Shuttle Bus: ಕೆಲವೇ ದಿನಗಳಲ್ಲಿ ಬೆಂಗಳೂರಿನ ರಸ್ತೆ ಉಬರ್ ಶಟಲ್ ಬಸ್
ಬೆಂಗಳೂರು, ನವೆಂಬರ್ 21: ಉದ್ಯಾನ ನಗರಿ ಬೆಂಗಳೂರಿನಲ್ಲಿ ಐಟಿ ಉದ್ಯೋಗಿಗಳನ್ನು ಗಮನದಲ್ಲಿಟ್ಟುಕೊಂಡು ಉಬರ್ ಹೊಸ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಉಬರ್ ಶಟಲ್ ಬಸ್ ಸೇವೆಯನ್ನು ನಗರದಲ್ಲಿ ಪರಿಚಯಿಸಲಾಗುತ್ತದೆ ಎಂದು ಈಗಾಗಲೇ ಘೋಷಣೆ ಮಾಡಲಾಗಿದೆ. ಸರ್ಕಾರದ ಜೊತೆ ಮಾತುಕತೆ ನಡೆಯುತ್ತಿದ್ದು, ನವದೆಹಲಿ, ಕೋಲ್ಕತ್ತಾ ನಗರದ ಬಳಿಕ ಬೆಂಗಳೂರು ನಗರದಲ್ಲಿ ಈ ಮಾದರಿ ಬಸ್ ಸೇವೆ ಜಾರಿಗೆ ಬರುತ್ತಿದೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಟೆಕ್ ಸಮ್ಮಿಟ್‌ನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿ-ಬಿಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಉಬರ್ ಇಂಡಿಯಾ ಸ್ಟಾಲ್‌ಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿಯೂ ಬೆಂಗಳೂರು ನಗರದಲ್ಲಿ ಸೇವೆ ಆರಂಭಿಸುವ ಕುರಿತು ಚರ್ಚೆ ನಡೆದಿದೆ.

ಉಬರ್ ಸ್ಟಾಲ್‌ನಲ್ಲಿ ಮೊಬೈಲ್ ಅಪ್ಲಿಕೇಶನ್ ಮೂಲಕ ಸೀಟು ಬುಕ್ ಮಾಡಿ ಸಂಚಾರ ನಡೆಸುವ 'ಉಬರ್ ಶಟಲ್' ಬಸ್ ಸೇವೆಯ ಕುರಿತು ಸಚಿವರಿಗೆ ವಿವರಣೆ ನೀಡಲಾಯಿತು. ನಗರದ ಸಂಚಾರ ದಟ್ಟಣೆಯಲ್ಲಿ ಸಿಲುಕದೇ ಐಟಿ ಉದ್ಯೋಗಿಗಳು ಸಂಚಾರ ನಡೆಸಲು ಈ ಸೇವೆ ಹೇಗೆ? ಸಹಾಯಕವಾಗಲಿದೆ? ಎಂದು ವಿವರಣೆ ನೀಡಲಾಯಿತು.
ಸಚಿವರಿಗೆ ಪ್ರಾತ್ಯಕ್ಷಿಕೆ: ಉಬರ್‌ನ ಅಧಿಕಾರಿಗಳು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಉಬರ್ ಶಟಲ್ ಬಸ್ ಹೇಗೆ ಕೆಲಸ ಮಾಡುತ್ತದೆ?. ಅಪ್ಲಿಕೇಶನ್ ಹೇಗೆ ಕೆಲಸ ಮಾಡುತ್ತದೆ?, ರಸ್ತೆಯಲ್ಲಿ ವಾಹನಗಳ ಸಂಖ್ಯೆ ಹೇಗೆ ಈ ಸೇವೆಯಿಂದ ಕಡಿಮೆಯಾಗುತ್ತದೆ? ಎಂದು ವಿವರಣೆ ನೀಡಿದರು.
ಮೊದಲೇ ಸೀಟು ಬುಕ್ ಮಾಡುವುದು, ಐಷಾರಾಮಿ ಬಸ್‌ಗಳು, ಡಿಜಿಟಲ್ ಪೇಮೆಂಟ್ ಮಾದರಿ ಬಗ್ಗೆ ಸಚಿವರಿಗೆ ವಿವರಿಸಲಾಯಿತು. ಅಲ್ಲದೇ ಸಚಿವರು ಐಷಾರಾಮಿ ಎಸಿ ಬಸ್‌ಗಳನ್ನು ಸಹ ಪರಿಶೀಲನೆ ನಡೆಸಿದರು. ಬೆಂಗಳೂರು ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ತಂತ್ರಜ್ಞಾನದ ಮೂಲಕವೂ ಸಹಾಯ ಮಾಡಬೇಕಾಗಿದೆ ಎಂದು ಸಚಿವರು ಹೇಳಿದರು.
ಈಗಾಗಲೇ ದೆಹಲಿ, ಕೋಲ್ಕತ್ತಾದಲ್ಲಿ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡು ಉಬರ್ ಶಟಲ್ ಬಸ್ ಸೇವೆಯನ್ನು ಆರಂಭಿಸಲಾಗಿದೆ. ಈ ಸೇವೆಗೆ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗುತ್ತಿದ್ದು, ಬೆಂಗಳೂರಿನಲ್ಲಿಯೂ ಸೇವೆ ಆರಂಭಿಸಲು ಉಬರ್ ತಯಾರಿಯನ್ನು ನಡೆಸುತ್ತಿದೆ.
