ಬೆಂಗಳೂರಿನ ಫುಟ್‌ಪಾತ್‌ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹದಗೆಟ್ಟ ಫುಟ್‌ಪಾತ್‌ಗಳ ದುರಸ್ತಿಗೆ ತಮ್ಮ ವೈರಲ್ ವಿಡಿಯೋಗಳ ಮೂಲಕ ಕಾರಣವಾಗಿದ್ದ ಕೆನಡಾದ ಜನಪ್ರಿಯ ವ್ಲಾಗರ್ ಕ್ಯಾಲೆಬ್ ಫ್ರೀಸೆನ್ (Caleb Friesen) ಇದೀಗ ಬೆಂಗಳೂರಿಗೆ ಗುಡ್ ಬೈ ಹೇಳಿದ್ದಾರೆ. ಸುಮಾರು 6.5 ವರ್ಷಗಳ ಕಾಲ ಬೆಂಗಳೂರಿನಲ್ಲಿದ್ದ ಅವರು, ತಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಹಾಗೂ ನೆಮ್ಮದಿಯ ಜೀವನ ಅರಸಿ ಮಿಜೋರಾಂನ ಐಜ್ವಾಲ್‌ಗೆ ಸ್ಥಳಾಂತರಗೊಳ್ಳುತ್ತಿದ್ದಾರೆ.

ಬೆಂಗಳೂರಿನ ಫುಟ್‌ಪಾತ್‌ಗಳ ಶೋಚನೀಯ ಸ್ಥಿತಿಯನ್ನು 'ಮೊದಲು ಮತ್ತು ನಂತರ' (before and after) ಎಂಬ ವಿಡಿಯೋಗಳ ಮೂಲಕ ಕ್ಯಾಲೆಬ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದರು. ಇವರ ಈ ವಿಡಿಯೋಗಳು ಬಿಬಿಎಂಪಿ (BBMP) ಅಧಿಕಾರಿಗಳನ್ನು ಎಚ್ಚರಿಸಿ, ಅನೇಕ ಬಡಾವಣೆಗಳಲ್ಲಿ ರಸ್ತೆ ಹಾಗೂ ಫುಟ್‌ಪಾತ್ ದುರಸ್ತಿ ಕಾರ್ಯ ನಡೆಯುವಂತೆ ಮಾಡಿದ್ದವು. ಈ ಮೂಲಕ ಅವರು ಬೆಂಗಳೂರಿಗರ ಪಾಲಿನ 'ಸ್ಥಳೀಯ ಹೀರೋ' ಆಗಿ ಗುರುತಿಸಿಕೊಂಡಿದ್ದರು. ಆದರೆ ಇದೀಗ ಅವರು ಭಾರತದ ಸಿಲಿಕಾನ್ ಸಿಟಿಯನ್ನು ತೊರೆಯುವ ನಿರ್ಧಾರ ಪ್ರಕಟಿಸಿದ್ದಾರೆ.

Canadian Vlogger

ಬೆಂಗಳೂರು ತೊರೆಯಲು ಕಾರಣವೇನು?

ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಕ್ಯಾಲೆಬ್, "ವಿದಾಯ, ಬೆಂಗಳೂರು. 6.5 ವರ್ಷಗಳ ನಂತರ ಭಾರತದಲ್ಲಿ ನನ್ನ ನೆಚ್ಚಿನ ನಗರಗಳಲ್ಲೊಂದಾದ ಬೆಂಗಳೂರಿಗೆ ಅಂತಿಮವಾಗಿ ಗುಡ್ ಬೈ ಹೇಳುತ್ತಿದ್ದೇನೆ. ಮಕ್ಕಳು ಹುಟ್ಟಿದ ನಂತರ ಜೀವನದ ಬಗೆಗಿನ ನನ್ನ ದೃಷ್ಟಿಕೋನ ಬದಲಾಗಿದೆ. ಜನರು ಪರಸ್ಪರ ಗೌರವಿಸುವ, ತಾಳ್ಮೆಯಿಂದ ಇರುವ ಹಾಗೂ ಸಮಾನತೆ ಇರುವಂತಹ ವಾತಾವರಣದಲ್ಲಿ ನನ್ನ ಮಕ್ಕಳು ಬೆಳೆಯಬೇಕು ಎಂಬುದು ನನ್ನ ಆಸೆ. ಬೆಂಗಳೂರಿನ ಕೆಲವೆಡೆ ಇಂತಹ ವಾತಾವರಣವಿದ್ದರೂ, ಐಜ್ವಾಲ್‌ನಲ್ಲಿರುವಷ್ಟು ಸರ್ವವ್ಯಾಪಿಯಾಗಿ ಇಲ್ಲಿಲ್ಲ" ಎಂದು ತಿಳಿಸಿದ್ದಾರೆ.

