Vande Bharat Express: 3 ಗಂಟೆ 20 ನಿಮಿಷದಲ್ಲಿ ಬೆಂಗಳೂರಿನಿಂದ ದಾವಣಗೆರೆ ತಲುಪಿದ ವಂದೇ ಭಾರತ್ ಎಕ್ಸ್‌ಪ್ರೆಸ್
ಕರ್ನಾಟಕ ರಾಜ್ಯದ ಎರಡನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಜೂನ್ 26ರಂದು ಸಂಚಾರ ಆರಂಭಿಸಲಿದೆ. ಧಾರವಾಡ-ಹುಬ್ಬಳ್ಳಿ-ಬೆಂಗಳೂರು ನಡುವೆ ಈ ರೈಲು ಓಡಾಟ ನಡೆಸಲಿದ್ದು, ಅದಕ್ಕೆ ಮುನ್ನ ಪ್ರಯೋಗಾತ್ಮಕ ಸಂಚಾರ ನಡೆಸುತ್ತಿದೆ.
ಸೋಮವಾರ ವಂದೇಭಾರತ್ ಎಕ್ಸ್‌ಪ್ರೆಸ್ ಪ್ರಯೋಗಾತ್ಮಕ ಓಡಾಟ ನಡೆಸುತ್ತಿದ್ದು ಇದೇ ಮೊದಲ ಬಾರಿಗೆ ದಾವಣಗೆರೆ ಜನತೆ ವಂದೇ ಭಾರತ್ ರೈಲನ್ನು ಕಣ್ತುಂಬಿಕೊಂಡರು. ಬೆಂಗಳೂರು ಕೆಎಸ್‌ಆರ್ ಜಂಕ್ಷನ್‌ನಿಂದ ಹೊರಟ ವಂದೇ ಭಾರತ್ ಎಕ್ಸ್‌ಪ್ರೆಸ್ ಕೇವಲ 3.20 ಗಂಟೆಯಲ್ಲಿ ದಾವಣಗೆರೆ ತಲುಪಿದೆ.

ಸೋಮವಾರ ಬೆಳಗ್ಗೆ 5.45ಕ್ಕೆ ಬೆಂಗಳೂರಿನ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಹೊರಟ ವಂದೇ ಭಾರತ್ ಎಕ್ಸ್‌ಪ್ರೆಸ್ 3.20 ನಿಮಿಷದಲ್ಲಿ ದಾವಣಗೆರೆ ತಲುಪಿದೆ. ಮಧ್ಯಾಹ್ನ 12.40 ಕ್ಕೆ ಧಾರವಾಡ ತಲುಪಲಿದ್ದು, ಮತ್ತೆ ಮಧ್ಯಾಹ್ನ 1.15ಕ್ಕೆ ಹೊರಟು ರಾತ್ರಿ 8.10ಕ್ಕೆ ಬೆಂಗಳೂರು ತಲುಪಲಿದೆ.
ಬೆಂಗಳೂರು-ಅರಸೀಕೆರೆ ಯಶಸ್ವಿ ಓಡಾಟ
ಈಗಾಗಲೇ ಬೆಂಗಳೂರು-ಅರಸೀಕೆರೆ ನಡುವೆ ವಂದೇಭಾರತ್ ಎಕ್ಸ್‌ಪ್ರೆಸ್ ಪ್ರಯೋಗಾತ್ಮಕ ಸಂಚಾರ ನಡೆಸಿತ್ತು. ಬೆಂಗಳೂರಿನಿಂದ ಹೊರಟು ಕೇವಲ 2 ಗಂಟೆಗಳಲ್ಲಿ ಅರಸೀಕೆರೆ ತಲುಪಿತ್ತು. ಈಗ ದಾವಣಗೆರೆಯನ್ನು 3 ಗಂಟೆ 20 ನಿಮಿಷದಲ್ಲಿ ತಲುಪಿದೆ. ಮಧ್ಯಾಹ್ನ 12 ಗಂಟೆಗೆ ಹುಬ್ಬಳ್ಳಿ ನಿಲ್ದಾಣ ತಲುಪಿದ್ದು, 12.40ಕ್ಕೆ ಧಾರವಾಡ ತಲುಪಲಿದೆ.
#WATCH | Bengaluru, Karnataka: The trial run of Vande Bharat Express between Bengaluru to Dharwad railway stations started earlier this morning.
