ಬೆಂಗಳೂರು: ಗಾಂಧಿ ಬಜಾರ್‌ನಲ್ಲಿ ವಾಹನ ಸಂಚಾರ ನಿಷೇಧಕ್ಕೆ ನಿರ್ಧಾರ
ಬೆಂಗಳೂರು,ಫೆಬ್ರವರಿ 13: ನಗರದ ಗಾಂಧಿ ಬಜಾರ್‌ನಲ್ಲಿ ವಾಹನ ಸಂಚಾರ ನಿಷೇಧಕ್ಕೆ ಬಿಬಿಎಂಪಿ ನಿರ್ಧಾರ ಮಾಡಿದೆ.
ಟ್ಯಾಗೋರ್ ಪಾರ್ಕ್ ವೃತ್ತದಿಂದ ರಾಮಕೃಷ್ಣ ಆಶ್ರಮದವರೆಗಿನ 700 ಮೀಟರ್ ಉದ್ದದ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಿ ಎಲೆಕ್ಟ್ರಿಕ್ ವಾಹನ, ಸೈಕಲ್ ಹಾಗೂ ಪಾದಚಾರಿ ಸಂಚಾರಕ್ಕೆ ಅವಕಾಶ ನೀಡಲು ಬಿಬಿಎಂಪಿ ಮುಂದಾಗಿದೆ.
ಗಾಂಧಿ ಬಜಾರ್ ಪ್ರದೇಶವನ್ನು ಪಾದಚಾರಿ ಸ್ನೇಹಿ ಹಾಗೂ ಐತಿಹಾಸಿಕ ತಾಣವನ್ನಾಗಿ ಪರಿವರ್ತಿಸುವ ಕುರಿತು ನಗರ ಭೂ ಸಾರಿಗೆ ನಿರ್ದೇಶನಾಲಯ ಬಿಬಿಎಂಪಿ ಅಧಿಕಾರಿಗಳ ಸಭೆ ನಡೆಸಿತು.
ಈ ಕುರಿತು ಬಿಬಿಎಂಪಿ ಆಯುಕ್ತ ಮಂಜುನಾಥ್ ಮಾತನಾಡಿ, ಗಾಂಧಿ ಬಜಾರ್ ಸುತ್ತಮುತ್ತಲಿನ ಪ್ರದೇಶವನ್ನು ಪಾದಚಾರಿ ಸ್ನೇಹಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ಡಲ್ಟ್ ಯೋಜನೆ ರೂಪಿಸಿದೆ.
ಈ ಭಾಗದ 700 .ಮೀ ವ್ಯಾಪ್ತಿಯಲ್ಲಿ ವಾಹನ ಸಂಚಾರ ನಿಷೇಧಿಸುವ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಿ ಯೋಜನೆ ಜಾರಿ ಮಾಡಲಾಗುವುದು ಎಂದು ಹೇಳಿದ್ದಾರೆ.
ಗಾಂಧಿ ಬಜಾರ್ ರಸ್ತೆಯಲ್ಲಿ ಹೂವು,ಹಣ್ಣು,ಪೂಜಾ ಸಾಮಗ್ರಿಗಳ ಮಳಿಗೆ,ತರಕಾರಿ ಮಳಿಗೆಗಳಿವೆ.
ಇಲ್ಲಿ ಬೀದಿಬದಿ ವ್ಯಾಪಾರಿಗಳು ಹೆಚ್ಚಿದ್ದು,ಪಾದಚಾರಿ ಮಾರ್ಗದಲ್ಲಿ ವ್ಯಾಪಾರ ಮಾಡುತ್ತಿರುವುದರಿಂದ ಸಂಚಾರ ದಟ್ಟಣೆ ಸಮಸ್ಯೆಯಾಗುತ್ತಿದೆ. ಇದನ್ನು ತಪ್ಪಿಸಿ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಉದ್ದೇಶವಿದೆ ಎಂದರು.
ಡಲ್ಟ್ ರೂಪಿಸಿರುವ ಯೋಜನೆಯಲ್ಲಿ ದ್ವಿಚಕ್ರ ವಾಹನಗಳು, ಆಟೋ ರಿಕ್ಷಾಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ, ಸುಸಜ್ಜಿತ ಪಾದಚಾರಿ ಮಾರ್ಗ, ಮಾರಾಟ ಮಾಡಲು ಮಳಿಗೆಗಳಿಗೆ ಸ್ಥಳಾವಕಾಶ ಕಲ್ಪಿಸಲಾಗುತ್ತದೆ.
ಗಾಂಧಿ ಬಜಾರ್ ರಸ್ತೆಯ ಹೂವು ಮಾರಾಟ ಮಾಡುವ ಕಟ್ಟಡದ ಬಳಿ ಮಲ್ಟಿ ಲೆವೆಲ್ ಕಾರು ಪಾರ್ಕಿಂಗ್ ನಿರ್ಮಾಣ ಮಾಡಲು ಕೂಡ ಯೋಜನೆ ರೂಪಿಸಲಾಗಿದೆ.