ಪಾರ್ಶ್ವವಾಯುಗೆ ಟ್ರೀಟ್ಮೆಂಟ್ ಕೊಡ್ತೀನೆಂದು ಇಂಜೆಕ್ಷನ್ ತೋರಿಸಿದ್ದೇ ತಡ ಎದ್ನೋ, ಬಿದ್ನೋ ಓಡಿದ ಭಿಕ್ಷುಕ, ವಿಡಿಯೋ ಭಾರಿ ವೈರಲ್
ನಾವೆಲ್ಲರೂ ರಸ್ತೆಯಲ್ಲಿ, ಟ್ರಾಫಿಕ್ ಸಿಗ್ನಲ್‌ಗಳಲ್ಲಿ ನಾನಾ ರೀತಿಯ ಭಿಕ್ಷುಕರನ್ನ ನೋಡಿರುತ್ತೇವೆ. ಕೆಲವರು ನಿಜವಾಗಿಯೂ ಅಸಹಾಯಕರಾಗಿದ್ದರೆ, ಇನ್ನು ಕೆಲವರು ಜನರ ಕನಿಕರ ಗಿಟ್ಟಿಸಲು ನಾನಾ ನಾಟಕಗಳನ್ನ ಆಡುತ್ತಾರೆ. ಇದೀಗ ಇಂತಹದ್ದೇ ಒಂದು ಫೇಕ್ ಭಿಕ್ಷುಕನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರನ್ನ ನಗೆಗಡಲಲ್ಲಿ ತೇಲಿಸುತ್ತಿದೆ.
ಪಾರ್ಶ್ವವಾಯು ಪೀಡಿತ ಭಿಕ್ಷುಕನ ಅಸಲಿಯತ್ತು ಬಯಲು
ವೈರಲ್ ಆಗಿರುವ ಈ ವಿಡಿಯೋದಲ್ಲಿ, ರಸ್ತೆಯ ಬದಿಯಲ್ಲಿ ವ್ಯಕ್ತಿಯೊಬ್ಬ ತನಗೆ ಪಾರ್ಶ್ವವಾಯು ಇದೆ, ನಡೆಯಲು ಸಾಧ್ಯವಿಲ್ಲ ಎಂಬಂತೆ ನಟಿಸುತ್ತಾ ಭಿಕ್ಷೆ ಬೇಡುತ್ತಿರುತ್ತಾನೆ. ಈ ವೇಳೆ ಅಲ್ಲಿಗೆ ಬರುವ ಯುವಕನೊಬ್ಬ ಆತನನ್ನ ಪ್ರಶ್ನಿಸಲು ಶುರು ಮಾಡುತ್ತಾನೆ.

"ನಿನಗೆ ಏನಾಗಿದೆ? ಎಲ್ಲಿಂದ ಬಂದಿದ್ದೀಯಾ? ನಿನ್ನ ಸಮಸ್ಯೆಯಾದರೂ ಏನು?" ಎಂದು ಸಾಲು ಸಾಲು ಪ್ರಶ್ನೆಗಳನ್ನ ಕೇಳುತ್ತಾನೆ. ಆದರೆ ಆ ಭಿಕ್ಷುಕ ಮಾತ್ರ ತಡಬಡಾಯಿಸುತ್ತಾ, ಒಂದಕ್ಕೊಂದು ಸಂಬಂಧವಿಲ್ಲದ ಉತ್ತರಗಳನ್ನ ನೀಡುತ್ತಾನೆ. ಆತನ ವರ್ತನೆ ಮತ್ತು ಆತ ನೀಡುತ್ತಿದ್ದ ಉತ್ತರಗಳಿಂದ ಆತನಿಗೆ ಯಾವುದೇ ರೀತಿಯ ಕಾಯಿಲೆ ಇಲ್ಲ ಎಂಬುದು ವಿಡಿಯೋ ಮಾಡುತ್ತಿದ್ದ ಯುವಕನಿಗೆ ಖಚಿತವಾಗುತ್ತದೆ. ಆದರೂ ಆತನ ಬಣ್ಣ ಬಯಲು ಮಾಡಲು ಯುವಕ ಮುಂದಾಗುತ್ತಾನೆ.
ಇಂಜೆಕ್ಷನ್ ಭಯ, ಎದ್ದು ಓಡಿದ ಭಿಕ್ಷುಕ!
ಭಿಕ್ಷುಕನ ನಾಟಕವನ್ನ ಅರ್ಥಮಾಡಿಕೊಂಡ ಆ ಯುವಕ, ತಕ್ಷಣವೇ ತನ್ನ ಬಳಿ ಇದ್ದ ಇಂಜೆಕ್ಷನ್ ಸಿರಿಂಜ್ ಒಂದನ್ನ ಹೊರತೆಗೆಯುತ್ತಾನೆ. "ನಿನಗೆ ಹುಷಾರಿಲ್ಲ ತಾನೇ, ಈ ಇಂಜೆಕ್ಷನ್ ತೆಗೆದುಕೋ, ತಕ್ಷಣ ಗುಣಮುಖನಾಗುತ್ತೀಯಾ" ಎಂದು ಹೇಳುತ್ತಾ ಭಿಕ್ಷುಕನತ್ತ ಆ ಇಂಜೆಕ್ಷನ್ ಅನ್ನು ತರುತ್ತಾನೆ. ಅಲ್ಲಿಯವರೆಗೆ ನನಗೆ ಕೈಕಾಲು ಬರುತ್ತಿಲ್ಲ, ನಡೆಯಲು ಆಗುತ್ತಿಲ್ಲ ಎಂದು ನಾಟಕವಾಡುತ್ತಿದ್ದ ಭಿಕ್ಷುಕ, ಇಂಜೆಕ್ಷನ್ ನೋಡಿದ್ದೇ ತಡ, ಕ್ಷಣಾರ್ಧದಲ್ಲಿ ಎದ್ದು ನಿಂತು ತನ್ನ ಪ್ರಾಣವೇ ಹೋಗುತ್ತಿದೆ ಎಂಬಂತೆ ಅಲ್ಲಿಂದ ಕಾಲ್ಕೀಳುತ್ತಾನೆ.