ಐಜ್ವಾಲ್ ಅನ್ನು ಆಯ್ಕೆ ಮಾಡಲು ಮುಖ್ಯ ಕಾರಣ ಮಿಜೋ ಸಂಸ್ಕೃತಿಯಲ್ಲಿರುವ 'ತ್ಲಾಮ್ಂಗೈಹ್ನಾ' (Tlawmngaihna) ಎಂಬ ಪರಿಕಲ್ಪನೆ ಎನ್ನುತ್ತಾರೆ ಕ್ಯಾಲೆಬ್. "ಇದರ ಅರ್ಥ ನಿಸ್ವಾರ್ಥತೆ. ಬೇರೆಯವರಿಗಾಗಿ ಪ್ರತಿಫಲಾಪೇಕ್ಷೆ ಇಲ್ಲದೆ ಒಳಿತು ಮಾಡುವುದು ಮಿಜೋ ಸಂಸ್ಕೃತಿಯ ಪ್ರಮುಖ ಆಧಾರಸ್ತಂಭವಾಗಿದೆ. ಇಂತಹ ಗುಣವನ್ನು ನಾನು ಭಾರತದ ಇತರ ಭಾಗಗಳಲ್ಲಿ ಹೆಚ್ಚಾಗಿ ನೋಡಿಲ್ಲ. ಈ ನಿಸ್ವಾರ್ಥತೆಯ ಕೊರತೆಯೇ ಇಂದು ಭಾರತ ಎದುರಿಸುತ್ತಿರುವ ಭ್ರಷ್ಟಾಚಾರ, ಕಳಪೆ ಮೂಲಸೌಕರ್ಯ, ಎಲ್ಲೆಂದರಲ್ಲಿ ಕಸ ಎಸೆಯುವಿಕೆ ಮುಂತಾದ ಹಲವು ಸಮಸ್ಯೆಗಳಿಗೆ ಮೂಲ ಕಾರಣ ಎಂದು ನಾನು ಭಾವಿಸುತ್ತೇನೆ. ಇಂತಹ ನಕಾರಾತ್ಮಕ ಅಂಶಗಳನ್ನು ಸಾಮಾನ್ಯ ಎಂದು ಪರಿಗಣಿಸುವ ವಾತಾವರಣದಲ್ಲಿ ನನ್ನ ಮಕ್ಕಳು ಬೆಳೆಯುವುದು ನನಗೆ ಇಷ್ಟವಿಲ್ಲ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದರ ಜೊತೆಗೆ, ಕ್ಯಾಲೆಬ್ ಅವರ ಪತ್ನಿಯ ಕುಟುಂಬ ಮಿಜೋರಾಂನ ಐಜ್ವಾಲ್‌ನಲ್ಲಿದೆ. "ನನ್ನ ಮಕ್ಕಳು ಕುಟುಂಬದ ಪ್ರೀತಿಯ ನಡುವೆ ಬೆಳೆಯಬೇಕು. ನಾನು ಕೆಲಸ ಅಥವಾ ಪ್ರಯಾಣದಲ್ಲಿ ನಿರತನಾಗಿದ್ದರೂ, ಮಕ್ಕಳನ್ನು ಸರಿಯಾದ ಮಾರ್ಗದಲ್ಲಿ ಬೆಳೆಸಲು, ಪ್ರೀತಿಸಲು ಅಲ್ಲಿ ಕುಟುಂಬದವರಿದ್ದಾರೆ. ಇದು ಐಜ್ವಾಲ್‌ನಲ್ಲಿ ಮಾತ್ರ ಸಾಧ್ಯ" ಎಂದು ಅವರು ಹೇಳಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ

ಕ್ಯಾಲೆಬ್ ಅವರ ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕರು ಅವರ ನಡೆಯನ್ನು ಸ್ವಾಗತಿಸಿದ್ದರೆ, ಬೆಂಗಳೂರಿಗರು ಮಾತ್ರ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. "ಇದು ಸರಿಯಾದ ನಿರ್ಧಾರ, ಕ್ಯಾಲೆಬ್. ಈಶಾನ್ಯ ಭಾರತವು ಮಕ್ಕಳ ಭವಿಷ್ಯಕ್ಕೆ ಹಾಗೂ ಮೌಲ್ಯಾಧಾರಿತ ಜೀವನಕ್ಕೆ ಅತ್ಯುತ್ತಮ ಸ್ಥಳವಾಗಿದೆ" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, "ಇದು ಬೆಂಗಳೂರಿನ ರಸ್ತೆಗಳಿಗೆ ಆದ ಬಹುದೊಡ್ಡ ನಷ್ಟ... ಇನ್ಮುಂದೆ ನಮ್ಮ ಜೀವಿತಾವಧಿಯಲ್ಲಿ ಫುಟ್‌ಪಾತ್‌ಗಳು ಸರಿಹೋಗುತ್ತವೆ ಎಂಬ ಭರವಸೆಯೇ ನಮಗಿಲ್ಲ" ಎಂದು ಕಳವಳ ವ್ಯಕ್ತಪಡಿಸಿದ್ದಾರೆ. "ಜೀವನದ ಗುಣಮಟ್ಟಕ್ಕೆ ಆದ್ಯತೆ ನೀಡುವುದು ಮುಖ್ಯ, ಇದು ಸರಿಯಾದ ಮಾರ್ಗ" ಎಂದು ನೆಟ್ಟಿಗರು ಕ್ಯಾಲೆಬ್ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+