ಬೆಂಗಳೂರಿನ ಐಟಿ ಬಿಟಿ ಕಂಪನಿ ಉದ್ಯೋಗಿಗಳಿಗೆ ಗುಡ್ ನ್ಯೂಸ್ ಕೊಡಲು ಉಬರ್ ಸಜ್ಜು
Uber Bus: ಬೆಂಗಳೂರಿನಲ್ಲಿ ಉಬರ್ ಪ್ರಯಾಣಿಕರ ಆದ್ಯತೆಯ ಮೇರೆಗೆ ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸುತ್ತಲೇ ಇದೆ. ಈ ಮೊದಲು ನಗರದಲ್ಲಿ ಬರೀ ಆಟೋ, ಬೈಕ್ ಸೇವೆಗಳನ್ನು ಮಾತ್ರ ನೀಡುತ್ತಿತ್ತು. ಆದರೆ ಇದೀಗ ನವದೆಹಲಿ, ಕೊಲ್ಕತ್ತ, ಹೈದರಾಬಾದ್‌ನಂತೆ ಬೆಂಗಳೂರಿನಲ್ಲಿ ಹೊಸದಾಗಿ ಉಬಸ್ ಬಸ್ ಪರಿಚಯಿಸಲು ಮುಂದಾಗಿದೆ. ಹಾಗಾದರೆ ಇದರಿಂದ ಪ್ರಯಾಣಿಕರಿಗೆ ಏನೆಲ್ಲ ಅನುಕೂಲವಾಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಈಗಾಗಲೇ ಉಬರ್ ಶಟಲ್ ಬಸ್ ಸೇವೆಯನ್ನು ನವದೆಹಲಿ, ಕೊಲ್ಕತ್ತಾ, ಹೈದರಾಬಾದ್ ಹಾಗೂ ಮುಂಬೈನಂತಹ ಮಹಾನಗರಗಳಲ್ಲಿ ಸೇವೆಯನ್ನು ಒದಗಿಸುತ್ತಿದೆ. ಇದೀಗ ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲೂ ಈ ಸೇವೆಯನ್ನು ಪರಿಚಯಿಸಲು ಉಬರ್ ಮುಂದಾಗಿದ್ದು, ಸರ್ಕಾರದ ಒಪ್ಪಿಗೆಗಾಗಿ ಕಾಯುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಬೆಂಗಳೂರು ಅಂದರೆ ಮೊದಲು ಇಲ್ಲಿ ಜನರ ಬಾಯಲ್ಲಿ ಕೇಳಿಬರುವುದೇ ಟ್ರಾಫಿಕ್. ಈ ಹಿನ್ನೆಲೆ ಟ್ರಾಫಿಕ್ ಜಂಜಾಟದಿಂದ ಬೇಸತ್ತ ಟೆಕ್ಕಿಗಳಿಗೆ ಅನುಕೂಲತೆಯನ್ನು ಕಲ್ಪಿಸಿಕೊಡುವ ಹಿನ್ನೆಲೆ ಆರಂಭಿಕ ಹಂತದಲ್ಲಿ ಔಟರ್ ರಿಂಗ್ ರಸ್ತೆ ಟೆಕ್ ಕಾರಿಡಾರ್‌ನಲ್ಲಿ 200 ಹವಾನಿಯಂತ್ರಿತ ಬಸ್‌ಗಳನ್ನು ಓಡಿಸಲು ಉಬರ್ ಪ್ಯಾನ್ ಮಾಡಿಕೊಂಡಿದೆ. ಆದರೆ, ಇದಕ್ಕೆ ಸರ್ಕಾರದ ಒಪ್ಪಿಗೆ ಬೇಕಾಗಿದ್ದು, ಇದಕ್ಕಾಗಿ ಕಾಯುತ್ತಿದೆ.
