UKP-3 ಯೋಜನೆಗೆ ವೇಗ: ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಳಕ್ಕೆ ಭೂಸ್ವಾಧೀನ! ಯುವ ಕೃಷಿಕರಿಗೆ ತರಬೇತಿ: ಎಂಬಿ ಪಾಟೀಲ
ಬೆಂಗಳೂರು: ಮಹತ್ವಾಕಾಂಕ್ಷೆಯ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ಕ್ಕೆ ಮತ್ತಷ್ಟು ವೇಗ ನೀಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಭೂಸ್ವಾಧೀನ ಪ್ರಕ್ರಿಯೆ ಇನ್ನೇನು ಕೆಲವೇ ದಿನಗಳಲ್ಲಿ ಶುರುವಾಗಲಿದೆ. ಇನ್ನೊಂದೆಡೆ ಕೃಷಿಯಲ್ಲಿ ಭವಿಷ್ಯ ಕಟ್ಟಿಕೊಳ್ಳಲು ಯುವ ರೈತರಿಗೆ ಸುವರ್ಣಾವಕಾಶ ನೀಡಲಾಗುತ್ತಿದೆ. ಈ ಮೂಲಕ ಯುವ ಕೃಷಿಕರ ಕನಸಿಗೆ ರೆಕ್ಕೆ ನೀಡಲು ಸರ್ಕಾರ ಸಿದ್ಧವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂಬಿ ಪಾಟೀಲರು ತಿಳಿಸಿದ್ದಾರೆ.
ಮೊದಲಿಗೆ, ಕೃಷ್ಣಾ ಮೇಲ್ದಂಡೆ ಯೋಜನೆ (UKP)ಗೆ ಸಂಬಂಧಿಸಿದಂತೆ ಆಲಮಟ್ಟಿ ಜಲಾಶಯ ಎತ್ತರ ಹೆಚ್ಚಳ-184 ಗ್ರಾಮಗಳ ಜಮೀನು ಭೂಸ್ವಾಧೀನ ಪಡಿಸುವ ಕುರಿತು ಇಂದು ಸೋಮವಾರ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಯಿತು. ಈ ವೇಳೆ ಎಂಬಿ ಪಾಟೀಲರೊಂದಿಗೆ ಭೂಸ್ವಾಧೀನ ಹಾಗೂ ಸಂಬಂಧಿತ ಪ್ರಕ್ರಿಯೆಗಳ ಪ್ರಗತಿ ಕುರಿತು ಚರ್ಚೆಗಳು ನಡೆಸಿದರು. ಸಚಿವರಾದ ಲಕ್ಷ್ಮಣ ಸವದಿ, ವಿಜಯಾನಂದ ಕಾಶಪ್ಪನವರ್ ಇದ್ದರು.

ಕೃಷ್ಣಾ ಮೇಲ್ದಂಡೆ ಯೋಜನೆ (UKP) ಹಂತ-3ರ ಅಡಿಯಲ್ಲಿ ಆಲಮಟ್ಟಿ ಜಲಾಶಯದ ಪೂರ್ಣ ಜಲಾಶಯ ಮಟ್ಟ (FRL) ಅನ್ನು 519.60 ಮೀಟರ್ನಿಂದ 524.256 ಮೀಟರ್ಗೆ ಹೆಚ್ಚಿಸುವ ಹಿನ್ನೆಲೆಯಲ್ಲಿ, ಹಿನ್ನೀರಿನಲ್ಲಿ ಮುಳುಗಡೆಯಾಗಲಿರುವ 184 ಗ್ರಾಮಗಳ ಭೂಸ್ವಾಧೀನ ಪ್ರಕ್ರಿಯೆ ಪ್ರಮುಖ ಹಂತದಲ್ಲಿದೆ ಎಂಬುದನ್ನು ಸಚಿವರು ಸಭೆಯಲ್ಲಿ ಗಮನಕ್ಕೆ ತಂದರು.
