ಕಿ.ಮೀ ಉದ್ದದ ರಸ್ತೆ ಕಾಮಗಾರಿಯನ್ನು ಇನ್ನು 3 ದಿನಗಳಲ್ಲಿ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹೇಳಿದ್ದಾರೆ.
ಜಯಂತಿನಗರ ರಸ್ತೆ: ಇನ್ನು ಕೆ.ಆರ್ ಪುರಂ ವಿಭಾಗದ ಜಯಂತಿನಗರ ರಸ್ತೆಯಲ್ಲಿ ಬಿಡಬ್ಲ್ಯೂಎಸ್ಎಸ್ ಬಿ ಇಲಾಖೆಯಿಂದ 4 ಜಾಗಗಳಲ್ಲಿ ರಸ್ತೆ ಪುನಸ್ಥಾಪಿಸುವ ಕಾರ್ಯ ಬಾಕಿಯಿದ್ದು ಸರಿಪಡಿಸಲು ಸಂಬಂಧಪಟ್ಟ ಇಲಾಖೆಗೆ ಸೂಚಿಸಿದ್ದು, ರಸ್ತೆ ಕಾಮಗಾರಿಯನ್ನು ಆದ್ಯತೆ ಮೇಲೆ ಪೂರ್ಣಗೊಳಿಸಿ ನಗರ ಪಾಲಿಕೆ ರಸ್ತೆ ಮತ್ತು ಮೂಲಭೂತ ಸೌಕರ್ಯ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು.
ಅಗರ ಕೆರೆ ರಸ್ತೆ: ಅಗರ ಕೆರೆ ರಸ್ತೆಯಲ್ಲಿ ಬಿಡಬ್ಲ್ಯೂಎಸ್ಎಸ್ ಬಿ ಇಲಾಖೆಯಿಂದ ಸುಮಾರು 20 ಮೀಟರ್ ಉದ್ದದ ರಸ್ತೆಯಲ್ಲಿ ಯುಜಿಡಿ ಕೊಳವೆ ಅಳವಡಿಸುವ ಕಾರ್ಯ ಸಾಗುತ್ತಿದ್ದು, ಬಿಡಬ್ಲ್ಯೂಎಸ್ಎಸ್ ಬಿ ಹಾಗೂ ನಗರ ಪಾಲಿಕೆ ರಸ್ತೆ ಮತ್ತು ಮೂಲಭೂತ ಸೌಕರ್ಯ ವಿಭಾಗದ ಅಧಿಕಾರಿಗಳು ಇನ್ನು 5 ದಿನಗಳಲ್ಲಿ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಿರಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಅಸ್ತ್ರಂ ಬಳಸಿಕೊಂಡು ರಸ್ತೆ ಗುಂಡಿ ಮುಚ್ಚಿ: ಪೋಲೀಸ್ ಸಂಚಾರ ಇಲಾಖೆಯಿಂದ ಬಿಡುಗೊಂಡಿರುವ ಅಸ್ತ್ರಂ ಆಪ್ ನಲ್ಲಿ ದಾಖಲಾಗಿರುವ ರಸ್ತೆ ಗುಂಡಿ ದೂರುಗಳನ್ನು ಆದ್ಯತೆ ಮೇಲೆ ಮುಚ್ಚುವಂತೆ ಹಾಗೂ ಫಿಕ್ಸ್ ಮೈ ಸ್ಟ್ರೀಟ್ ಆಪ್ ನಲ್ಲಿ ಸಲ್ಲಿಕೆಯಾಗಿರುವುದ ರಸ್ತೆ ಗುಂಡಿ ದೂರಗಳನ್ನು ಕೂಡ ಬಗೆಹರಿಸಲು ಕ್ರಮ ಕೈಗೊಳ್ಳವಂತೆ ಆಯುಕ್ತರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಬೃಹತ್ ನೀರುಗಾಲುವೆ ಕಾಮಗಾರಿಗೆ ವೇಗ: ಪೈ ಬಡಾವಣೆ, ಸಾಯಿ ಬಡಾವಣೆ ಹಾಗೂ ಪಣತ್ತೂರು ಪ್ರದೇಶಗಳಲ್ಲಿ ರೈಲ್ವೆ ಹಳಿ ಕೆಳಗೆ ಸಾಗುವ ಬೃಹತ್ ಮಳೆ ನೀರು ಕಾಲುವೆಗಳ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಕಾಮಗಾರಿಗಳಿಗೆ ವೇಗ ನೀಡಲು ಅಧಿಕಾರಿಗಳಿಗೆ ಸೂಚಿಸಿದರು.