ಪ್ರಸ್ತಾವಿತ ಸೇವೆಯು 2-3 ನಿಮಿಷಗಳ ಮಧ್ಯಂತರದಲ್ಲಿ ಚಲಿಸುತ್ತದೆ, ಪ್ರಯಾಣಿಕರಿಗೆ ಆಸನಗಳನ್ನು ಮುಂಗಡ ಕಾಯ್ದಿರಿಸುವ, ಗೊತ್ತುಪಡಿಸಿದ ಸ್ಥಳಗಳಿಂದ ಪಿಕಪ್ ಮತ್ತು ಗಮ್ಯಸ್ಥಾನಗಳಿಗೆ ತಲುಪಿಸುವ ಕೆಲಸವನ್ನು ಈ ಬಸ್ ಮಾಡಲಿದೆ ಎಂದು ಉಬರ್ ತಿಳಿಸಿದೆ. ಇನ್ನು ಉಬರ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಪ್ರಾದೇಶಿಕ ವ್ಯಾಪಾರ ಕಾರ್ಯಾಚರಣೆಗಳ ಮುಖ್ಯಸ್ಥ ಅಭಿಷೇಕ್ ಪಾಧ್ಯೆ ಈ ಬಗ್ಗೆ ಮಾಹಿತಿ ಮಾತನಾಡಿದ್ದಾರೆ.
ಕೋಲ್ಕತ್ತಾ ಮತ್ತು ನವದೆಹಲಿಯಲ್ಲಿ ಶಟಲ್ ಬಸ್ ಸೇವೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಶೀಘ್ರದಲ್ಲೇ ಬೆಂಗಳೂರಿನಲ್ಲೂ ಈ ಸೇವೆ ಪ್ರಾರಂಭ ಆಗಲಿದೆ. ಸರ್ಕಾರದಿಂದ ಅನುಮೋದನೆ ಸಿಗುವ ವಿಶ್ವಾಸ ಇದ್ದು, ಆ ಮೂಲಕ ನಗರದ ಸಂಚಾರ ದಟ್ಟಣೆಯನ್ನು ನಿಯಂತ್ರಣ ಮಾಡಲು ಉಬರ್ ಸಹ ಸಹಾಯ ಮಾಡಲಿದೆ ಎಂದು ಹೇಳಿದ್ದಾರೆ.
ಔಟರ್ ರಿಂಗ್ ರೋಡ್‌ನಲ್ಲಿ ಹಲವು ಐಟಿ ಕಂಪನಿಗಳಿದ್ದು, ಲಕ್ಷಾಂತರ ಐಟಿ ಉದ್ಯೋಗಿಗಳು ನೆಲೆಯೂರಿದ್ದಾರೆ. ಬೆಂಗಳೂರಿನಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದೆ. ಟೆಕ್ ಪಾರ್ಟ್ ಪ್ರದೇಶದಲ್ಲಿ ಇದರ ಸೇವೆ ಅಗತ್ಯವಾಗಿದೆ. ಇತರೆ ನಗರಗಳಿಗೆ ಹೋಲಿಸಿದರೆ, ಬೆಂಗಳೂರು ಮತ್ತು ಹೈದರಾಬಾದ್ ಹೆಚ್ಚಿನ ಟೆಕ್ ಪಾರ್ಕ್‌ಗಳನ್ನು ಹೊಂದಿರುವ ನಗರಗಳಾಗಿವೆ.
ಇನ್ನು ಉಬರ್ ಶಟಲ್‌ಗೆ ಸಾರ್ವಜನಿಕ ಬೆಂಬಲವನ್ನು ಸಂಗ್ರಹಿಸಲು, ಕಂಪನಿಯು ಕಳೆದ ತಿಂಗಳು ನಗರದಲ್ಲಿ ನಡೆದ ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ ಬಸ್ ಅನ್ನು ಪ್ರದರ್ಶಿಸಿತ್ತು. ಶೃಂಗಸಭೆಯಲ್ಲಿ ಕಂಪನಿಯು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಇತರರಿಗೆ ಈ ಬಗ್ಗೆ ವಿವರಿಸಿದೆ. ಇದೀಗ ಸರ್ಕಾರದ ಒಪ್ಪಿಗೆಗಾಗಿ ಕಾಯುತ್ತಿದೆ ಎಂದು ತಿಳಿಸಿದರು.












Click it and Unblock the Notifications