ರಿಯಲ್ ಎಸ್ಟೇಟ್ ಉದ್ಯಮಿ ಮನೆ ಮೇಲೆ ಐಟಿ ದಾಳಿ ಹೆಸರಿನಲ್ಲಿ ದರೋಡೆ!
ಬೆಂಗಳೂರು, ಜ. 28: ಆದಾಯ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಮನೆಗೆ ನುಗ್ಗಿ ಹಣ ಮತ್ತು ಪಿಸ್ತೂಲು ದೋಚಿದ್ದ ಸ್ಥಳೀಯ ಪತ್ರಿಕೆ ಉಪ ಸಂಪಾದಕ ಸೇರಿ ಐವರು ಆರೋಪಿಗಳನ್ನು ಸಂಜಯನಗರ ಪೊಲೀಸರು ಬಂಧಿಸಿದ್ದಾರೆ.
ಕೆಲ ದಿನಗಳ ಹಿಂದೆ ರಿಯಲ್ ಎಸ್ಟೇಟ್ ಬ್ರೋಕರ್ ಮೃತಪಟ್ಟಿದ್ದು, ಅವರ ಕಚೇರಿಯಲ್ಲಿದ್ದ ಪಿಸ್ತೂಲು ಮತ್ತು ದಾಖಲಾತಿಗಳನ್ನು ಅವರ ಪುತ್ರ ಮನೆಯಲ್ಲಿ ತಂದಿಟ್ಟಿದ್ದರು. ಜ. 23 ರಂದು ಆದಾಯ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ಕಾರಿನಲ್ಲಿ ಬಂದಿದ್ದ ನಕಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ಮನೆಗೆ ದಾಳಿ ಮಾಡಿದ್ದರು. ಅನುಮಾನಗೊಂಡು ಕೇಳಿದಾಗ ಆದಾಯ ತೆರಿಗೆ ಇಲಾಖೆಯ ಗುರುತಿನ ಚೀಟಿಯನ್ನು ತೋರಿಸಿದ್ದರು. ಇದನ್ನು ನಂಬಿ ಮನೆಯವರು ಸುಮ್ಮನಾಗಿದ್ದರು. ಈ ವೇಳೆ ಮನೆಯ ಲಾಕರ್‌ನಲ್ಲಿದ್ದ 3.5 ಲಕ್ಷ ನಗದು ಹಣ, ಒಂದು ಪಿಸ್ತೂಲು ತೆಗೆದುಕೊಂಡು ಹೋಗಿದ್ದರು.
ಅನುಮಾನಗೊಂಡು ಆದಾಯ ತೆರಿಗೆ ಇಲಾಖೆಯಲ್ಲಿ ವಿಚಾರಿಸಿದಾಗ ಯಾವುದೇ ದಾಳಿ ನಡೆದಿರುವ ಬಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಆ ಬಳಿಕ ಸಂಜಯ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಸಿಸಿಟಿವಿ ದೃಶ್ಯ ಆಧರಿಸಿ ಕಾರ್ಯಾಚರಣೆ ನಡೆಸಿದ ಸಂಜಯ್ ನಗರ ಪೊಲೀಸರು ಐವರು ಅರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಓರ್ವ ಸ್ಥಳೀಯ ಪತ್ರಿಕೆ ಉಪ ಸಂಪಾದಕನಾಗಿದ್ದು, ಆದಾಯ ತೆರಿಗೆ ಇಲಾಖೆ ನಕಲಿ ಗುರುತಿನ ಚೀಟಿ ಇಟ್ಟುಕೊಂಡು ದಾಳಿ ಮಾಡಿದ್ದಾರೆ. ಈ ಹಿಂದೆ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದ ದೂರುದಾರರ ತಂದೆಯ ಬಳಿ ಕೆಲಸ ಮಾಡುತ್ತಿದ್ದ ಆರೋಪಿ, ಮನೆಯಲ್ಲಿ ಹಣ ಇಟ್ಟಿರುವ ಮಾಹಿತಿ ಪಡೆದಿದ್ದ. ಮನೆ ಮೇಲೆ ಆದಾಯ ತೆರಿಗೆ ದಾಳಿ ಹೆಸರಿನಲ್ಲಿ ನುಗ್ಗಿ ಹಣ ದೋಚುವ ಪ್ಲಾನ್ ಮಾಡಿ ಅದನ್ನು ಕಾರ್ಯಗತ ಮಾಡಿದ್ದಾರೆ. ಕೊನೆಗೂ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಬಂಧಿತರಿಂದ ಪಿಸ್ತೂಲು, ಜೀವಂತ ಗುಂಡು ಹಾಗೂ ಒಂದೂವರೆ ಲಕ್ಷ ರೂ. ನಗದು ಹಣವನ್ನು ಜಪ್ತಿ ಮಾಡಿದ್ದಾರೆ. ಆರೋಪಿಗಳ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಅಡಿ ಕೇಸು ದಾಖಲಿಸಲಾಗಿದೆ.
ಈ ಹಿಂದೆ ಇದೇ ರೀತಿ ದರೋಡೆ ಮಾಡಿರುವ ಬಗ್ಗೆ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ನಕಲಿ ಆದಾಯ ತೆರಿಗೆ ಇಲಾಖೆ ಸೋಗಿನಲ್ಲಿ ದಾಳಿ ಮಾಡಿದ್ದು ಅರೋಪಿಗಳು ತೆರಳಿದ್ದ ಕಾರಿಗೂ ಆದಾಯ ತೆರಿಗೆ ಇಲಾಖೆಯ ಸ್ಟಿಕ್ಕರ್ ಅಂಟಿಸಿದ್ದರು. ಹೀಗಾಗಿ ಮನೆಯವರು ಭಯಭೀತರಾಗಿ ಯಾರಿಗೂ ಹೇಳಿರಲಿಲ್ಲ. ಆದಾಯ ತೆರಿಗೆ ಇಲಾಖೆ ಕಚೇರಿಗೆ ಹೋಗಿ ದೃಢಪಡಿಸಿಕೊಂಡ ನಂತರ ಇದು ನಕಲಿ ದಾಳಿ ಎಂಬುದು ಗೊತ್ತಾಗಿದೆ. ಆರೋಪಿಗಳು ಈ ಹಿಂದೆ ಇದೇ ರೀತಿ ಕೃತ್ಯ ನಡೆಸಿರುವ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.












Click it and Unblock the Notifications