Namma Metro: ಮೆಟ್ರೋ ದರ ಏರಿಕೆ ಬಗ್ಗೆ ಶಾಕಿಂಗ್ ವಿಚಾರ ತಿಳಿಸಿದ ಕೇಂದ್ರ ಸಚಿವ
ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಗೆ ಬೆಂಗಳೂರಿಗರಿಂದ ಭಾರಿ ವಿರೋಧ ವ್ಯಕ್ತವಾಯಿತು. ಈ ಆಕ್ರೋಶಕ್ಕೆ ಮಣಿದ ಬಿಎಂಆರ್‌ಸಿಎಲ್ ತುಸು ದರ ಇಳಿಕೆ ಮಾಡಿರುವುದಾಗಿ ತಿಳಿಸಿದೆ. ಆದರೆ, ಮೆಟ್ರೋ ದರ ಏರಿಕೆ ವಿಚಾರವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಒಬ್ಬರನ್ನೊಬ್ಬರು ದೂಷಿಸುತ್ತಿದೆ. ದರ ಏರಿಸಿದ್ದು ಕೇಂದ್ರ ಬಿಜೆಪಿ ಸರ್ಕಾರ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಈಗ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಶಾಕಿಂಗ್ ವಿಚಾರ ಬಿಚ್ಚಿಟ್ಟಿದ್ದಾರೆ.
ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆಗೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ಹೊಣೆ ಎಂದು ಅಶ್ವಿನಿ ವೈಷ್ಣವ್ ದೂರಿದ್ದಾರೆ. ಮೆಟ್ರೋಗೆ ಸಂಬಂಧಿಸಿದ ಎಲ್ಲ ಜವಾಬ್ದಾರಿಗಳು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತೆ. ಅಲ್ಲದೆ ಮೆಟ್ರೋ ದರ ಏರಿಕೆ ಸಮಿತಿಯೂ ದೆಹಲಿಯಲ್ಲಿ ಇಲ್ಲ. ಅದು ಇರುವುದು ಕೂಡ ಕರ್ನಾಟಕದಲ್ಲೇ. ಹೀಗಿರುವಾಗ ದರ ಏರಿಕೆ ಮಾಡಿದ್ದು ಬಿಜೆಪಿಯವರು ಎನ್ನುವುದು ತಪ್ಪು ಎಂದು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ, ಚೆನ್ನೈ, ದೆಹಲಿ, ಹೈದರಾಬಾದ್, ಮುಂಬೈ ನಗರಗಳಲ್ಲೂ ಇದೇ ನಿಯಮವಿದೆ. ಮೆಟ್ರೋ ಯೋಜನೆಗಳೆಲ್ಲವೂ ಆಯಾ ರಾಜ್ಯ ಸರ್ಕಾರಗಳ ಅಧೀನಕ್ಕೆ ಬರುತ್ತವೆ. ರಾಜ್ಯ ಸರ್ಕಾರಗಳಿಗೆ ಮಾತ್ರವೇ ಅಲ್ಲಿನ ಗ್ರೌಂಡ್ ರಿಯಾಲಿಟಿ ಏನು ಎನ್ನುವುದು ತಿಳಿದಿರುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮೆಟ್ರೋಗೆ ಸಂಬಂಧಿಸಿದಂತೆ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ಥಾನದಲ್ಲಿ ರಾಜ್ಯ ಸರ್ಕಾರಗಳಿವೆ. ಹಾಗಾಗಿ ದರ ಏರಿಕೆಯ ಪ್ರಸ್ತಾವನೆಯನ್ನು ನೀಡಿರುವುದೇ ರಾಜ್ಯ ಸರ್ಕಾರ. ಈಗ ಬೆಂಗಳೂರಿನಲ್ಲಿ ಮೆಟ್ರೋ ಸಂಬಂಧ ಎಲ್ಲ ಬೆಳವಣಿಗೆಗೂ ರಾಜ್ಯ ಸರ್ಕಾರವೇ ನೇರ ಕಾರಣ. ಕೇಂದ್ರ ಸರ್ಕಾರವು ದರ ಏರಿಕೆಗೆ ಯಾವುದೇ ಸೂಚನೆ ನೀಡಿಲ್ಲ. ಸುಮ್ಮನೆ ನಮ್ಮ ಮೇಲೆ ತಪ್ಪು ಆರೋಪ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಸಿದ್ದರಾಮಯ್ಯ ಹೇಳಿದ್ದೇನು?: ದೆಹಲಿ ಮೆಟ್ರೋವನ್ನು ಹೊರತುಪಡಿಸಿ ಉಳಿದೆಲ್ಲ ರಾಜ್ಯಗಳಲ್ಲಿ ಮೊದಲ ಹಂತದ ಪ್ರಯಾಣದರವನ್ನು ಆಯಾ ರಾಜ್ಯಗಳ ಮೆಟ್ರೊ ನಿಗಮಗಳೇ ನಿಗದಿ ಪಡಿಸಿತ್ತು. ಈಗ ಪ್ರಯಾಣ ದರವನ್ನು ಕೇಂದ್ರ ಬಿಜೆಪಿ ಸರ್ಕಾರ ನೇಮಿಸುವ ಸಮಿತಿ ನಿಗದಿಪಡಿಸುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದರು.
