ಗೆಳೆಯನ ಒಡನಾಟ ನೆನೆದು ಕಣ್ಣೀರಿಟ್ಟ ಅನಂತ್ ಕುಮಾರ್, ಸದಾನಂದಗೌಡ
ಬೆಂಗಳೂರು, ಮೇ 4: ಬಿ.ಎನ್. ವಿಜಯ್ ಕುಮಾರ್ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ಕೇಂದ್ರ ಸಚಿವರಾದ ಡಿ.ವಿ. ಸದಾನಂದಗೌಡ ಮತ್ತು ಅನಂತ್ ಕುಮಾರ್ ಪರಸ್ಪರ ಅಪ್ಪಿಕೊಂಡು ಕಣ್ಣೀರು ಹಾಕಿದರು.
ವಿಜಯ್ ಕುಮಾರ್ ಅವರ ಮೃತದೇಹ ನೋಡುತ್ತಿದ್ದಂತೆ ಭಾವುಕರಾದ ಸದಾನಂದಗೌಡ ಅವರ ಕಣ್ಣುಗಳಲ್ಲಿ ನೀರು ಜಿನುಗಿತು. 'ನನಗೆ ಏನು ಹೇಳಬೇಕು ಎಂದು ಗೊತ್ತಾಗುತ್ತಿಲ್ಲ. ಬಿಜೆಪಿ ದೊಡ್ಡ ಸ್ವತ್ತನ್ನು ಕಳೆದುಕೊಂಡಿದೆ. ಬೆಂಗಳೂರಿಗೆ ಇದು ದೊಡ್ಡ ಅಘಾತವಾಗಿದೆ. ನಿಷ್ಠಾವಂತ ಕಾರ್ಯಕರ್ತ ಈಗ ನೆನಪು ಮಾತ್ರ ಎಂದು ಸದಾನಂದಗೌಡ ದುಃಖದಿಂದ ಹೇಳಿದರು.
25 ವರ್ಷದಿಂದ ಅವರ ಒಡನಾಟವಿತ್ತು. ನಾನು ರಾಜ್ಯಾಧ್ಯಕ್ಷನಾಗಿದ್ದಾಗ ಅವರು ಬೆಂಗಳೂರು ಘಟಕದ ಅಧ್ಯಕ್ಷರಾಗಿದ್ದರು. ಶಾಸಕರಾಗಿದ್ದರೂ ಸಾಮಾನ್ಯ ಕಾರ್ಯಕರ್ತರಾಗಿದ್ದರು. ಇನ್ನೂ 15 ವರ್ಷ ಅವರ ಸೇವೆ ನಿರೀಕ್ಷೆ ಮಾಡಿದ್ದೆವು. ಅವರು ಈ ಬಾರಿ ಚುನಾವಣೆಯಲ್ಲಿ ಖಂಡಿತವಾಗಿಯೂ ಗೆಲ್ಲುತ್ತಿದ್ದರು. ಪಕ್ಷದ ಕಾರ್ಯ ಇದ್ದಾಗ ಅವರು ಹಗಲಿರುಳು ಶ್ರಮಿಸುತ್ತಿದ್ದರು. ಮೇಲಿಂದಲೇ ಅವರು ನಮಗೆ ಆಶೀರ್ವಾದ ಮಾಡಲಿ ಎಂದು ಅವರು ಕಣ್ಣೀರಿಟ್ಟರು.

ಅನಂತ್ ಕುಮಾರ್ ದುಃಖ
ಜಯನಗರದಲ್ಲಿ ಮೊದಲ ಸಲ ಒತ್ತಾಯದಿಂದ ಚುನಾವಣೆಗೆ ನಿಲ್ಲಿಸಿದ್ದೆವು. ಈ ಬಾರಿಯೂ ತಮಗೆ ಟಿಕೆಟ್ ಬೇಡ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಮತ್ತೆ ಒತ್ತಾಯ ಮಾಡಿ ಅವರನ್ನು ಅಭ್ಯರ್ಥಿ ಮಾಡಿದ್ದೆವು ಎಂದು ಅನಂತಕುಮಾರ್ ಹೇಳಿದರು.
ಚಿತ್ರಗಳಲ್ಲಿ: ಸಜ್ಜನ ರಾಜಕಾರಣಿ ವಿಜಯಕುಮಾರ್ ಗೆ ಅಂತಿಮ ನಮನ
ನನಗೆ ಏನು ಹೇಳಬೇಕು ಅನ್ನೋದು ತೋಚುತ್ತಿಲ್ಲ. 40 ವರ್ಷದಿಂದ ಅವರ ಒಡನಾಟವಿತ್ತು. ಕುಟುಂಬದ ಸದಸ್ಯರ ರೀತಿ ನಾವೆಲ್ಲಾ ಇದ್ದೆವು. ಅವರು ನನ್ನ ಆತ್ಮೀಯ ಗೆಳೆಯ. ನನಗೆ ಆಘಾತವಾಗಿದೆ. ಬಾಲ್ಯದಿಂದಲೂ ಆರ್‌ಎಸ್‌ಎಸ್‌ನಲ್ಲಿ ಗುರುತಿಸಿಕೊಂಡಿದ್ದರು. ಮದುವೆ ಮಾಡಿಕೊಳ್ಳದೇ ದೇಶ ಸೇವೆಗೆ ತೊಡಗಿಸಿಕೊಂಡಿದ್ದರು. ಎರಡು ಬಾರಿ ಶಾಸಕರಾಗಿ ಅತ್ಯುತ್ತಮ ಕೆಲಸ ಮಾಡಿದ್ದಾರೆ ಎಂದು ದುಃಖತಪ್ತರಾದ ಅನಂತಕುಮಾರ್ ನುಡಿದರು.

ಬಿಜೆಪಿ ಕಟ್ಟಲು ಸಹಕಾರಿಯಾಗಿದ್ದವರು
ವಿಜಯ್ ಕುಮಾರ್ ಅವರ ಅಗಲಿಕೆ ತುಂಬಾ ನೋವು ತಂದಿದೆ. ಕಳೆದ 35 ವರ್ಷದಿಂದ ಅವರೊಂದಿಗೆ ಬಾಂಧವ್ಯವಿತ್ತು. ಬೆಂಗಳೂರಿನಲ್ಲಿ ಬಿಜೆಪಿ ಕಟ್ಟಲು ಸಹಕಾರಿಯಾಗಿದ್ದವರು. ನಗರದಲ್ಲಿ ಬಿಜೆಪಿ ಇಷ್ಟು ಪ್ರಮಾಣದಲ್ಲಿ ಬೆಳೆಯಲು ಅವರೇ ಕಾರಣ ಎಂದು ಹೇಳುವಾಗ ಭಾವುಕರಾದ ಆರ್. ಅಶೋಕ್, ಅರ್ಧಕ್ಕೆ ಮಾತು ಮೊಟಕುಗೊಳಿಸಿ ಕಣ್ಣೀರಿಟ್ಟರು.












Click it and Unblock the Notifications