ನಮೋ ಸಮಾವೇಶಕ್ಕೆ ಐದು ಸಾವಿರ ಬಸ್ಸು, 10 ರೈಲು
ಬೆಂಗಳೂರು, ನ. 12 : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಬೆಂಗಳೂರಿನ ಭಾರತ ಗೆಲ್ಲಿಸಿ ಸಮಾವೇಶಕ್ಕಾಗಿ ಆನ್ ಲೈನ್ ಮೂಲಕ ಇದುವರೆಗೂ 41,000 ಜನರು ನೋಂದಣಿ ಮಾಡಿಕೊಂಡಿದ್ದಾರೆ. ಸಮಾವೇಶಕ್ಕೆ ಆಗಮಿಸುವ ಜನರಿಗಾಗಿ ಬಿಜೆಪಿ 5000 ಬಸ್ ಮತ್ತು 10 ರೈಲುಗಳನ್ನು ಬಿಜೆಪಿ ಬುಕ್ ಮಾಡಿದೆ.
ಮೋದಿ ಸಮಾವೇಶಕ್ಕಾಗಿ ಯುವಕರು ಮತ್ತು ಸಾಫ್ಟ್‌ವೇರ್ ಇಂಜಿನಿಯರ್ ಗಳು ಆನ್ ಲೈನ್ ಮೂಲಕ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಮೈಸೂರು ಮತ್ತು ಬೆಂಗಳೂರಿನ ಜನರೇ ಹೆಚ್ಚಾಗಿ ಆನ್ ಲೈನ್ ಮೂಲಕ ನೋಂದಣಿ ಮಾಡಿಸಿಕೊಂಡಿದ್ದಾರೆ. ಇವರಲ್ಲಿ 18-40 ವರ್ಷದದೊಳಗಿನ ಯುವಕರೇ ಹೆಚ್ಚಾಗಿದ್ದಾರೆ.

ಬಿಜೆಪಿಯ ರಾಜ್ಯ ವಕ್ತಾರ ಮತ್ತು ಮಾಜಿ ಸಚಿವ ಸುರೇಶ್ ಕುಮಾರ್ ಅವರು ನೀಡಿರುವ ಮಾಹಿತಿಯಂತೆ, ಸೋಮವಾರ ಸಂಜೆಯವರೆಗೂ ನರೇಂದ್ರ ಮೋದಿ ಅವರ ಭಾರತ ಗೆಲ್ಲಿಸಿ ಸಮಾವೇಶಕ್ಕಾಗಿ 41,000 ಜನರು ಆನ್ ಲೈನ್ ಮೂಲಕ ನೋಂದಣಿ ಮಾಡಿದ್ದಾರೆ. ಶುಕ್ರವಾರದ ವರೆಗೆ ರಾಜ್ಯಾದ್ಯಂತ 3.46 ಜನರು 10 ರೂ. ನೀಡಿ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಪಕ್ಷದ ಅಧ್ಯಕ್ಷ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
5000 ಬಸ್ : ನರೇಂದ್ರ ಮೋದಿ ಅವರ ಸಮಾವೇಶಕ್ಕೆ ವಿವಿಧ ಜಿಲ್ಲೆಗಳಿಂದ ಆಗಮಿಸುವ ಜನರಿಗಾಗಿ ಬಿಜೆಪಿ 3500 ಕೆಎಸ್ಆರ್ ಟಿಸಿ ಮತ್ತು 2000 ಬಿಎಂಟಿಸಿ ಬಸ್ಸುಗಳನ್ನು ಬುಕ್ ಮಾಡಿದೆ. 10 ರೈಲುಗಳ ವ್ಯವಸ್ಥೆಯನ್ನು ಮಾಡಿದ್ದು, ಅಗತ್ಯವಿದ್ದರೆ ಇನ್ನೂ 4 ರೈಲುಗಳ ವ್ಯವಸ್ಥೆ ಮಾಡಲು ಸಿದ್ಧವಾಗಿದೆ.
ನ.17ರ ಭಾನುವಾರ ನರೇಂದ್ರಿ ಮೋದಿ ನಗರದ ಅರಮನೆ ಮೈದಾನದಲ್ಲಿ ಬೆಳಗ್ಗೆ 11 ಗಂಟೆಗೆ ಭಾರತ ಗೆಲ್ಲಿಸಿ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ನಗರ ಪೊಲೀಸ್, ಬಿಜೆಪಿ ಸಮಾವೇಶದ ಯಶಸ್ವಿಯಾಗಿ ಅಗತ್ಯ ತಯಾರಿಗಳನ್ನು ಕೈಗೊಂಡಿವೆ. ಆನ್ ಲೈನ್ ನೋಂದಣಿಗಾಗಿ http://bjpkarnataka.org/ ವೆಬ್ ಸೈಟಿಗೆ ಭೇಟಿ ನೀಡಬಹುದಾಗಿದೆ. (ಮೋದಿ ಸಮಾವೇಶಕ್ಕೆ 3.46 ಲಕ್ಷ ನೋಂದಣಿ)












Click it and Unblock the Notifications