ಬೆಂಗಳೂರಲ್ಲಿ ಅಮೆರಿಕ ರಾಯಭಾರ ಕಛೇರಿ: ಎಲ್ಲಿ ಆರಂಭವಾಗಲಿದೆ
ಬೆಂಗಳೂರು, ಜನವರಿ 13: ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಅಮೆರಿಕ ರಾಯಭಾರಿ ಕಛೇರಿ ಶೀಘ್ರದಲ್ಲೇ ಆರಂಭವಾಗಲಿದೆ. ಕಛೇರಿ ಆರಂಭವಾಗಬೇಕು ಎಂಬುದು ಟೆಕ್ಕಿಗಳು, ವಾಣಿಜ್ಯೋದ್ಯಮಿಗಳು, ವಿದ್ಯಾರ್ಥಿಗಳ ಪ್ರಮುಖ ಬೇಡಿಕೆಯಾಗಿತ್ತು. ರಾಯಭಾರಿ ಕಛೇರಿ ಎಲ್ಲಿ ಆರಂಭವಾಗಲಿದೆ? ಎಂಬ ಬಗ್ಗೆ ಇನ್ನೂ ಮಾಹಿತಿ ಇಲ್ಲ. ಜನವರಿ 17ರಂದು ಈ ಕುರಿತು ಮಾಹಿತಿ ತಿಳಿಯಲಿದೆ.
ಬೆಂಗಳೂರಿನ ಅಮೆರಿಕ ರಾಯಭಾರಿ ಕಛೇರಿಗೆ ಸ್ಥಳ ನಿಗದಿ ಕಾರ್ಯಕ್ರಮ ಜನವರಿ 17ರಂದು ನಿಗದಿಯಾಗಿದೆ. ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ಜೆಡ್ಲ್ಯು ಮ್ಯಾರಿಯೇಟ್‌ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಎಲ್ಲಿ ಕಛೇರಿ ಆರಂಭಿಸಲಾಗುತ್ತದೆ? ಎಂದು ಮಾಹಿತಿ ನೀಡುವ ನಿರೀಕ್ಷೆ ಇದೆ.

ತಾತ್ಕಾಲಿಕ ಕಛೇರಿ: ಬೆಂಗಳೂರಿನಲ್ಲಿ ಅಮೆರಿಕ ರಾಯಭಾರಿ ಕಛೇರಿಯು ತಾತ್ಕಾಲಿಕವಾಗಿ ಅಮೆರಿಕ ವಾಣಿಜ್ಯ ಸೇವೆಗಳ ಕಛೇರಿಯಲ್ಲಿ ಆರಂಭವಾಗುವ ನಿರೀಕ್ಷೆ ಇದೆ. ಇದು ವಿಠ್ಠಲ್ ಮಲ್ಯ ರಸ್ತೆಯಲ್ಲಿದೆ. ಮುಂದಿನ ದಿನಗಳಲ್ಲಿ ಕಛೇರಿಯನ್ನು ಹೊಸ ಕ್ಯಾಂಪಸ್‌ಗೆ ಸ್ಥಳಾಂತರ ಮಾಡಲಾಗುತ್ತದೆ. ಈ ಕಛೇರಿಯಲ್ಲಿ ವೀಸಾ ನೀಡುವ ಪ್ರಕ್ರಿಯೆಯನ್ನು ಕೆಲವೇ ದಿನಗಳಲ್ಲಿ ಆರಂಭಿಸಲಾಗುತ್ತದೆ.
ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ ಈಗಾಗಲೇ 2025ರ ಜನವರಿಯಲ್ಲಿ ಬೆಂಗಳೂರಿನಲ್ಲಿ ಅಮೆರಿಕ ರಾಯಭಾರಿ ಕಛೇರಿ ಆರಂಭವಾಗಲಿದೆ ಎಂದು ಹೇಳಿದ್ದಾರೆ. ದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಛೇರಿ ಸ್ಥಳದ ಬಗ್ಗೆ ಅಂತಿಮ ತೀರ್ಮಾನವನ್ನು ಕೈಗೊಳ್ಳಬೇಕಿದೆ.
ವೈಟ್‌ಫೀಲ್ಡ್‌ನಲ್ಲಿ ರಾಯಭಾರಿ ಕಛೇರಿ ಆರಂಭಿಸಲು ತಯಾರಿ ನಡೆದಿದೆ ಎಂಬ ಮಾಹಿತಿ ಇದೆ. ಬೃಹತ್ ಕೈಗಾರಿಕೆ ಮತ್ತು ಮೂಲ ಸೌಲಭ್ಯ ಖಾತೆ ಸಚಿವ ಎಂ. ಬಿ. ಪಾಟೀಲ್ ಈ ಉದ್ದೇಶಕ್ಕಾಗಿ ಈಗಾಗಲೇ ವೈಟ್‌ಫೀಲ್ಡ್‌ನಲ್ಲಿ ಸ್ಥಳವನ್ನು ನೀಡುವ ಭರವಸೆ ನೀಡಿದ್ದಾರೆ. ಈಗಾಗಲೇ ರೆಸಿಡೆನ್ಸಿ ರಸ್ತೆಯ ಖಾಸಗಿ ಹೋಟೆಲ್‌ನಲ್ಲಿ ಆಸ್ಟ್ರೇಲಿಯಾದ ರಾಯಭಾರ ಕಛೇರಿ ಇದೆ.
ದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಛೇರಿ ವಿಶ್ವದಲ್ಲಿರುವ ಅತಿ ದೊಡ್ಡ ಕಛೇರಿ ಎಂಬ ಹೆಗ್ಗಳಿಕೆ ಪಡೆದಿದೆ. ಇದು ಮುಂಬೈ, ಕೋಲ್ಕತ್ತಾ, ಚೆನ್ನೈ, ಹೈದರಾಬಾದ್ ಜೊತೆ ಸಂಪರ್ಕದಲ್ಲಿದೆ. ಭಾರತದಲ್ಲಿ ಕಾರ್ಯಾಚರಣೆಯನ್ನು ವಿಸ್ತಾರಗೊಳಿಸುವ ಭಾಗವಾಗಿ ಬೆಂಗಳೂರಿನಲ್ಲಿ ಕಛೇರಿ ಆರಂಭವಾಗುತ್ತಿದೆ. ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಹ ಕಛೇರಿ ಆರಂಭಿಸುವ ಯೋಜನೆಇದೆ.
ಬೆಂಗಳೂರಿನಲ್ಲಿ ರಾಯಭಾರಿ ಕಛೇರಿ ಆರಂಭವಾದರೆ ಅಮೆರಿಕ ವೀಸಾ ಪಡೆಯಲು ರಾಜ್ಯದ ಜನರಿಗೆ ಅನುಕೂಲವಾಗಲಿದೆ. ಇದಕ್ಕಾಗಿ ಚೆನ್ನೈ ಅಥವ ಹೈದರಾಬಾದ್‌ಗೆ ಪ್ರಯಾಣ ಮಾಡುವುದು ತಪ್ಪಲಿದೆ. ಇದರಿಂದಾಗಿ ಅಮೆರಿಕಕ್ಕೆ ವ್ಯಾಸಂಗ, ಕೆಲಸಕ್ಕೆ ಹೋಗುವ ಜನರಿಗೆ ಸಹಕಾರಿಯಾಗಲಿದೆ.
2024ರ ಸೆಪ್ಟೆಂಬರ್‌ನಲ್ಲಿ ಬೆಂಗಳೂರಿಗೆ ಭೇಟಿ ನೀಡಿದ್ದ ಎರಿಕ್ ಗಾರ್ಸೆಟ್ಟಿ ನಗರದಲ್ಲಿ ಅಮೆರಿಕ ರಾಯಭಾರ ಕಚೇರಿಯನ್ನು ಆರಂಭಿಸಲು ಆದ್ಯತೆಯ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಭವರಸೆ ನೀಡಿದ್ದರು. ಇದಾದ ಕೆಲವು ದಿನಗಳಲ್ಲೇ ಜನವರಿಯಲ್ಲಿ ಕಛೇರಿ ಆರಂಭಿಸಲಾಗುತ್ತದೆ ಎಂದು ಘೋಷಣೆ ಮಾಡಲಾಗಿತ್ತು.
ಎರಿಕ್ ಗಾರ್ಸೆಟ್ಟಿ ಜೊತೆ ಮಾತುಕತೆ ನಡೆಸಿದ್ದ ಸಚಿವ ಪ್ರಿಯಾಂಕ್ ಖರ್ಗೆ, "ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಕಡೆಯಿಂದ ಅಮೆರಿಕಕ್ಕೆ ಪ್ರಯಾಣ ಬೆಳೆಸುವವರು ಈಗ ಚೆನ್ನೈಗೆ ಹೋಗಬೇಕಿದೆ. ನಗರದಲ್ಲಿ ರಾಯಭಾರ ಕಛೇರಿ ತೆರೆಯುವಂತೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನವಿ ಸಲ್ಲಿಕೆ ಮಾಡಿದ್ದಾರೆ" ಎಂದು ಹೇಳಿದ್ದರು.
ಆಗ ಎರಿಕ್ ಗಾರ್ಸೆಟ್ಟಿ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಪೂರ್ಣಗೊಂಡ ಬಳಿಕ ಬೆಂಗಳೂರಿನಲ್ಲಿ ರಾಯಭಾರ ಕಛೇರಿ ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ್ದರು. ಈಗ ಕಛೇರಿ ಎಲ್ಲಿ ಆರಂಭ? ಎನ್ನುವುದು ಪ್ರಶ್ನೆಯಾಗಿದೆ.












Click it and Unblock the Notifications