Tender Coconut Price: ಈ ಮಳೆಗಾಲದಲ್ಲಿಯೂ ಹೆಚ್ಚಿದ ಎಳನೀರಿನ ದರ: ಗ್ರಾಹಕರು ಫುಲ್ ಶಾಕ್
ಬೆಂಗಳೂರು, ಆಗಸ್ಟ್ 01: ಈ ಬಾರಿಯ ರಣ ಬೇಸಿಗೆಯಲ್ಲಿ ಗಗನಕ್ಕೇರಿದ್ದ ಎಳನೀರಿನ ಬೆಲೆ ಮಳೆ ಆರಂಭವಾಗುತ್ತಿದ್ದಂತೆ ಕೊಂಚ ಕಡಿಮೆಯಾಗಿತ್ತು. ಪ್ರತಿ ವರ್ಷ ಮಳೆಗಾಲದಲ್ಲಿ ಎಳನೀರಿನ ಬೆಲೆ ಒಂದು ಮಟ್ಟಿಗೆ ಇಳಿಕೆ ಕಾಣುತ್ತಿತ್ತು. ಆದರೆ ಈ ಬಾರಿ ಲೆಕ್ಕಾಚಾರ ಉಲ್ಟಾ ಆಗಿದ್ದು, ಮಳೆಗಾಲದಲ್ಲಿಯೂ ಎಳನೀರಿನ ಬೆಲೆ ಮತ್ತೆ ಗಗನಕ್ಕೇರುತ್ತಿದೆ.
ಮಾರ್ಚ್, ಏಪ್ರೀಲ್ ಹಾಗೂ ಮೇ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಒಂದು ಎಳ ನೀರಿನ ಬೆಲೆ 60 ರಿಂದ 70 ರೂಪಾಯಿ ದಾಟಿತ್ತು. ಕೆಲವು ಭಾಗಗಳಲ್ಲಿ 50 ರೂಪಾಯಿಗೆ ಮಾರಾಟವಾಗುತ್ತಿತ್ತು. ಸ್ಪಲ್ಪ ಮಟ್ಟಿನ ಮಳೆಯಾಗುತ್ತಿದ್ದಂತೆ ಜೂನ್ ತಿಂಗಳಲ್ಲಿ ಎಳ ನೀರಿನ ಬೆಲೆ 45 ರೂಪಾಯಿಗೆ ಇಳಿಕೆಯಾಗಿತ್ತು. ಇನ್ನು ಕೆಲವು ಭಾಗಗಳಲ್ಲಿ 35 ರೂಪಾಯಿಗೆ ಮಾರಾಟವಾಗುತ್ತಿತ್ತು.

ಇದೀಗ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಎಳ ನೀರಿನ ಬೆಲೆ ಮತ್ತೆ ಏರಿಕೆ ಕಂಡಿದ್ದು, ಮಳೆಯಾಗುತ್ತಿದ್ದರೂ ಕೂಡ 50 ರಿಂದ 60 ರೂಗೆ ಎಳನೀರು ಮಾರಾಟವಾಗುತ್ತಿದೆ. ಇನ್ನು ಸ್ಪಲ್ಪ ಮಟ್ಟಿನ ಮಳೆ ಕಡಿಮೆಯಾದರೆ ಇನ್ನಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ಈ ಬಾರಿ ಬೇಸಿಗೆ ಇರಲಿ ಚಳಿಗಾಲ ಆರಂಭಕ್ಕೂ ಮೊದಲೇ ಎಳ ನೀರಿನ ಬೆಲೆ ಏರಿಕೆಯಾಗಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ.
ಈ ವರ್ಷ ಬೇಸಿಗೆಯಲ್ಲಿ ಬಿಸಿಲು ಹೆಚ್ಚಾಗಿದ್ದು, ಇದರಿಂದ ತೆಂಗಿನ ಬೆಳೆ ಕುಂಠಿತಗೊಂಡಿದೆ. ಬೆಂಗಳೂರಿಗೆ ಎಳನೀರು ಕಡಿಮೆ ಪ್ರಮಾಣದಲ್ಲಿ ಪೂರೈಕೆಯಾಗುತ್ತಿರುವ ಕಾರಣ, ದರ ಹೆಚ್ಚು ಮಾಡಲಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ. ಆರೋಗ್ಯಕರವಾದ ಎಳನೀರಿಗೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅತೀವ ಬೇಡಿಕೆ ಇದ್ದು, ಹೀಗಾಗಿ ಋತುವಿನ ಲೆಕ್ಕಾಚಾರವಿಲ್ಲದೇ ದರ ಏರಿಕೆಯಾಗುತ್ತಿದೆ.
ಎಳನೀರಿನ ಉಪಯೋಗವೇನು..?
ಆರೋಗ್ಯಕರವಾದ ಎಳನೀರು ಸೇವನೆಯಿಂದ ನಮ್ಮ ದೇಹಕ್ಕೆ ಅನೇಕ ಉಪಯೋಗವಿದೆ. ದರ ಹೆಚ್ಚಾಯಿತು ಎಂದು ಎಳನೀರು ಕುಡಿಯದೇ ಇದ್ದರೆ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಎಳನೀರು ಸೇವನೆಯಿಂದ ದೇಹವನ್ನು ನಿರ್ಜಲೀಕರಣದಿಂದ ಕಾಪಾಡಿಕೊಳ್ಳಬಹುದು. ಎಳನೀರಿನಲ್ಲಿ ಪೋಷಕಾಂಶ ಸಮೃದ್ಧವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ, ಹಾಗೂ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಜೊತೆಗೆ ಎಳನೀರು ಸೇವನೆಯಿಂದ ಕಿಡ್ನಿ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.












Click it and Unblock the Notifications