RCB Fan Stampede: ಕಾಲ್ತುಳಿತದ ಹಿನ್ನೆಲೆ ಈ ಮೆಟ್ರೋ ನಿಲ್ದಾಣಗಳು ಬಂದ್
ಆರ್‌ಸಿಬಿ ಕಪ್ ಗೆದ್ದಿರುವ ಸಂಭ್ರಮದ ಜೊತೆ ಬೆಂಗಳೂರಿನಲ್ಲಿ ಶೋಕ ಮನೆ ಮಾಡಿದೆ. ನೆಚ್ಚಿನ ತಂಡವನ್ನು ನೋಡಲು ಬಂದಿದ್ದ ಅಭಿಮಾನಿಗಳು ಕಾಲ್ತುಳಿತ ಸಂಭವಿಸಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಪರಿಸ್ಥಿತಿ ನಿಯಂತ್ರಣ ತಪ್ಪಿರುವ ಹಿನ್ನೆಲೆ ಪೊಲೀಸರು ಅಭಿಮಾನಿಗಳನ್ನ ಚದುರಿಸಲು ಲಾಠಿಚಾರ್ಜ್ ಕೂಡ ಮಾಡಿದ್ದಾರೆ. ಇನ್ನು ಅಭಿಮಾನಿಗಳ ಜನಸಂದಣಿ ಹೆಚ್ಚಾಗಿ ಮೆಟ್ರೋ ನಿಲ್ದಾಣಗಳಲ್ಲಿಯೂ ಜನ ತುಂಬಿತುಳುಕಾಡುತ್ತಿದ್ದಾರೆ. ಈ ಹಿನ್ನೆಲೆ ಹಲವು ಮೆಟ್ರೋ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಮುಜಾಗ್ರತಾ ಕ್ರಮವಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಸೆಂಟ್ರಲ್ ಕಾಲೇಜು, ವಿಧಾನಸೌಧ, ಕಬ್ಬನ್ ಪಾರ್ಕ್ ಹಾಗೂ ಎಂಜಿ ರಸ್ತೆ ಮೆಟ್ರೋ ನಿಲ್ದಾಣಗಳನ್ನು ಬಂದ್ ಮಾಡಿದೆ. ವಿಧಾನಸೌಧ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜನದಟ್ಟಣೆ ಹೆಚ್ಚಿರುವುದರಿಂದ, ಸಂಜೆ 4.30 ರಿಂದ ಮುಂದಿನ ಸೂಚನೆ ಬರುವವರೆಗೆ ಕಬ್ಬನ್ ಪಾರ್ಕ್ ಮತ್ತು ವಿಧಾನಸೌಧ ನಿಲ್ದಾಣಗಳಲ್ಲಿ ಮೆಟ್ರೋ ರೈಲುಗಳು ನಿಲ್ಲುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಈ ಮೆಟ್ರೋ ನಿಲ್ದಾಣಗಳಲ್ಲಿ ಟೋಕನ್ ಮತ್ತು ಕ್ಯೂಆರ್ ಕೋಡ್ ಟಿಕೆಟ್ ವಿತರಣಾ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಎಲ್ಲ ಪ್ರಯಾಣಿಕರು ಈ ತಾತ್ಕಾಲಿಕ ಬದಲಾವಣೆಗಳನ್ನು ಗಮನಿಸಿ ಸುಗಮ ಪ್ರಯಾಣಕ್ಕಾಗಿ ಮೆಟ್ರೋ ಸಿಬ್ಬಂದಿಯೊಂದಿಗೆ ಸಹಕರಿಸುವಂತೆ ಕೋರಿದೆ. ಪ್ರಯಾಣಿಕರು ತಮ್ಮ ಪ್ರಯಾಣದ ಅಗತ್ಯಗಳಿಗಾಗಿ ಪರ್ಯಾಯ ಮೆಟ್ರೋ ನಿಲ್ದಾಣಗಳನ್ನು ಬಳಸುವಂತೆ ಸೂಚಿಸಿದೆ.