ಕೇಂದ್ರ ಮತ್ತು ಕರ್ನಾಟಕ ಸರ್ಕಾರ ಜೊತೆಗೂಡಿ ಬೆಂಗಳೂರು ಮೆಟ್ರೊ ರೈಲು ನಿಗಮವನ್ನು ಸ್ಥಾಪಿಸಿದ್ದು, ಇದರಲ್ಲಿ ಎರಡೂ ಸರ್ಕಾರಗಳ ಸಮ ಪಾಲುದಾರಿಕೆಯಿದೆ. ಇದೊಂದು ಸ್ವಾಯತ್ತ ಸಂಸ್ಥೆಯಾಗಿದ್ದು, ಇದರ ಮೇಲೆ ರಾಜ್ಯ ಸರ್ಕಾರಕ್ಕೆ ಪೂರ್ಣ ನಿಯಂತ್ರಣಾಧಿಕಾರ ಇಲ್ಲ ಎಂದಿದ್ದರು. ಉಳಿದ ನಗರಗಳ ಮೆಟ್ರೋ ರೈಲು ನಿಗಮಗಳಂತೆ ಬೆಂಗಳೂರು ಮೆಟ್ರೊ ರೈಲು ನಿಗಮ ಕೂಡಾ ಕೇಂದ್ರ ಸರ್ಕಾರದ ಮೆಟ್ರೋ ರೈಲು ಕಾಯ್ದೆ 2002ರಡಿ ಕಾರ್ಯನಿರ್ವಹಿಸುತ್ತೆ ಎಂದು ಹೇಳಿದ್ದರು.

2017ರ ನಂತರ ಮೆಟ್ರೊ ರೈಲಿನ ಪ್ರಯಾಣ ದರ ಪರಿಷ್ಕರಣೆ ಮಾಡದೆ ಇರುವ ಕಾರಣ ದರ ಪರಿಷ್ಕರಣೆ ನಡೆಸುವಂತೆ ಬಿಎಂಆರ್‌ಸಿಎಲ್ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿತ್ತು. ಪ್ರಯಾಣ ದರ ಹೆಚ್ಚಳದ ಅಧಿಕಾರ ರಾಜ್ಯ ಸರ್ಕಾರದ ಕೈಯಲ್ಲೇ ಇದ್ದಿದ್ದರೆ ಬಿಎಂಆರ್‌ಸಿಎಲ್ ನಮಗೆ ಪತ್ರ ಬರೆಯದೆ, ಕೇಂದ್ರ ಸರ್ಕಾರಕ್ಕೆ ಯಾಕೆ ಪತ್ರ ಬರೆಯುತ್ತಿತ್ತು? ಎಂದು ಪ್ರಶ್ನಿಸಿದ್ದರು. ಇದೀಗ ಮೆಟ್ರೋ ದರ ಏರಿಕೆ ಸಂಬಂಧ ಕೇಂದ್ರ ಬಿಜೆಪಿ ಸಚಿವ ಅಶ್ವಿನಿ ವೈಷ್ಣವ್ ಅವರು ರಾಜ್ಯ ಸರ್ಕಾರವನ್ನ ದೂರಿದ್ದಾರೆ.












Click it and Unblock the Notifications