ಮಾಜಿ ಕಾರ್ಪೋರೇಟರ್ ಕಚೇರಿಯಲ್ಲಿ ಮ್ಯಾನೇಜರ್ ಅನುಮಾನಸ್ಪದ ಸಾವು
ಬೆಂಗಳೂರು, ಮಾರ್ಚ್ 07: ಮಾಜಿ ಕಾರ್ಪೋರೇಟರ್ ಧನರಾಜ್ ಅವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಧರ್ಮರಾಯಸ್ವಾಮಿ ಟೆಂಪಲ್ ವಾರ್ಡ್ ಮಾಜಿ ಕಾರ್ಪೋರೇಟರ್ ಧನರಾಜ್ ಅವರ ಕಚೇರಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಯುವಕ ಸಾವನ್ನಪ್ಪಿದ್ದು, ಆತನ ಪೋಷಕರು ಇದೊಂದು ವ್ಯವಸ್ಥಿತ ಕೊಲೆ ಎಂದು ಆರೋಪಿಸಿದ್ದಾರೆ.
ಕಲಾಸಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಎಂಆರ್‌ಆರ್ ಲೇನ್‌ನಲ್ಲಿ ಧನರಾಜ್ ಹೊಂದಿದ್ದ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಭು ಅಲಿಯಾಸ್ ಪಾಂಡಿಪ್ರಭು (30) ನಿಗೂಢವಾಗಿ ಸಾವನ್ನಪ್ಪಿದ ಯುವಕ. ಈತ ಮೂಲತಃ ತಮಿಳುನಾಡಿನ ಮಧುರೈ ಮೂಲದವ. ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಕಳೆದ ನಾಲ್ಕು ವರ್ಷದಿಂದ ಧನರಾಜ್ ಕಚೇರಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದ. ತಡರಾತ್ರಿ ತನ್ನ ಇಬ್ಬರ ಸ್ನೇಹಿತರ ಜತೆ ಪಾರ್ಟಿ ಮಾಡಿಕೊಂಡು ಬಂದು ಕಚೇರಿಯಲ್ಲಿ ಮಲಗಿದ್ದ. ಇಂದು ಬೆಳಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪ್ರಭು ದೇಹ ಪತ್ತೆಯಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಮೃತ ದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಲಾಸಿಪಾಳ್ಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಪೋಷಕರ ಆರೋಪ: ನನ್ನ ಸಹೋದರ ಪ್ರಭುನನ್ನು ಕೊಲೆ ಮಾಡಿದ್ದಾರೆ. ಧನರಾಜ್ ಕಡೆಯವರೇ ಹತ್ಯೆ ಮಾಡಿದ್ದಾರೆ. ನಾವು ಬರುವಷ್ಟರಲ್ಲಿ ಪ್ರಭು ದೇಹವನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತನ ಮೊಬೈಲ್ ಕೂಡ ಕಣ್ಮರೆಯಾಗಿದೆ. ಮಾಜಿ ಕಾರ್ಪೋರೇಟರ್ ಕೊಲೆ ಮಾಡಿಸಿ ಆತ್ಮಹತ್ಯೆ ನಾಟಕ ಆಡುತ್ತಿದ್ದಾರೆ ಎಂದು ಮೃತನ ಸಹೋದರಿ ಅಂಬಿಕಾ ಆರೋಪಿಸಿದ್ದಾರೆ. ಮೃತನ ಸಂಬಂಧಿಕರು ಕಚೇರಿ ಬಳಿ ಜಮಾಯಿಸಿದ್ದು, ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಕಲಾಸಿಪಾಳ್ಯ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಎರಡು ದಿನಗಳ ಹಿಂದಷ್ಟೇ ಧನರಾಜ್ ಯಾವುದೋ ವಿಚಾರವಾಗಿ ಪೊಲೀಸ್ ಠಾಣೆಗೆ ಹೋಗಿ ಬಂದಿದ್ದ. ಆನಂತರ ಜಾಮೀನಿಗೆ ಸಹಿ ಮಾಡು ಅಂತ ಹೇಳಿ ಕಳಿಸಿದ್ದ. ಹೀಗಾಗಿ ಪ್ರಭು ಕೂಡ ಪೊಲೀಸ್ ಠಾಣೆಗೆ ಹೋಗಿ ಸಹಿ ಮಾಡಿ ಬಂದಿದ್ದ ಎನ್ನಲಾಗುತ್ತಿದೆ.

ಪ್ರಭು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನು ಶರವಣ ಎಂಬಾತ ಕಣ್ಣಾರೆ ನೋಡಿದ್ದು, ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಇಷ್ಟಾಗಿಯೂ ಎಲ್ಲಾ ಆಯಾಮದಲ್ಲಿ ನೋಡುತ್ತಿದ್ದೇವೆ. ಮೇಲ್ನೋಟಕ್ಕೆ ಆತ್ಮಹತ್ಯೆ ಅಂತ ಕಂಡು ಬಂದಿದ್ದು, ಮರಣೋತ್ತರ ವರದಿ ಆಧರಿಸಿ ತನಿಖೆ ನಡೆಸುವುದಾಗಿ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ ಎಂ. ಪಾಟೀಲ್ ಹೇಳಿದ್ದಾರೆ.












Click it and Unblock the Notifications