ಮೃತರ ನಿಖರ ಸಂಖ್ಯೆ ಹೇಳಲು ಸಾಧ್ಯವಿಲ್ಲ: ಡಿಕೆಶಿ
ಆರ್‌ಸಿಬಿ ಅಭಿಮಾನಿಗಳ ಕಾಲ್ತುಳಿತದಲ್ಲಿ ಸಾವುಗಳ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದಾರೆ. ನಾನು ಪೊಲೀಸ್ ಆಯುಕ್ತರು ಹಾಗೂ ಎಲ್ಲರೊಂದಿಗೂ ಮಾತನಾಡಿದ್ದೇನೆ. ನಾನು ನಂತರ ಆಸ್ಪತ್ರೆಗೆ ಹೋಗುತ್ತೇನೆ. ರೋಗಿಗಳನ್ನು ನೋಡಿಕೊಳ್ಳುತ್ತಿರುವ ವೈದ್ಯರಿಗೆ ತೊಂದರೆ ನೀಡಲು ನಾನು ಬಯಸುವುದಿಲ್ಲ. ಸಾವಿನ ನಿಖರವಾದ ಸಂಖ್ಯೆಯನ್ನು ಈಗ ಹೇಳಲು ಸಾಧ್ಯವಿಲ್ಲ. ಜನರು ಶಾಂತವಾಗಿರಲು ನಾವು ಮನವಿ ಮಾಡುತ್ತೇವೆ. ನಾವು ಕಾರ್ಯಕ್ರಮವನ್ನು ಕೂಡಲೇ ಮೊಟಕುಗೊಳಿಸಿದ್ದೇವೆ. ಕಾರ್ಯಕ್ರಮವು ಕೇವಲ 10 ನಿಮಿಷಗಳಲ್ಲಿ ಕೊನೆಗೊಂಡಿತು. ಕಾರ್ಯಕ್ರಮಕ್ಕೆ ಲಕ್ಷಗಟ್ಟಲೆ ಜನ ಬಂದಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬರಲು ಸಮಯ ಬೇಕು ಎಂದಿದ್ದಾರೆ.
ಸುರಕ್ಷಿತವಾಗಿ ಮನೆಗೆ ಮರಳಿ: ಹೆಚ್‌ಡಿಕೆ ಮನವಿ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ವಿಜಯೋತ್ಸವದ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿ ಜನರು ಸಾವನ್ನಪ್ಪಿದ ದುರಂತ ಘಟನೆ ನನಗೆ ತೀವ್ರ ಆಘಾತವನ್ನುಂಟು ಮಾಡಿದೆ. ಆಚರಣೆಗಳು ಪ್ರಾರಂಭವಾಗುವ ಮೊದಲೇ ಅಮಾಯಕ ಜೀವಗಳನ್ನು ಕಳೆದುಕೊಂಡಿರುವುದನ್ನು ನೋಡುವುದು ಅತ್ಯಂತ ನೋವಿನ ಸಂಗತಿ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.
ಈ ಬೃಹತ್ ದುರಂತಕ್ಕೆ ಪ್ರಾಥಮಿಕ ಕಾರಣ ಸರಿಯಾದ ಯೋಜನೆಯ ಕೊರತೆ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ಸಂಪೂರ್ಣ ವಿಫಲತೆ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಈ ದುರಂತದ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಗಾಯಾಳುಗಳಿಗೆ ಸಾಧ್ಯವಾದಷ್ಟು ಉತ್ತಮ ಚಿಕಿತ್ಸೆ ದೊರೆಯುವುದನ್ನು ಖಚಿತಪಡಿಸಿಕೊಳ್ಳುವುದರ ಜೊತೆಗೆ, ಸರ್ಕಾರವು ಮೃತರ ಕುಟುಂಬಗಳಿಗೆ ಸಹಾಯ ಮಾಡಲು ತಕ್ಷಣವೇ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
ಆಚರಣೆಗಳನ್ನು ವೀಕ್ಷಿಸಲು ಕ್ರೀಡಾಂಗಣ ಮತ್ತು ವಿಧಾನಸೌಧದ ಬಳಿ ಜಮಾಯಿಸಿದ್ದ ಕ್ರಿಕೆಟ್ ಅಭಿಮಾನಿಗಳು ಭಯಭೀತರಾಗದೆ ಅಥವಾ ತೊಂದರೆಯಿಲ್ಲದೆ ಸುರಕ್ಷಿತವಾಗಿ ಮನೆಗೆ ಮರಳಬೇಕು ಎಂಬುದು ನನ್ನ ಹೃತ್ಪೂರ್ವಕ ಕಳವಳ. ಪೊಲೀಸರು ಈ ನಿಟ್ಟಿನಲ್ಲಿ ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಸಾರ್ವಜನಿಕರಿಗೆ ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದಾರೆ.












Click it and Unblock the Notifications