ಬಿಬಿಎಂಪಿ ಶುದ್ಧ ಕುಡಿಯುವ ನೀರಿನ ಘಟಕಗಳು ಜಲಮಂಡಳಿಗೆ ಹಸ್ತಾಂತರ
ಬೆಂಗಳೂರು, ಮಾರ್ಚ್ 02: ಬೇಸಿಗೆ ಆರಂಭವಾಗಿದ್ದು ಉದ್ಯಾನ ನಗರಿ ಬೆಂಗಳೂರಿನಲ್ಲಿ ಕುಡಿಯುವು ನೀರಿನ ಸಮಸ್ಯೆ ಉಂಟಾಗದಂತೆ ಎಚ್ಚರ ವಹಿಸಲು ಸರ್ಕಾರ ಮುಂದಾಗಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಈ ಹಿನ್ನಲೆಯಲ್ಲಿ ದಿಟ್ಟ ಕ್ರಮವೊಂದನ್ನು ಕೈಗೊಂಡಿದ್ದಾರೆ. ಬಿಬಿಎಂಪಿಯ ವ್ಯಾಪ್ತಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ಜಲಮಂಡಳಿಗೆ ಹಸ್ತಾಂತರವಾಗಲಿದೆ.
ಬೆಂಗಳೂರು ನಗರದಲ್ಲಿ 600ಕ್ಕೂ ಅಧಿಕ ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇದರ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದೆ. ಆದರೆ ಬೇಸಿಗೆ ಹಿನ್ನಲೆಯಲ್ಲಿ ಈ ಘಟಕಗಳ ನಿರ್ವಹಣೆ ಹೊಣೆಯನ್ನು ಬೆಂಗಳೂರು ಜಲಮಂಡಳಿಗೆ ಹಸ್ತಾಂತರಿಸಲು ಡಿ. ಕೆ. ಶಿವಕುಮಾರ್ ಟಿಪ್ಪಣಿ ಮೂಲಕ ಸೂಚನೆ ನೀಡಿದ್ದಾರೆ.

ಟಿಪ್ಪಣಿಯ ವಿವರಗಳು: ಈ ಕುರಿತು ಡಿ. ಕೆ. ಶಿವಕುಮಾರ್ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ನಗರಾಭಿವೃದ್ಧಿ ಇಲಾಖೆ ಇವರಿಗೆ ಟಿಪ್ಪಣಿ ಕಳಿಸಿದ್ದಾರೆ. ಬೆಂಗಳೂರು ನಗರದ ನಾಗರೀಕರಿಗೆ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸುವ ಜವಾಬ್ದಾರಿ ಬೆಂಗಳೂರು ಜಲಮಂಡಳಿ ನಿರ್ವಹಣೆ ಮಾಡುತ್ತಿದೆ. ಪ್ರಸ್ತುತ ಶುದ್ಧ ಕುಡಿಯುವ ನೀರಿನ ಘಟಕ (ಆರ್ ಓ ಪ್ಲಾಂಟ್‌ಗಳ) ನಿರ್ವಹಣೆಯನ್ನು ಬಿಬಿಎಂಪಿ ಮಾಡುತ್ತಿದೆ ಎಂದು ಹೇಳಿದ್ದಾರೆ.
ಒಂದು ವೇಳೆ ಕೊಳವೆ ಬಾವಿಗಳು ಬತ್ತಿ ಹೋದಲ್ಲಿ ಆರ್ ಓ ಘಟಕಕ್ಕೆ ಬೇಕಾದ ನೀರನ್ನು ಜಲಮಂಡಳಿಯೇ ಪೂರೈಕೆ ಮಾಡಬೇಕು. ಆ ಸಮಯದಲ್ಲಿ ಸಮನ್ವಯದ ಕೊರತೆ ಉಂಟಾಗಿ ನಾಗರೀಕರಿಗೆ ಆಗುವ ತೊಂದರೆ ತಪ್ಪಿಸಲು ಹಾಗೂ ಬೆಂಗಳೂರು ನಗರದ ನೀರು ಸರಬರಾಜಿನ ನಿರ್ವಹಣೆ ಮಾಡುತ್ತಿರುವ ಬೆಂಗಳೂರು ಜಲಮಂಡಳಿಯವರೇ ಆರ್ ಓ ಘಟಕ ನಿರ್ವಹಣೆ ಮಾಡುವುದು ಸೂಕ್ತವಾಗಿದೆ.
