ಬೆಂಗಳೂರಲ್ಲಿ ಚಳಿ ಇಳಿಕೆ, ಸೆಕೆ ಆರಂಭ, 2 ದಿನ ತುಂತುರು ಮಳೆ ಸಾಧ್ಯತೆ
ಬೆಂಗಳೂರು, ಜನವರಿ 29: ನಗರದಲ್ಲಿ ಚಳಿ ಕಡಿಮೆಯಾಗಿ ಸ್ವಲ್ಪ ಸೆಕೆ ಆರಂಭವಾಗಿದೆ. ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಹಾಗಾಗಿ ಸೆಕೆ ಆರಂಭವಾಗಿದೆ.
ವಾತಾವರಣದಲ್ಲಿ ಗಾಳಿಯ ಒತ್ತಡ (ಟ್ರಫ್) ಕಡಿಮೆಯಾಗಿರುವುದರಿಂದ ರಾಜ್ಯದಲ್ಲಿ ಮೋಡ ಕವಿದ ವಾತಾವರಣ ಉಂಟಾಗಿದ್ದು, ಮುಂದಿನ ಎರಡು ದಿನ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಮಾಹಿತಿ ನೀಡಿದೆ.
ತಿಂಗಳ ಆರಂಭದಲ್ಲಿ ನಗರದಲ್ಲಿ ತೀವ್ರವಾಗಿ ಕೊರೆಯುವ ಚಳಿ ಕಡಿಮೆಯಾಗಿತ್ತು. ತಿಂಗಳ ಅಂತ್ಯದಲ್ಲಿ ಚಳಿ ಕಾಣೆಯಾಗಿ ಸೆಕೆ ಆರಂಭವಾಗಿದೆ. ಹಗಲಿನಲ್ಲಿ ಸಾಮಾನ್ಯವಾದ ಬಿಸಿಲಿದ್ದು, ರಾತ್ರಿ ಸೆಕೆಯಾಗುತ್ತಿದೆ. ಆದರೆ ವಿಪರೀತ ಗಾಳಿಯೂ ಬೀಸುತ್ತಿದೆ.

ತುಂತುರು ಮಳೆಯಾಗುವ ಸಾಧ್ಯತೆ ಇದೆ. ಭಾರೀ ಮಳೆಯಾಗುವ ಮುನ್ಸೂಚನೆಗಳಿಲ್ಲ. ಇನ್ನು ಎರಡು ದಿನ ಮೋಡ ಕವಿದ ವಾತಾವರಣ ಮುಂದುವರೆಯುವುದರಿಂದ ಚಳಿ ಪ್ರಮಾಣದಲ್ಲಿಯೂ ಇಳಿಕೆಯಾಗಲಿದೆ.
ಕೆಲ ದಿನಗಳ ಹಿಂದೆ ಸಂಜೆಯಾಗುತ್ತಿದ್ದಂತೆ ಚಳಿ ಇರುತ್ತಿತ್ತು, ಕೆಲ ದಿನಗಳ ಹಿಂದೆ ನಗರದ ಕೇಂದ್ರ ಭಾಗದಲ್ಲಿ ಕನಿಷ್ಠ ತಾಪಮಾನ 13-14 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿತ್ತು ಇದೀಗ 19 ಡಿಗ್ರಿ ತಲುಪಿದೆ.
ಕನಿಷ್ಠ ಉಷ್ಣಾಂಶದಲ್ಲಿ ಏರಿಕೆ ಕಂಡುಬರಲಿದೆ. ಜನವರಿ ಕೊನೆಯ ವಾರದಲ್ಲಿರುವುದರಿಂದ ಚಳಿ ಪ್ರಮಾಣ ಮುಂದಿನ ದಿನಗಳಲ್ಲಿ ಕಡಿಮೆ ಆಗಲಿದೆ ಎಂದು ಕೆಎಸ್‌ಎನ್‌ಡಿಎಂಸಿ ವಿಜ್ಞಾನಿ ಪ್ರಭು ತಿಳಿಸಿದ್ದಾರೆ.
ಬೆಂಗಳೂರು ಕೇಂದ್ರ ಭಾಗದಲ್ಲಿ ಕನಿಷ್ಠ 19 ಡಿಗ್ರಿ ಸೆಲ್ಸಿಯಸ್, ಗರಿಷ್ಠ 29.6 ಡಿಗ್ರಿ ಸೆಲ್ಸಿಯಸ್, ಕೆಐಎನಲ್ಲಿ ಕನಿಷ್ಠ 18.8 ಡಿಗ್ರಿಸೆಲ್ಸಿಯಸ್, ಗರಿಷ್ಠ 28.2 ಡಿಗ್ರಿ ಸೆಲ್ಸಿಯಸ್,ಎಚ್‌ಎಎಲ್‌ನಲ್ಲಿ ಕನಿಷ್ಠ 18.6 ಡಿಗ್ರಿ ಸೆಲ್ಸಿಯಸ್, ಗರಿಷ್ಠ 29.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.












Click it and Unblock the Notifications