UKP-3ರ ಅನುಷ್ಠಾನಕ್ಕೆ ವೇಗ ನೀಡುವುದರ ಜೊತೆಗೆ, ಭೂಮಿ ಕಳೆದುಕೊಳ್ಳುವ ರೈತರ ಹಿತಾಸಕ್ತಿಗಳನ್ನು ರಕ್ಷಿಸಿ, ನ್ಯಾಯಯುತ ಪರಿಹಾರ ಮತ್ತು ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಯುವ ಕೃಷಿಕರಿಗೆ ತರಬೇತಿ
ಯುವ ಕೃಷಿಕರ ಕನಸಿಗೆ ನೀರೆರೆಯಲು ಸರ್ಕಾರ ಸಿದ್ಧವಾಗಿದೆ ಎಂದ ಎಂಬಿ ಪಾಟೀಲರು ಎಕ್ಸ್ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಅಕ್ಷಯಕಲ್ಪ ಆರ್ಗ್ಯಾನಿಕ್ ಸಂಸ್ಥೆ ಅವರಿಂದ ಗ್ರಾಮೀಣ ಯುವಕರಿಗೆ ಕೃಷಿಯನ್ನು ವೃತ್ತಿಯಾಗಿ ರೂಪಿಸಿಕೊಳ್ಳಲು 'ರೇನ್ ಮ್ಯಾಟರ್ ಫೆಲೋಶಿಪ್ ತರಬೇತಿ'ಯ ಅವಕಾಶ ನೀಡಿದೆ.
SSLC ಪಾಸ್ ಅಥವಾ ಫೇಲ್ ಆದ ಯುವಕರು ಈ ಅವಕಾಶವನ್ನು ಬಳಸಿಕೊಳ್ಳಬಹುದು. 3 ತಿಂಗಳ ಉದ್ಯೋಗಾಧಾರಿತ ತರಬೇತಿ, ತಿಂಗಳಿಗೆ ₹10,000 ಸ್ಟೈಪೆಂಡ್ ಜೊತೆಗೆ ಉಚಿತ ಊಟ ಮತ್ತು ವಸತಿ ಸೌಲಭ್ಯವಿದೆ ಎಂದು ಮಾಹಿತಿ ಕೊಟ್ಟರು.
ತರಬೇತಿ ವೈಶಿಷ್ಟ್ಯಗಳು
* ಸಾವಯವ ಕೃಷಿ, ಡೈರಿ ಹಾಗೂ ಕೋಳಿ ಸಾಕಾಣಿಕೆ ತರಬೇತಿ
* 3 ತಿಂಗಳ ಪ್ರಾಯೋಗಿಕ ತರಬೇತಿ
* ತಿಂಗಳಿಗೆ 10,000 ರೂ. ಸ್ಟೈಪೆಂಡ್
* ಉಚಿತ ಊಟ ಮತ್ತು ವಸತಿ
* ಅರ್ಹತೆ: SSLC ಪಾಸ್ / ಫೇಲ್- ಕೃಷಿಯಲ್ಲಿ ಆಸಕ್ತಿ ಇರಬೇಕು
* ತರಬೇತಿ ಸ್ಥಳ: ದೇವರಕಾಡು ಕೃಷಿ ಘಟಕ, ಮೇಲಪುರದ ಬಳಿ-ತಿಪಟೂರು
* ಒಟ್ಟು 40 ಪ್ರವೇಶಾವಕಾಶಗಳು ಮಾತ್ರ!
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 7411522728 | 9113203476 ಗೆ ಸಂಪರ್ಕಿಸಬೇಕು. ಕೃಷಿ ಕೇವಲ ಬದುಕಿನ ದಾರಿ ಅಲ್ಲ; ಯುವಕರ ಕೈಯಲ್ಲಿ ಅದು ಭವಿಷ್ಯ ಕಟ್ಟುವ ಶಕ್ತಿಯುತ ಉದ್ಯಮ ಎಂದು ಸಚಿವರ ಪಾಟೀಲರು ತಿಳಿಸಿದ್ದಾರೆ.


Click it and Unblock the Notifications