— ANI (@ANI) June 19, 2023
The train left Bengaluru at 5:45 AM today. pic.twitter.com/YO5KdstlJJ
ಇನ್ನು ಇದೇ ಮೊದಲ ಬಾರಿಗೆ ದಾವಣಗೆರೆ, ಹುಬ್ಬಳ್ಳಿ ಜನತೆ ವಂದೇ ಭಾರತ್ ಎಕ್ಸ್‌ಪ್ರೆಸ್ ನೋಡಿ ಖುಷಿ ಪಟ್ಟರು. ಇನ್ನೊಂದು ವಾರದಲ್ಲಿ ಬಹು ನಿರೀಕ್ಷಿತ ವಂದೇ ಭಾರತ್ ಎಕ್ಸ್‌ಪ್ರೆಸ್ ಅಧಿಕೃತ ಸಂಚಾರ ಆರಂಭಿಸಲಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ 16 ಬೋಗಿಗಳನ್ನು ಹೊಂದಿದ್ದರು, ಆರಂಭಿಕ ಹಂತದಲ್ಲಿ 8 ಬೋಗಿಗಳು ಮಾತ್ರ ಇರಲಿವೆ, ಒಟ್ಟು 530 ಪ್ರಯಾಣಿಕರು ಸಂಚರಿಸಬಹದಾಗಿದೆ. ಜನರ ಸ್ಪಂದನೆ ನೋಡಿಕೊಂಡು ಮುಂದಿನ ದಿನಗಳಲ್ಲಿ ಬೋಗಿಗಳನ್ನು ಅಳವಡಿಸುವುದಾಗಿ ನೈಋತ್ಯ ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕೆಲವು ದಿನಗಳಲ್ಲಿ ಟಿಕೆಟ್ ದರ ನಿಗದಿ
ಸದ್ಯ ಪ್ರಯೋಗಾತ್ಮಕ ಓಡಾಟ ಶುರುವಾಗಿದ್ದು, ಅಧಿಕೃತ ವೇಳಾಪಟ್ಟಿ ಮತ್ತು ಟಿಕೆಟ್ ಬೆಲೆಯನ್ನು ನಿರ್ಧರಿಸಿಲ್ಲ. ಪ್ರಯೋಗಾತ್ಮಕ ಓಡಾಟದ ನಂತರ ಎರಡು ಮೂರು ದಿನಗಳಲ್ಲಿ ವೇಳಾಪಟ್ಟಿ ಮತ್ತು ಟಿಕೆಟ್ ಬೆಲೆಯನ್ನು ನಿರ್ಧರಿಸುವುದಾಗಿ ರೈಲ್ವೆ ಇಲಾಖೆ ತಿಳಿಸಿದೆ.
Vande Bharat Express
— South Western Railways Passengers Committee(SWRPC) (@NammaRailways) June 19, 2023
For the first time
At #Davangere Railway Station
Reached in 3 hrs 20 mins from KSR BENGALURU @rohitsre @SmartDavangere @Namma_Dharwad @Hubballi_Infra @HubballiRailway @Hublirailusers @BelagaviRailway @HospetRailUsers @Lolita_TNIE @anilkumarsastry pic.twitter.com/wqYf1T7MiW
ವಂದೇ ಭಾರತ್ ಎಕ್ಸ್‌ಪ್ರೆಸ್ ಗಂಟೆಗೆ 160 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದ್ದರೂ, ಧಾರವಾಡ-ಬೆಂಗಳೂರು ನಡುವೆ ಗಂಟೆಗೆ 110 ಕಿಲೋ ಮೀಟರ್ ವೇಗದಲ್ಲಿ ಮಾತ್ರ ಚಲಿಸಲಿದೆ. ಬೆಂಗಳೂರಿನಿಂದ ಧಾರವಾಡ ತಲುಪಲು 6.55 ಗಂಟೆ ಸಮಯ ಸಾಕು ಎನ್ನಲಾಗಿದೆ. ವಾರದಲ್ಲಿ 6 ದಿನ ಸಂಚಾರ ನಡೆಸಲಿದ್ದು, ಬೆಂಗಳೂರು, ಯಶವಂತಪುರ, ದಾವಣಗೆರೆ, ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಮಾತ್ರ ವಂದೇಭಾರತ್ ಎಕ್ಸ್‌ಪ್ರೆಸ್ ನಿಲುಗಡೆಯಾಗಲಿದೆ.












Click it and Unblock the Notifications