ಈ ಹಿನ್ನಲೆಯಲ್ಲಿ ಕೂಡಲೇ ಆರ್ ಓ ಪ್ಲಾಂಟ್‌ಗಳ ನಿರ್ವಹಣೆಯ ಸುಪರ್ದಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಬೆಂಗಳೂರು ಜಲಮಂಡಳಿಗೆ ಹಸ್ತಾಂತರಿಸಲು ಸೂಕ್ತ ಆದೇಶವನ್ನು ಹೊರಡಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಲು ಸೂಚಿಸಿದೆ ಎಂದು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ಬೆಂಗಳೂರು ನಗರ ಪ್ರದಕ್ಷಿಣೆ ಮಾಡಿದ್ದ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಕೆಲವು ಆರ್ ಓ ಪ್ಲಾಂಟ್‌ಗಳು ಸರಿಯಾಗಿ ಕಾರ್ಯ ನಿರ್ವಹಣೆ ಮಾಡದಿರುವುದನ್ನು ಗಮನಿಸಿದ್ದರು. ಪ್ಲಾಂಟ್ ಕಾರ್ಯ ನಿರ್ವಹಣೆ ಕುರಿತು ವರದಿ ನೀಡುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ವರದಿ ಆಧರಿಸಿ ಈಗ ಪ್ಲಾಂಟ್‌ಗಳ ಉಸ್ತುವಾರಿಯನ್ನು ಜಲಮಂಡಳಿಗೆ ವಹಿಸಲು ಅವರು ತೀರ್ಮಾನಿಸಿ, ಟಿಪ್ಪಣಿ ಹೊರಡಿಸಿದ್ದಾರೆ.
ಬಿಬಿಎಂಪಿಯ 8 ವಲಯಗಳಲ್ಲಿ ಎಷ್ಟು ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಅವುಗಳಲ್ಲಿ ಎಷ್ಟು ಸ್ಥಗಿತವಾಗಿವೆ, ಎಷ್ಟು ದುರಸ್ತಿಯಾಗಬೇಕಿದೆ ಎಂದು ವಿವರವಾದ ವರದಿಯನ್ನು ನೀಡಲಾಗಿತ್ತು. ಈಗ ಬೇಸಿಗೆಯೂ ಆರಂಭವಾಗಿರುವ ಕಾರಣ ಇವುಗಳ ನಿರ್ವಹಣೆಯನ್ನು ಜಲಮಂಡಳಿಗೆ ಹಸ್ತಾಂತರ ಮಾಡಲಾಗುತ್ತದೆ.
ಬಿಬಿಎಂಪಿ ಶುದ್ಧ ಕುಡಿಯುವ ನೀರಿನ ಘಟಕಗಳ ನಿರ್ವಹಣೆಗೆ ಟೆಂಡರ್ ಕರೆದು ಅದರ ನಿರ್ವಹಣೆ ಖಾಸಗಿ ಅವರಿಗೆ ನೀಡಿದೆ. ನಗರದ ಕೆಲವು ಘಟಕಗಳು ದಿನದ 24 ಗಂಟೆಯೂ ಕಾರ್ಯ ನಿರ್ವಹಣೆ ಮಾಡುತ್ತದೆ. 5 ರೂ. ನಾಣ್ಯ ಹಾಕಿ ಜನರು ನೀರನ್ನು ತೆಗೆದುಕೊಂಡು ಹೋಗುತ್ತಾರೆ. ಖಾಸಗಿಯಾಗಿ ನೀರು ಪೂರೈಕೆ ಮಾಡುವ ಅಂಗಡಿಗಳಿಗೆ ಹೋಲಿಕೆ ಮಾಡಿದರೆ ಇದರ ದರ ಕಡಿಮೆ ಇದೆ.












Click it and Unblock the Notifications