Breaking : ಸೋನಿಯಾ ಬೆಂಬಲಿಸಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ
ಬೆಂಗಳೂರು, ಜುಲೈ 21: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಜಾರಿ ನಿರ್ದೇಶನಾಲಯ ವಿಚಾರಣೆ ಮಾಡುತ್ತಿರುವುದನ್ನು ವಿರೋಧಿಸಿ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಗುರುವಾರ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿಯೂ ಕಾಂಗ್ರೆಸ್ ನಾಯಕರು ಬೆಂಗಳೂರು ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ (ಕೆಪಿಸಿಸಿ) ಡಿ. ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರತಿಭಟನೆ ಆರಂಭವಾಗಿದೆ. ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ನಗರದ ಸ್ವಾಂತ್ರ್ಯ ಉದ್ಯಾನದಿಂದ ಹಿಡಿದು ಕೆ. ಆರ್. ವೃತ್ತ, ವಿಧಾನಸೌಧ ಮುಂದಿನ ರಸ್ತೆ ಮೂಲಕ ರಾಜಭವನದ ತನಕ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ.
ಈಗಾಗಲೇಸ್ವಾತಂತ್ರ್ಯ ಉದ್ಯಾನದಲ್ಲಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಜಮಾಯಿಸಿದ್ದು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಇನ್ನೇನು ಪ್ರತಿಭಟನಾ ಮೆರವಣಿಗೆ ಆರಂಭವಾಗಲಿದೆ.

ಪ್ರತಿಭಟನೆ ವೇಳೆ ಮಾತನಾಡಿದ ಡಿ. ಕೆ. ಶಿವಕುಮಾರ್, "ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆಗೆ ಕರೆಸುವ ಅಗತ್ಯವಿಲ್ಲ, ಅವರು ಸುಮ್ಮನೆ ಕಿರುಕುಳ ನೀಡುತ್ತಿದ್ದಾರೆ. ಇದು ರಾಜಕೀಯ ಸೇಡು. ಬಿಜೆಪಿ ಅವರಿಗೆ ಭಯವಿರುವ ಕಾರಣ. ಕಾಂಗ್ರೆಸ್ ನಾಯಕರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ" ಎಂದರು.
"ತನಿಖಾ ಸಂಸ್ಥೆಗಳ ದುರುಪಯೋಗದ ಮೂಲಕ ರಾಜಕೀಯ ವಿರೋಧಿಗಳು ಮತ್ತು ಕಾಂಗ್ರೆಸ್ ವಿರುದ್ಧ ನಡೆಯುತ್ತಿರುವ ನಿರಂತರ ಅಪ್ರಚಾರವನ್ನು ನಾವು ಖಂಡಿಸುತ್ತೇವೆ. ಜನವಿರೋಧಿ, ರೈತ ವಿರೋಧಿ ನೀತಿಗಳ ವಿರುದ್ಧ ನಮ್ಮ ಹೋರಾಟವನ್ನು ತೀವ್ರಗೊಳಿಸುತ್ತೇವೆ. ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ನಮ್ಮ ಸಂವಿಧಾನವನ್ನು ನಾಶಪಡಿಸುತ್ತಿದೆ ಮತ್ತು ಅರಾಜಕತೆಯನ್ನು ಸೃಷ್ಟಿಸುತ್ತಿದೆ" ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ. ಕೆ. ಹರಿಪ್ರಸಾದ್ ಹೇಳಿದರು.
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಮಾಜಿ ಸಚಿವ ರಮಾನಾಥ್ ರೈ, ಮಾಜಿ ಸಚಿವೆ ಉಮಾಶ್ರೀ, ಶಾಸಕ ಕೃಷ್ಣ ಭೈರೇಗೌಡ ಸೇರಿದಂತೆ ಬಹುತೇಕ ಎಲ್ಲಾ ಕಾಂಗ್ರೆಸ್ ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.












Click it and Unblock the Notifications