ಬೈಕ್ ಸ್ಟಂಟ್ ಮಾಡುವವರ ಮೇಲೆ ಆನ್‌ಲೈನ್ ಮೂಲಕವೇ ಕಣ್ಣು!
ಬೆಂಗಳೂರು, ಮೇ 09: ಎಷ್ಟು ಜಾಗೃತಿ ಮೂಡಿಸಿದರೂ, ದಂಡ ಪ್ರಯೋಗ ಮಾಡಿದರೂ ಸಹ ಬೆಂಗಳೂರು ನಗರದಲ್ಲಿ ಬೈಕ್ ಸ್ಟಂಟ್ ಮಾಡುವುದು ಕಡಿಮೆ ಆಗುತ್ತಿಲ್ಲ. ಈ ಕುರಿತು ಜನರು ಸಹ ಪೊಲೀಸರಿಗೆ ದೂರು ನೀಡುತ್ತಲೇ ಇದ್ದಾರೆ. ಆದ್ದರಿಂದ ಸಂಚಾರಿ ಪೊಲೀಸರು ಇದರ ಮೇಲೆ ಕಣ್ಣಿಡಲು ಹೊಸ ಪ್ರಯೋಗ ಮಾಡುತ್ತಿದ್ದಾರೆ.
ಬೆಂಗಳೂರು ನಗರದಲ್ಲಿ 121 ದಿನದಲ್ಲಿ 191 ಬೈಕ್ ವ್ಹೀಲಿಂಗ್ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ 27 ಅಪ್ರಾಪ್ತರು ಸೇರಿದ್ದಾರೆ. ಈ ಹಿನ್ನಲೆಯಲ್ಲಿ ಬೆಂಗಳೂರು ಪೊಲೀಸರು ಶೀಘ್ರವೇ ಆನ್‌ಲೈನ್ ಮೂಲಕವೇ ಕಾರ್ಯಾಚರಣೆ ಮಾಡಲಿದ್ದಾರೆ.

ಈ ಅಭಿಯಾನದ ಭಾಗವಾಗಿ ಜನರು ತಮ್ಮ ರಸ್ತೆಯಲ್ಲಿ ಬೈಕ್ ವ್ಹೀಲಿಂಗ್ ಮಾಡುವ, ಬೈಕ್ ಸ್ಟಂಟ್ ಮಾಡುವವರ ಕುರಿತು ದೂರು ನೀಡಬಹುದು. ಪೊಲೀಸರು ಇಂತಹ ಅಪಾಯಕಾರಿ ಸ್ಟಂಟ್ ಮಾಡುವವರನ್ನು ಪತ್ತೆ ಹಚ್ಚಿ ಕೇಸು ದಾಖಲು ಮಾಡಲಿದ್ದಾರೆ.
ಹೇಗೆ ನಡೆಯಲಿದೆ ಕಾರ್ಯಾಚರಣೆ?; ಈ ಹಿಂದೆ ಇದೇ ಮಾದರಿಯಲ್ಲಿ ಮಾಡಿದ ಕಾರ್ಯಾಚರಣೆ ವೇಳೆ ಬೈಕ್ ವ್ಹೀಲಿಂಗ್ ಮಾಡುವವರು, ಸ್ಟಂಟ್ ಮಾಡುವವರನ್ನು ಪತ್ತೆ ಮಾಡಲು ಸಹಾಯಕವಾಗಿತ್ತು. ಈಗ ಪೊಲೀಸರು ತಂಡವೊಂದನ್ನು ರಚನೆ ಮಾಡಿ ಈ ಅಭಿಯಾನವನ್ನು ಕೈಗೊಳ್ಳಲಿದ್ದಾರೆ.
ಬೈಕ್ ವ್ಹೀಲಿಂಗ್, ಸ್ಟಂಟ್ ಮಾಡುವವರು ಅವುಗಳ ಚಿತ್ರ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುತ್ತಾರೆ. ಆದ್ದರಿಂದ ಸಂಚಾರಿ ಪೊಲೀಸರ ತಂಡ ವಿಶೇಷವಾಗಿ ಸಾಮಾಜಿಕ ಜಾಲತಾಣದ ಮೇಲೆ ಕಣ್ಣಿಡಲಿದೆ.
