Cubbon Park: ಕಬ್ಬನ್ ಪಾರ್ಕ್‌ನಲ್ಲಿ 10 ಅಂತಸ್ತಿನ ಕಟ್ಟಡ ನಿರ್ಮಾಣ ಕೈ ಬಿಟ್ಟ ಸರ್ಕಾರ: ಕಾರಣ ಇಲ್ಲಿದೆ
ಬೆಂಗಳೂರು, ಫೆಬ್ರವರಿ 13: ಕಬ್ಬನ್ ಪಾರ್ಕ್ ಹಾಗೂ ಲಾಲಾಬಾಗ್ ನಗರದ ಪರಿಸರ ಪ್ರೇಮಿಗಳ ಮೆಚ್ಚಿನ ತಾಣ. ಸದಾ ವಾಹನಗಳ ಸದ್ದು, ಮಾಲಿನ್ಯದಿಂದ ಗಿಜುಗುಡುವ ಬೆಂಗಳೂರಿನಲ್ಲಿ ಸ್ವಚ್ಛಂದ ಮತ್ತು ಕಲುಷಿತಗೊಳ್ಳದ ಶುದ್ಧ ಗಾಳಿ ಸಿಗುವ ಜಾಗ ಕಬ್ಬನ್ ಪಾರ್ಕ್. ಈ ಪಾರ್ಕ್‌ನಲ್ಲಿ ನೂರಾರು ಪ್ರಾಣಿ ಪಕ್ಷಿ ಸಂಕುಲವಿದ್ದು, ಹಚ್ಚ ಹಸಿರಿನ ಹೊದಿಕೆಯಿದೆ.
ಒತ್ತಡದ ಜೀವನಕ್ಕೆ ಬ್ರೇಕ್ ಹಾಕಿ ಇಲ್ಲಿ ರಿಲ್ಯಾಕ್ಸ್ ಆಗಲು, ಮಕ್ಕಳಿಗೆ ಆಟವಾಡಲು, ಕುಟುಂಬ ಸಮೇತ ಬಂದು ಕಾಲ ಕಳೆಯಲು ಇರುವ ಸುಂದರವಾದ ತಾಣವಿದು. ಬೆಂಗಳೂರಿಗರು ಮಾತ್ರ ಅಲ್ಲದೇ ನಗರದ ಸುತ್ತಮುತ್ತ ಜಿಲ್ಲೆಯ ಜನರು ಕೂಡ ವಿಕೇಂಡ್, ರಜೆ ದಿನಗಳಲ್ಲಿ ಈ ಪಾರ್ಕ್‌ನ ಸ್ವಚ್ಚಂದ ವಾತಾವರಣ ಅನುಭವಕ್ಕಾಗಿ ಬರುತ್ತಾರೆ. ಆದರೆ ಸರ್ಕಾರದ ಇತ್ತೀಚಿನ ಒಂದು ನಿರ್ಧಾರ ಕಬ್ಬನ್ ಪಾರ್ಕ್‌ನ ನೈಜ ಸ್ವರೂಪ ಹಾಳು ಮಾಡುವ ಆತಂಕಕ್ಕೆ ಕಾರಣವಾಗಿತ್ತು. ಆದರೆ ಪರಿಸರ ಪ್ರೇಮಿಗಳ ಹೋರಾಟದಿಂದ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿದಿದೆ.

ಕಬ್ಬನ್ ಪಾರ್ಕ್‌ನಲ್ಲಿ ಹೊಸದಾಗಿ ಹತ್ತು ಅಂತಸ್ತುಗಳ ಕಟ್ಟಡವೊಂದನ್ನು ಕಟ್ಟಲು ಮುಂದಾಗಿದ್ದ ರಾಜ್ಯ ಸರ್ಕಾರ, ಸದ್ಯ ಆ ನಿರ್ಧಾರಕ್ಕೆ ಬ್ರೇಕ್ ಹಾಕಿದೆ. ಕಬ್ಬನ್ ಪಾರ್ಕ್‌ನಲ್ಲಿ ಚುನಾವಣಾ ಆಯೋಗಕ್ಕೆ ಹೊಸ ಕಟ್ಟಡವೊಂದನ್ನು ನಿರ್ಮಿಸಲು ಹಾಗೂ ಕೆಲವು ಸರ್ಕಾರಿ ಇಲಾಖೆಗಳ ಕಚೇರಿಗಳನ್ನು ಸ್ಥಳಾಂತರಿಸುವ ಸಲುವಾಗಿ ಹತ್ತು ಅಂತಸ್ತುಗಳ ಬೃಹತ್ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ರಾಜ್ಯ ಸರ್ಕಾರ ಮುಂದಾಗಿತ್ತು. ಆದರೆ ಈ ಕಾಮಗಾರಿಗೆ ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.
ಈ ಬೃಹತ್ ಕಟ್ಟಡ ನಿರ್ಮಾಣಕ್ಕೆ ಮರಗಳನ್ನು ಕತ್ತರಿಸದೇ ನಿರ್ಮಿಸಲು ಸಾಧ್ಯವಿಲ್ಲ. ಕಟ್ಟಡ ನಿರ್ಮಾಣಕ್ಕೆ ಬೇಕಾದ ಸಾಮಗ್ರಿಗಳನ್ನು ಸಾಗಿಸುವ ಭಾರೀ ಗಾತ್ರದ ವಾಹನಗಳು ಹಾಗೂ ಭಾರೀ ಗಾತ್ರದ ಯಂತ್ರಗಳು ಕಬ್ಬನ್ ಪಾರ್ಕ್‌ನಲ್ಲಿ ಕಾರ್ಯನಿರ್ವಹಿಸದರೆ, ಕಬ್ಬನ್ ಪಾರ್ಕ್ ಮಾಲಿನ್ಯವಾಗುತ್ತದೆ. ಶಾಂತಿಯಿಂದಿರುವ ಈ ಜಾಗ ಶಬ್ಧ ಮಾಲಿನ್ಯ, ವಾಯು ಮಾಲಿನ್ಯದಿಂದ ತುಂಬಿ ತುಳುಕುತ್ತದೆ ಎಂದು ಪರಿಸರ ಪ್ರೇಮಿಗಳು ಅನೇಕ ಸಂಘ- ಸಂಸ್ಧೆಗಳು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದರು.
ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಿಸುವ ಯೋಜನೆಯನ್ನು ಬೇರೆಡೆಗೆ ಸ್ಥಳಾಂತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅದಕ್ಕಾಗಿ ಹೊಸ ಜಾಗವನ್ನು ಹುಡುಕಲಾಗುತ್ತದೆ ಎನ್ನಲಾಗಿದೆ. ಸದ್ಯ ಹತ್ತು ಅಂತಸ್ತಿನ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಕೈಬಿಡಲಾಗಿದ್ದು, ಕರ್ನಾಟಕ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಬೇರೆ ಜಾಗ ಹುಡುಕಾಟದಲ್ಲಿದ್ದಾರೆ.












Click it and Unblock the Notifications