ವಿಭಾಗ ಮಟ್ಟದಲ್ಲಿ ನೋಡಲ್ ಅಧಿಕಾರಿಗಳಿಗೆ ಜವಾಬ್ದಾರಿ
ಪೂರ್ವ ನಗರ ಪಾಲಿಕೆಯಲ್ಲಿ 8 ಇಂಜಿನಿಯರಿಂಗ್ ವಿಭಾಗಗಳಿದ್ದು, ಇನ್ನು ಮುಂದೆ ಕಾರ್ಯಪಾಲಕ ಅಭಿಯಂತರರಗಳೇ ವಿಭಾಗ ಮಟ್ಟದ ನೋಡಲ್ ಅಧಿಕಾರಿಗಳಾಗಿರುತ್ತಾರೆ. ಅದೇ ರೀತಿ ಕೆಪಿಟಿಸಿಎಲ್, ಬಿಡಬ್ಲ್ಯೂಎಸ್ಎಸ್ ಬಿ, ಗೇಲ್, ರೈಲ್ವೆ ಹಾಗೂ ಪೋಲಿಸ್ ಇಲಾಖೆಗಳಲ್ಲೂ ನಗರ ಪಾಲಿಕೆ ವಿಭಾಗವಾರು ಕಾರ್ಯಪಾಲಕ ಅಭಿಯಂತರರು ಹಾಗೂ ಎ.ಸಿ.ಪಿ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ಮಾಡಿಕೊಂಡು ಜವಾಬ್ದಾರಿ ವಹಿಸಿಕೊಂಡು ರಸ್ತೆ ಕಾಮಗಾರಿ, ಪಾದಚಾರಿ ಒತ್ತುವರಿ ತೆರವು ಕಾರ್ಯಾಚರಣೆ, ಇಂಟೆನ್ಸಿವ್ ಕ್ಲೀನಿಂಗ್ ಹಾಗೂ ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆಯಲ್ಲಿ ನಗರ ಪಾಲಿಕೆಯೊಂದಿಗೆ ಸಂಬಂಧಪಟ್ಟ ವಿವಿಧ ಇಲಾಖೆಗಳು ಸಮನ್ವಯ ಸಾಧಿಸಿ ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಆಯುಕ್ತರು ಸೂಚಿಸಿದರು.
ಜನರಿಗೆ ಸೇವೆ ಒದಗಿಸುವ ವಿವಿಧ ಸರ್ಕಾರಿ ಇಲಾಖೆಗಳ ನಡುವೆ ಸಮನ್ವಯದ ಕೊರತೆಯಿಂದಾಗಿ ಸಾರ್ವನಿಕರು ತೊಂದರೆ ಅನುಭವಿಸುವಂತಾಗಿದೆ,ಆದ್ದರಿಂದ ಪೂರ್ವ ನಗರ ಪಾಲಿಕೆಯೊಂದಿಗೆ ಇತರೆ ಇಲಾಖೆಗಳಾದ ಬೆಸ್ಕಾಂ ,ಕೆಪಿಟಿಸಿಎಲ್, ಬಿಡಬ್ಲ್ಯೂಎಸ್ಎಸ್ ಬಿ, ಗೇಲ್, ರೈಲ್ವೆ ಹಾಗೂ ಪೋಲಿಸ್ ಇಲಾಖೆಗಳು ಇನ್ನೂ ಮುಂದೆ ಸಮನ್ವಯ ಸಾಧಿಸಿ ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಕಾಮಗಾರಿಗಳನ್ನು ಶೀಘ್ರದಲ್ಲಿ ಸಂಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.












Click it and Unblock the Notifications