ಅಲ್ಲದೇ ಜನರು ತಮ್ಮ ಬಡಾವಣೆಗಳಲ್ಲಿ ನಡೆಯುವ ಬೈಕ್ ವ್ಹೀಲಿಂಗ್, ಸ್ಟಂಟ್ ಕುರಿತು ದೂರು ನೀಡಿದರೆ ಅದನ್ನು ಪರಿಹಾರ ಮಾಡಲು ಸಹ ತಂಡ ಕೆಲಸ ಮಾಡಲಿದೆ. ನಗರದೊಳಗೆ ಮಾತ್ರವಲ್ಲ ನಗರದ ಹೊರವಲಯದ ರಸ್ತೆಗಳ ಮೇಲೆ ಸಹ ಕಣ್ಣಿಡಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
ನೈಸ್ ರಸ್ತೆ, ಹೊರ ವರ್ತುಲ ರಸ್ತೆ, ಶಾಲೆ, ಕಾಲೇಜುಗಳ ಬಳಿ ಬೈಕ್ ವ್ಹೀಲಿಂಗ್, ಸ್ಟಂಟ್ ಮಾಡುವುದು ಅಧಿಕ. ಈ ಕುರಿತು ಆಗಾಗ ಜನರು ದೂರು ನೀಡುತ್ತಾರೆ. ಈಗ ಇಂತಹ ದೂರನ್ನು ಆಧರಿಸಿ ಬೈಕ ಸವಾರರನ್ನು ಪತ್ತೆ ಹಚ್ಚಲು ವಿಶೇಷ ತಂಡ ಕೆಲಸ ಮಾಡಲಿದೆ.
ವಿವಿಧ ರಸ್ತೆಗಳಲ್ಲಿ ವ್ಹೀಲಿಂಗ್, ಸ್ಟಂಟ್ ಮಾಡುವ ಬಗ್ಗೆ ಜನರು ಸಾಮಾಜಿಕ ಜಾಲತಾಣಗಳ ಮೂಲಕ ದೂರು ನೀಡುತ್ತಿದ್ದಾರೆ. ಇಂತಹ ದೂರುಗಳನ್ನು ಬಗೆಹರಿಸಲು ವಿಶೇಷ ತಂಡ ಶೀಘ್ರವೇ ಕೆಲಸ ಆರಂಭಿಸಲಿದೆ. ಜನರು ಬೈಕ್ ಸ್ಟಂಟ್ ವಿಡಿಯೋ, ಚಿತ್ರಗಳನ್ನು ಶೇರ್ ಮಾಡಲು ಸಹ ವ್ಯವಸ್ಥೆ ಮಾಡಲಾಗುತ್ತದೆ.
ಕಳೆದ 4 ತಿಂಗಳಿನಲ್ಲಿ ಉತ್ತರ ವಿಭಾಗದಲ್ಲಿ 14 ವ್ಹೀಲಿಂಗ್ ಪ್ರಕರಣ ದಾಖಲು ಮಾಡಿದ್ದು, 12 ಆರೋಪಿಗಳನ್ನು ಬಂಧಿಸಲಾಗಿದೆ, ಇವರಲ್ಲಿ ಇಬ್ಬರು ಅಪ್ರಾಪ್ತರು. ವಿವಿಧ ರಸ್ತೆಗಳಲ್ಲಿ ವ್ಹೀಲಿಂಗ್ ಮಾಡಿ ಅಪ್ರಾಪ್ತರು ಸಿಕ್ಕಿಬಿದ್ದರೆ ಅವರ ಪೋಷಕರ ಮೇಲೆ, ಬೈಕ್ ಮಾಲೀಕರ ಮೇಲೆ ಸಹ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
15 ರಿಂದ 25 ವರ್ಷದವರು ವಿವಿಧ ರಸ್ತೆಗಳಲ್ಲಿ ವ್ಹೀಲಿಂಗ್, ಸ್ಟಂಟ್ ಮಾಡಿ ಇತರರನ್ನು ಆಕರ್ಷಣೆ ಮಾಡಲು ಪ್ರಯತ್ನಿಸುತ್ತಾರೆ. ಇಂತಹ ಅಪಾಯಕಾರಿ ಸಾಹಸ ಮಾಡಲು ಹೋಗಿ ರಸ್ತೆ ಅಪಘಾತಗಳಲ್ಲಿ ಗಾಯಗೊಳ್ಳುತ್ತಿದ್ದಾರೆ, ಪ್ರಾಣ ಹಾನಿಯೂ ಸಂಭವಿಸುತ್ತದೆ. ಆದ್ದರಿಂದ ಇಂತಹವುಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇಂತಹ ಸ್ಟಂಟ್‌ಗಳನ್ನು ಮಾಡಲು ಹೋಗಿ ಇತರ ವಾಹನ ಸವಾರರಿಗೂ ಕಿರಿಕಿರಿ ಉಂಟು ಮಾಡುತ್ತಾರೆ. ಇದಕ್ಕಾಗಿಯೇ ಬೈಕ್‌ಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸುತ್ತಾರೆ. ನಕಲಿ ನಂಬರ್ ಪ್ಲೇಟ್ ಅಳವಡಿಕೆ ಮಾಡುತ್ತಾರೆ. ಆದ್ದರಿಂದ ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚುವುದು ಸಹ ಪೊಲೀಸರಿಗೆ ಸವಾಲಿನ ಕೆಲಸವಾಗಿದೆ.












Click it and Unblock the Notifications