ಆತ ಓಡಿದ ವೇಗವನ್ನ ನೋಡಿ ಅಲ್ಲಿನ ಜನ ಹಾಗೂ ವಿಡಿಯೋ ನೋಡಿದ ನೆಟ್ಟಿಗರು ದಂಗಾಗಿದ್ದಾರೆ.
ಮೊಹಮ್ಮದ್ ತೋಹಾ09 ಎಂಬುವವರು ಈ ವಿಡಿಯೋವನ್ನ ಮೊದಲು ಹಂಚಿಕೊಂಡಿದ್ದು, ಎಕ್ಸ್‌ನಲ್ಲಿ ಅತೀ ಹೆಚ್ಚು ಈ ವಿಡಿಯೋ ಹರಿದಾಡುತ್ತಿದೆ. ಘಟನೆ ಎಲ್ಲಿ ನಡೆದಿದೆ ಎಂಬ ನಿಖರ ಮಾಹಿತಿ ಲಭ್ಯವಾಗಿಲ್ಲ.
ಉಸೇನ್ ಬೋಲ್ಟ್ ಕೂಡ ನಾಚುವಂತಾ ಓಟ ಎಂದ ನೆಟ್ಟಿಗರು
ಈ ತಮಾಷೆಯ ವಿಡಿಯೋ ನೋಡಿದ ನೆಟ್ಟಿಗರು ಬಗೆಬಗೆಯ ಕಾಮೆಂಟ್‌ಗಳನ್ನ ಮಾಡುತ್ತಿದ್ದಾರೆ. ಎಕ್ಸ್ ಬಳಕೆದಾರರೊಬ್ಬರು, "ಇದು ಶತಮಾನದ ಓಟ " ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು, "ಇದು ಅತ್ಯಂತ ವೇಗದ ಎಕ್ಸಿಟ್" ಎಂದು ಕಾಲೆಳೆದಿದ್ದಾರೆ. ಇನ್ನೊಬ್ಬರು "ಅವನ ಕಾಲುಗಳು ಬೇರೆಯದ್ದೇ ಪ್ಲಾನ್ ಮಾಡಿದ್ದವು" ಎಂದು ಹಾಸ್ಯ ಮಾಡಿದ್ದಾರೆ.
"Paralyzed" Beggar Runs at Full Speed After Being Offered Treatment for Paralysis. https://t.co/7sDuOlM5f3
— WarMonitor (@WarMonitorINTL) October 26, 2026
ಇದಲ್ಲದೆ ವಿಡಿಯೋಗೆ ಮತ್ತಷ್ಟು ಕಾಮೆಂಟ್‌ಗಳು ಹರಿದುಬರುತ್ತಿದ್ದು, ನೆಟ್ಟಿಗರೊಬ್ಬರು "ಉಸೇನ್ ಬೋಲ್ಟ್ ಕೂಡ ಈತನ ಓಟವನ್ನು ನೋಡಿ ಖಂಡಿತ ನಾಚಿಕೊಳ್ಳುತ್ತಾನೆ" ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬ ನೆಟ್ಟಿಗ "ಇದು ಪ್ರಪಂಚದ ಅತ್ಯಂತ ಅದ್ಭುತವಾದ ವೈದ್ಯಕೀಯ ಚಮತ್ಕಾರ, ಕೇವಲ ಒಂದು ಇಂಜೆಕ್ಷನ್ ನೋಡಿ ಒಂದೇ ನಿಮಿಷದಲ್ಲಿ ಗುಣಮುಖನಾದ" ಎಂದು ವ್ಯಂಗ್ಯವಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ಹೆಚ್ಚಾಗುತ್ತಿವೆ. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ವೃದ್ಧರು, ಮಹಿಳೆಯರು ಹಾಗೂ ಮಕ್ಕಳನ್ನ ಬಳಸಿಕೊಂಡು ಕೆಲ ಜಾಲಗಳು ಭಿಕ್ಷಾಟನೆ ದಂಧೆ ನಡೆಸುತ್ತಿವೆ.
ನಿಜವಾಗಿಯೂ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಮಾನವೀಯತೆ. ಆದರೆ, ಇಂತಹ ವಂಚಕರನ್ನ ಗುರುತಿಸಿ ಅವರಿಗೆ ಪಾಠ ಕಲಿಸುವ ಕೆಲಸವೂ ಆಗಬೇಕಿದೆ. ಜನರ ಭಾವನೆಗಳ ಜೊತೆ ಆಟವಾಡುವ ಇಂತಹ ನಕಲಿ ಭಿಕ್ಷುಕರ ಬಗ್ಗೆ ಸಾರ್ವಜನಿಕರು ಎಚ್ಚರದಿಂದ ಇರಬೇಕೆಂಬುದನ್ನು ಈ ವಿಡಿಯೋ ಸಾರುತ್ತಿದೆ.


Click it and Unblock the Notifications