ಏನಿದು ಉಬರ್ ಶಟಲ್?; ಆರಾಮದಾಯಕ ಮತ್ತು ಅನುಕೂಲಕರ ಪ್ರಯಾಣಕ್ಕಾಗಿ ಉದ್ಯೋಗಿಗಳು ಉಬರ್ ಶಟಲ್ ಸೇವೆ ಪಡೆಯಬಹುದು. ಐಟಿ ಉದ್ಯೋಗಿಗಳನ್ನು ಗಮನದಲ್ಲಿಟ್ಟುಕೊಂಡು ದೇಶದಲ್ಲಿ ಈ ಮಾದರಿ ಸೇವೆಯನ್ನು ಆರಂಭಿಸಲಾಗಿದೆ. ಈ ಮಾದರಿ ಸೇವೆಯಲ್ಲಿ ಹವಾನಿಯಂತ್ರಿತ ಬಸ್‌ಗಳನ್ನು ಬಳಕೆ ಮಾಡಲಾಗುತ್ತದೆ. ಶಟಲ್ ಸೇವೆಯಲ್ಲಿ ಸೀಟು ಕಾಯ್ದಿರಿಸಲು ಮೊಬೈಲ್ ಅಪ್ಲಿಕೇಶನ್‌ನಲ್ಲಿ ಅವಕಾಶವಿದೆ.
ಅಲ್ಲದೇ ಮೊಬೈಲ್ ಅಪ್ಲಿಕೇಶನ್ ಮೂಲಕ ಜನರ ಪ್ರಯಾಣಕ್ಕಾದಿ ಸಮಯವನ್ನು ಬುಕ್ ಮಾಡಬಹುದು. ಯಾವ ವಾರ ಸಂಚಾರ ನಡೆಸುತ್ತೀರಿ ಎಂದು ಟಿಕೆಟ್ ಕಾಯ್ದಿರಿಸಲು ಅವಕಾಶವಿದೆ. ಅಲ್ಲದೆ, ನೀವು ಇತರ ಉಬರ್ ಪ್ರಯಾಣಿಕರೊಂದಿಗೆ ನಿಮ್ಮ ಟ್ರಿಪ್ ಹಂಚಿಕೊಳ್ಳಬಹುದು. ಈ ಸೇವೆ ಜನರ ಕೈಗೆಟುಕುವಷ್ಟು ಬೆಲೆಯಲ್ಲಿಯೂ ಲಭ್ಯವಿದೆ.
ಬೆಂಗಳೂರು ನಗರದಲ್ಲಿ ಕೆಆರ್ ಪುರ-ಸಿಲ್ಕ್ ಬೋರ್ಡ್ ನಡುವೆ 18 ಕಿ. ಮೀ. ಮಾರ್ಗದಲ್ಲಿ ಉಬರ್ ಶಟಲ್ ಬಸ್ ಸೇವೆಯನ್ನು ಆರಂಭಿಸಲು ಕಂಪನಿ ಮುಂದಾಗಿದೆ. ಈ ಮಾರ್ಗದಲ್ಲಿ ಸುಮಾರು 30 ಟೆಕ್ ಪಾರ್ಕ್‌ಗಳಿದ್ದು, 15 ಲಕ್ಷಕ್ಕೂ ಅಧಿಕ ಐಟಿ ಉದ್ಯೋಗಿಗಳಿದ್ದಾರೆ.
ಉಬರ್ ಶಟಲ್ ಬಸ್ ಸೇವೆ ಈಗಾಗಲೇ ದೆಹಲಿ, ಕೋಲ್ಕತ್ತಾ, ಹೈದರಾಬಾದ್, ಮುಂಬೈನಲ್ಲಿದೆ. ಬೆಂಗಳೂರು ನಗರ ನಮ್ಮ ಮುಂದಿನ ಗುರಿ ಎಂದು ಈಗಾಗಲೇ ಉಬರ್ ಇಂಡಿಯಾ ಘೋಷಣೆ ಮಾಡಿದೆ.
ರಾಜ್ಯ ಸರ್ಕಾರದ ಜೊತೆ ಉಬರ್ ಶಟಲ್ ಬಸ್ ಸೇವೆ ಬಳಕೆಗೆ ಅನುಮತಿ ಸಿಕ್ಕರೆ ಹೊರ ವರ್ತುಲ ರಸ್ತೆಯಲ್ಲಿ 200 ಎಸಿ ಬಸ್‌ಗಳನ್ನು ಉಬರ್ ಶಟಲ್ ಸೇವೆಯ ಅಡಿಯಲ್ಲಿ ಓಡಿಸಲಾಗುತ್ತದೆ. ಪ್ರತಿ ಮೂರು ನಿಮಿಷಕ್ಕೊಂದು ಬಸ್ ಓಡಿಸಲು ನಾವು ತಯಾರಾಗಿದ್ದೇವೆ ಎಂದು ಉಬರ್ ಇಂಡಿಯಾ ಹೇಳಿದೆ.












Click it and Unblock the Notifications