ಸ್ಥಳ ಪರಿಶೀಲನೆ, ಸಿಎಂ ಜೊತೆ ಸಭೆ ಬಳಿಕ ಮಹದಾಯಿ ಬಗ್ಗೆ ಮುಂದಿನ ನಡೆ: ಡಿಕೆಶಿ
ಬೆಂಗಳೂರು, ಆಗಸ್ಟ್ 28: ಮಹದಾಯಿ ನದಿಪಾತ್ರದ ಸ್ಥಳ ಪರಿಶೀಲನೆ ನಡೆಸಿ ಆ ನಂತರ ಮುಂದಿನ ನಡೆಯ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀರಾವರಿ ತಜ್ಞರು, ಕಾನೂನು ತಜ್ಞರ ಜೊತೆ ಮಹದಾಯಿ ನದಿಪಾತ್ರದ ಸ್ಥಳ ಪರಿಶೀಲನೆ ನಡೆಸಿ ಆ ನಂತರ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.
ಮಹದಾಯಿ ವಿಚಾರದಲ್ಲಿ ಎಲ್ಲ ರಾಜಕೀಯ ನಾಯಕರುಗಳು ಒಗ್ಗಟ್ಟಾಗಬೇಕು ಎಂದು ಮನವಿ ಮಾಡಿದ ಅವರು, ಜಲ, ನೆಲ, ಭಾಷೆಯ ವಿಚಾರದಲ್ಲಿ ಸರ್ಕಾರವು ನಿಷ್ಠುರವಾಗಿದ್ದು, ಮಹದಾಯಿಗಾಗಿ ಕೋರ್ಟ್ ಮೆಟ್ಟಿಲೇರಲು ಸಿದ್ದವಿದೆ ಎಂದು ಹೇಳಿದರು.

ರಾಜಕೀಯ ಬೇಡ
ವಿರೋಧ ಪಕ್ಷಗಳು ಸಹ ಈ ವಿಷಯದಲ್ಲಿ ರಾಜಕೀಯ ಮಾಡುವುದು ಬೇಡ. ಮಹದಾಯಿ ವಿಚಾರದಲ್ಲಿ ಯಾರೂ ಕೂಡ ರಾಜಕೀಯ ಮಾಡುವುದು ಬೇಡ. ಎಲ್ಲರು ಒಟ್ಟಾಗಿ ಹೋರಾಟವನ್ನು ಮುಂದುವರೆಸೋಣ ಎಂದು ವಿರೋಧ ಪಕ್ಷಗಳಿಗೆ ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.

ರಾಜ್ಯಕ್ಕೆ ಅನ್ಯಾಯವಾಗಿದೆ: ಡಿಕೆಎಸ್
ಇತ್ತೀಚೆಗಷ್ಟೆ ಬಂದ ಮಹದಾಯಿ ನ್ಯಾಯಾಧಿಕರಣದ ಐತೀರ್ಪಿನ ಅನ್ವಯ, ಕರ್ನಾಟಕ್ಕೆ 13.42 ಟಿಎಂಸಿ ಅಡಿ ನೀರು ಲಭಿಸಿದೆ ಆದರೆ ರಾಜ್ಯ ಸರ್ಕಾರವು 34 ಟಿಎಂಸಿ ನೀರಿನ ಬೇಡಿಕೆ ಇಟ್ಟಿತ್ತು. ನ್ಯಾಯಾಧಿಕರಣ ತೀರ್ಪಿನಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಡಿಕೆ.ಶಿವಕುಮಾರ್ ಅಭಿಪ್ರಾಯಪಟ್ಟಿದ್ದರು.

ಕೊಡಗಿನ ಪ್ರವಾಹದಿಂದ ಸಭೆ ಮುಂದಕ್ಕೆ
ತೀರ್ಪಿನ ಕುರಿತು ಈ ಮುಂಚೆಯೇ ಆಗಬೇಕಿದ್ದ ಮಹತ್ವದ ಸಭೆ ಕರಾವಳಿ ಜಿಲ್ಲೆಗಳಲ್ಲಿ ಉಂಟಾದ ಮಳೆ ಹಾಗೂ ಕೊಡಗಿನ ಪ್ರವಾಹದ ಕಾರಣದಿಂದಾಗಿ ಮುಂದಕ್ಕೆ ಹೋಗಿತ್ತು. ಇದೀಗ ಸ್ಥಳ ಪರಿಶೀಲನೆ ನಂತರ ಸಿಎಂ ಜೊತೆ ಚರ್ಚೆ ನಡೆಸಿ ಮುಂದಿನ ನಡೆ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದಾಗಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುಪ್ರೀಂ ಮೆಟ್ಟಿಲೇರಲಿದೆ ಗೋವಾ
ಗೋವಾ ಸಹ ಈಗಾಗಲೇ ನ್ಯಾಯಾಧಿಕರಣ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರುವುದಾಗಿ ಹೇಳಿತ್ತು. ಡಿ.ಕೆ.ಶಿವಕುಮಾರ್ ಸಹ ಈ ಮುಂಚೆ ಇದೇ ಮಾತನ್ನು ಹೇಳಿದ್ದರು. ಸಿಎಂ ಜೊತೆ ಸಭೆ ಬಳಿಕ ಇದೇ ನಿರ್ಧಾರವನ್ನು ಮಾಡಲಿದ್ದಾರೆ.












Click it and Unblock the Notifications